ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮುಲ್ ನೇಮಕಾತಿ ಅಕ್ರಮ: ಹೋರಾಟಗಾರರಿಗೆ ಮಧ್ಯವರ್ತಿಗಳಿಂದ ಬೆದರಿಕೆ ಆರೋಪ

ಮೈಮುಲ್‌ನಲ್ಲಿ ನೇಮಕಾತಿಯ ಅಕ್ರಮ ಪ್ರಕ್ರಿಯೆ; ನ್ಯಾಯಕ್ಕೆ ಆಗ್ರಹ
Last Updated 26 ಜೂನ್ 2020, 8:29 IST
ಅಕ್ಷರ ಗಾತ್ರ

ಮೈಸೂರು: ‘ಮೈಮುಲ್‌ನ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ನನಗೆ ಹಲವು ಬೆದರಿಕೆ ಬಂದಿವೆ. ಆಮಿಷಗಳನ್ನು ಒಡ್ಡುತ್ತಿದ್ದಾರೆ. ಆದರೆ ಇವ್ಯಾವಕ್ಕೂ ನಾನು ಬಗ್ಗಲ್ಲ, ಮಣಿಯಲ್ಲ’ ಎಂದು ಉದ್ಯೋಗಾಕಾಂಕ್ಷಿ ಚೈತ್ರಾ ತಿಳಿಸಿದರು.

‘ಒಕ್ಕೂಟದ ಪರವಾಗಿ ಹಲವು ಮಧ್ಯವರ್ತಿಗಳು ಹೋರಾಟದಿಂದ ಹಿಂದೆ ಸರಿಯುವಂತೆ ಒತ್ತಡ ಹಾಕುತ್ತಿದ್ದಾರೆ. ಪ್ರಕರಣ ಹೈಕೋರ್ಟ್‌ನಲ್ಲಿದೆ. ಇದೇ 29ರಂದು ವಾದ–ವಿವಾದವೂ ನಡೆಯಲಿದೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನೇಮಕಾತಿಗೆ ಸಂಬಂಧಿಸಿದಂತೆ ಯಾವೊಂದು ಚಟುವಟಿಕೆ ನಡೆಸಬಾರದು ಎಂದು ಹೈಕೋರ್ಟ್‌ ತನ್ನ ಮಧ್ಯಂತರ ತೀರ್ಪಿನಲ್ಲಿ ಮೈಮುಲ್‌ಗೆ ಆದೇಶಿಸಿದೆ. ಆದರೂ ಇದೀಗ ಪರೀಕ್ಷೆ ನಡೆಸಿದ ಏಳು ತಿಂಗಳ ಬಳಿಕ ವೆಬ್‌ಸೈಟ್‌ನಲ್ಲಿ ಓಎಂಆರ್ ಶೀಟ್ ಅಪ್‌ಲೋಡ್ ಮಾಡಿದ್ದಾರೆ. ಮೀಸಲಾತಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲವರಿಗೆ ಹೊಸದಾಗಿ ನೇಮಕಾತಿ ಸಂದರ್ಶನ ಕಳುಹಿಸಿದ್ದಾರೆ’ ಎಂದು ಚೈತ್ರಾ ದೂರಿದರು.

‘ಇಲ್ಲಿಯ ತನಕ ಕೀ ಉತ್ತರ ಪ್ರಕಟಿಸಿಲ್ಲ. ಸಂದರ್ಶನಕ್ಕೆ ನಿಗದಿಪಡಿಸಿದ ಅಂಕಗಳನ್ನು ಬಹಿರಂಗಗೊಳಿಸಿಲ್ಲ. ತಾತ್ಕಾಲಿಕ ಪಟ್ಟಿಯೂ ಪ್ರಕಟಗೊಂಡಿಲ್ಲ. ಇದರ ಜೊತೆಗೆ ನ್ಯಾಯಾಂಗ ನಿಂದನೆಯೂ ನಡೆದಿದೆ. ಈ ಎಲ್ಲ ಅಂಶಗಳನ್ನು ಹೈಕೋರ್ಟ್‌ ಗಮನಕ್ಕೆ ತರಲಿದ್ದೇವೆ’ ಎಂದು ಅವರು ತಿಳಿಸಿದರು.

ಮತ್ತೊಬ್ಬ ಉದ್ಯೋಗಾಕಾಂಕ್ಷಿ ಶಂಕರ್ ಮಾತನಾಡಿ, ‘ಪರೀಕ್ಷಾ ಕೊಠಡಿಯಲ್ಲೇ ಓಎಂಆರ್ ಶೀಟ್ ಕೇಳಿದಾಗ ಮೇಲ್ವಿಚಾರಕರು ಕೊಟ್ಟಿರಲಿಲ್ಲ. ಇದೀಗ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಪರೀಕ್ಷೆ ಬರೆದ 18 ಸಾವಿರ ಅಭ್ಯರ್ಥಿಗಳಿಗೆ ಮೈಮುಲ್‌ನ ನೇಮಕಾತಿ ಸಮಿತಿ ಅನ್ಯಾಯ ಎಸಗುತ್ತಿದೆ’ ಎಂದು ದೂರಿದರು.

‘ಹೈಕೋರ್ಟ್‌ನ ತಡೆಯಾಜ್ಞೆ ನಡುವೆಯೇ ನೇಮಕಾತಿ ಪ್ರಕ್ರಿಯೆಯ ಚಟುವಟಿಕೆ ನಡೆದಿವೆ. ಸರ್ಕಾರ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT