ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಈದ್‌ ಮಿಲಾದ್ ಆಚರಣೆ

Last Updated 21 ನವೆಂಬರ್ 2018, 19:55 IST
ಅಕ್ಷರ ಗಾತ್ರ

ಮೈಸೂರು: ಪ್ರವಾದಿ ಮಹಮ್ಮದ್‌ ಅವರ ಜನ್ಮದಿನಾಚರಣೆ ಪ್ರಯುಕ್ತ ಮುಸ್ಲಿಮರು ನಗರದಲ್ಲಿ ಬುಧವಾರ ಈದ್‌–ಮಿಲಾದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮೊಹಲ್ಲಾ, ಬಡಾವಣೆ ಹಾಗೂ ಬೀದಿಗಳಲ್ಲಿ ಹಬ್ಬದ ಸಡಗರ ಕಂಡುಬಂತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಹೊಸ ಉಡುಪುಗಳನ್ನು ಧರಿಸಿದ್ದ ಮಕ್ಕಳು, ಹಿರಿಯರು ಪರಸ್ಪರ ಶುಭಾಶಯ ಹಂಚಿಕೊಂಡರು.

ಹಬ್ಬದ ಅಂಗವಾಗಿ ವೈಭವದ ಮೆರವಣಿಗೆ ನಡೆಯಿತು. ಸೆಂಟ್ರಲ್‌ ಮಿಲಾದ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಅಶೋಕ ರಸ್ತೆಯ ಮಿಲಾದ್‌ ಬಾಗ್‌ನಲ್ಲಿ ಆರಂಭವಾಯಿತು. ಪುಲಿಕೇಶಿ ರಸ್ತೆ, ಸಾಡೇ ರಸ್ತೆ ಮೂಲಕ ಮಿಷನ್‌ ಆಸ್ಪತ್ರೆ ವೃತ್ತದವರೆಗೆ ಸಾಗಿದ ಮೆರವಣಿಗೆ ಮತ್ತೆ ಮಿಲಾದ್ ಬಾಗ್‌ನಲ್ಲಿ ಕೊನೆಗೊಂಡಿತು.

ಮುಸ್ಲಿಂ ಸಮುದಾಯದ ಮುಖಂಡರು, ಮಕ್ಕಳು, ಯುವಕರು ಸಡಗರದಿಂದ ಪಾಲ್ಗೊಂಡರು. ಮೆರವಣಿಗೆ ಮುಂಭಾಗದಲ್ಲಿ ಪುಟ್ಟ ಮಕ್ಕಳು ಬಾವುಟಗಳನ್ನು ಹಿಡಿದು ಸಾಗಿದರು. ಹೆಣ್ಣುಮಕ್ಕಳು ಬಣ್ಣ ಬಣ್ಣದ ಉಡುಪು ಧರಿಸಿದ್ದರೆ, ಗಂಡು ಮಕ್ಕಳು ಶ್ವೇತವಸ್ತ್ರ ತೊಟ್ಟಿದ್ದರು. ಹಸಿರು, ಬಿಳಿ ಬಣ್ಣದ ಟೋಪಿ ಅಲ್ಲದೆ, ಕೆಲವರು ಹಸಿರು ಬಣ್ಣದ ಮುಂಡಾಸು ಧರಿಸಿದ್ದರು.

ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಅಲ್ಲಲ್ಲಿ ತಂಪು ಪಾನೀಯ, ಚಾಕಲೇಟ್‌ ವಿತರಿಸಲಾಯಿತು. ಮಹಿಳೆಯರು ರಸ್ತೆ ಬದಿ ಹಾಗೂ ಕಟ್ಟಡಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಮಕ್ಕಾ ಮತ್ತು ಮದೀನಾದ ಮಸೀದಿಗಳ ಸ್ತಬ್ಧ ಚಿತ್ರಗಳು ಮತ್ತು ಪಲ್ಲಕ್ಕಿ­ಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.

ಸಾಡೇ ರಸ್ತೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಈ ರಸ್ತೆಯನ್ನು ಕೂಡುವ ಸಣ್ಣ ಬೀದಿಗಳಲ್ಲಿ ಕಮಾನುಗಳ ಇಟ್ಟು ಸಿಂಗರಿಸಲಾಗಿತ್ತು.

ಸೆಂಟ್ರಲ್‌ ಮಿಲಾದ್‌ ಸಮಿತಿಯಿಂದ ಸಂಜೆ ಮಿಲಾದ್‌ ಬಾಗ್‌ನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಯಿತು. ಸರ್ಖಾಜಿ ಮಹಮ್ಮದ್‌ ಉಸ್ಮಾನ್ ಷರೀಫ್ ಅಧ್ಯಕ್ಷತೆ ವಹಿಸಿದ್ದರು. ಪ್ರವಾದಿ ಮಹಮ್ಮದ್‌ ಅವರು ಜೀವನದಲ್ಲಿ ಸಹೋದರತೆ, ಸೌಹಾರ್ದತೆಯ ಸಂದೇಶ ಸಾರಿದ್ದರು. ಅದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆನೀಡಿದರು.‌

ನಗರದ ವಿವಿಧ ಮಸೀದಿಗಳ ಧರ್ಮ ಗುರುಗಳು ಪ್ರವಾದಿ ಅವರ ಜೀವನ ಹಾಗೂ ಸಂದೇಶದ ಬಗ್ಗೆ ತಿಳಿಸಿದರು. ಮಿಲಾದ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್‌ ಅಜೀಜ್‌ ಚಾಂದ್‌ ಸಾಹೆಬ್, ಕಾರ್ಯದರ್ಶಿ ಎಸ್‌.ಮೊಯಿನುದ್ದೀನ್‌ ಪಾಷಾ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT