ಮಂಗಳವಾರ, ಏಪ್ರಿಲ್ 7, 2020
19 °C
ಮೈಸೂರು, ಇಲವಾಲ, ನಂಜನಗೂಡು, ಹಂಪಾಪುರ ಭಾಗಗಳಲ್ಲಿ ದುಷ್ಕೃತ್ಯ

ಪ್ರತ್ಯೇಕ ಪ್ರಕರಣ; ಜಿಲ್ಲೆಯಲ್ಲಿ ನಾಲ್ವರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಬಿಜೆಪಿ ಸ್ಲಂ ಮೋರ್ಚಾ ಘಟಕದ ಮಾಜಿ ಅಧ್ಯಕ್ಷ ಎಸ್.ಆನಂದ್ ಅವರನ್ನು ಇಲ್ಲಿನ ಕುವೆಂಪುನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶುಕ್ರವಾರ ನಸುಕಿನಲ್ಲಿ ಕೊಲೆ ಮಾಡಿದ್ದರೆ, ಇಲವಾಲದಲ್ಲಿ ಮಮತಾ ಎಂಬುವವರು ಅವರ ಪತಿಯಿಂದಲೇ ಹತ್ಯೆಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ ಕಲ್ಕುಂದ ಗ್ರಾಮದ ಬಳಿ ಮನೋಜ್‍ಕುಮಾರ್ (20) ಎಂಬುವವರನ್ನು ಕೊಲೆಗೈದು, ನಾಲೆಗೆ ಎಸೆಯಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರ ಮಾರ್ಗದಲ್ಲಿ ಪೆಟ್ರೋಲ್‌ನಿಂದ ವ್ಯಕ್ತಿಯೊಬ್ಬರನ್ನು ಸುಡಲಾಗಿದೆ.

ಆನಂದ್ ಅವರು ತಮ್ಮ ಜನ್ಮದಿನದ ಔತಣಕೂಟವನ್ನು ಉತ್ತನಹಳ್ಳಿಯ ಸಮುದಾಯಭವನವೊಂದರಲ್ಲಿ ಮುಗಿಸಿಕೊಂಡು ವಾಪಸ್ ಅಪಾರ್ಟ್‌ಮೆಂಟಿಗೆ ಬಂದಿದ್ದಾರೆ. ಇಲ್ಲಿ ಸ್ನೇಹಿತರ ಜತೆ ಮದ್ಯ ಸೇವಿಸಿದ್ದಾರೆ. ಈ ಅವಧಿಯಲ್ಲಿ ಇವರನ್ನು ಮದ್ಯದ ಬಾಟಲಿಗಳಿಂದ ಹೊಡೆದು, ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಜನತಾನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಇವರು ಆರೋಪಿಯಾಗಿದ್ದರು. ನಂತರ, ಪ್ರಕರಣ ವಜಾಗೊಂಡಿತ್ತು. ಇವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಹೊಸಕಾಮನಹಳ್ಳಿಯಲ್ಲಿ ಮಹಿಳೆ ಕೊಲೆ

ಇಲ್ಲಿನ ಇಲವಾಲ ಸಮೀಪದ ಹೊಸಕಾಮನಹಳ್ಳಿಯ ನಿವಾಸಿ ಮಮತಾ (25) ಎಂಬುವವರನ್ನು ಶುಕ್ರವಾರ ಬೆಳಿಗ್ಗೆ ಮಚ್ಚಿನಿಂದ ಕೊಲೆ ಮಾಡಲಾಗಿದೆ. ಕೊಲೆ ಆರೋಪಿ ಇವರ ಪತಿ ನಾಗೇಶ್ (35) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣದ ಚೀರನಹಳ್ಳಿಯ ಮಮತಾ ಅವರನ್ನು 10 ವರ್ಷದ ಹಿಂದೆಯೇ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನಾಗೇಶ್‌ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಪತಿ ಮತ್ತು ಪತ್ನಿ ನಡುವೆ ವೈಮನಸ್ಯ ಇತ್ತು. ಹಾಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು. ಬೆಳಿಗ್ಗೆ ಪತ್ನಿಯ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ನಾಗೇಶ್ ಪರಾರಿಯಾಗಿದ್ದ. ಸದ್ಯ, ಈತನನ್ನು ಬಂಧಿಸಲಾಗಿದೆ. ನಾಗೇಶ್‌ ಮೊದಲ ಪತ್ನಿ ನೇಣು ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಯೋಗಾನಂಜಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಕಲ್ಕುಂದ ಗ್ರಾಮದ ಬಳಿ ಕೊಲೆ

ನಂಜನಗೂಡು: ತಾಲ್ಲೂಕಿನ ಕಲ್ಕುಂದ ಗ್ರಾಮದ ಬಳಿ ತಗಡೂರು ಗ್ರಾಮದ ಮನೋಜ್‍ಕುಮಾರ್ (20) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಲೆಗೈದು, ರಾಮಚಂದ್ರ ನಾಲೆಗೆ ಎಸೆಯಲಾಗಿದೆ. ತಗಡೂರು ಗ್ರಾಮದ ಮನೋಜ್ ಮತ್ತು ವಿಜಯ್ ಗುರುವಾರ ರಾತ್ರಿ ಕಲ್ಕುಂದ ಗ್ರಾಮದಿಂದ ಜಿ.ಮರಹಳ್ಳಿಗೆ ಹೋಗುವ ಅಡ್ಡರಸ್ತೆಯ ಕಾಲುವೆ ದಡದಲ್ಲಿ ಮದ್ಯ ಸೇವಿಸುತ್ತಾ ಕುಳಿತಿದ್ದಾಗ ಬೈಕ್‌ನಲ್ಲಿ ಬಂದ ತಮಿಳುನಾಡಿನ ಇಬ್ಬರು ಯುವಕರು ವಿಶ್ವಾಸದಿಂದ ಮಾತನಾಡಿ, ಸ್ನೇಹಿತರಾಗೋಣ ಎಂದು ಹೇಳಿ ಎಲ್ಲರೂ ಸೇರಿ ಒಟ್ಟಾಗಿ ಮದ್ಯ ಕುಡಿದಿದ್ದಾರೆ. ಕುಡಿತದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು, ಮನೋಜ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ತಗಡೂರು ರಾಮಚಂದ್ರ ನಾಲೆಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆಟ್ರೋಲ್‌ನಿಂದ ವ್ಯಕ್ತಿ ದಹನ

ಹಂಪಾಪುರ: ಇಲ್ಲಿಗೆ ಸಮೀಪದ ಚಾಮಲಾಪುರ ಮಾರ್ಗದಲ್ಲಿ ಪೆಟ್ರೋಲ್‌ನಿಂದ ವ್ಯಕ್ತಿಯೊಬ್ಬರನ್ನು ದಹಿಸಿ, ಪೊದೆಯೊಳಗೆ ಎಸೆಯಲಾಗಿದೆ. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಕಾಂಗ್ರೆಸ್ ಮುಖಂಡ ಅಣ್ಣಯ್ಯ ಮೇಲೆ ಹಲ್ಲೆ
ಮತ್ತೊಂದು‌ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಅಣ್ಣಯ್ಯ ಅವರ ಮೇಲೆ ಇಲ್ಲಿನ ಯರಗನಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಗಾಯಗೊಂಡ ಇವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪತ್ನಿ ರಜನಿ ಅಣ್ಣಯ್ಯ ಪಾಲಿಕೆ ಸದಸ್ಯರಾಗಿದ್ದರು. ಹಲ್ಲೆ ನಡೆಸಿದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)