ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಉಪಚುನಾವಣೆ ನಾಳೆ

36ನೇ ವಾರ್ಡ್‌: ಕೋವಿಡ್‌ ಮಾರ್ಗಸೂಚಿಯಂತೆ ಮತದಾನಕ್ಕೆ ಸಕಲ ಸಿದ್ಧತೆ
Last Updated 2 ಸೆಪ್ಟೆಂಬರ್ 2021, 2:39 IST
ಅಕ್ಷರ ಗಾತ್ರ

ಮೈಸೂರು: ಮಹಾನಗರ ಪಾಲಿಕೆಯ 36ನೇ ವಾರ್ಡ್‌ ಉಪಚುನಾವಣೆ ಶುಕ್ರವಾರ ನಡೆಯಲಿದ್ದು, ಕೋವಿಡ್‌ ಮಾರ್ಗಸೂಚಿ ಅನುಸಾರ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಸೆ.3 ರಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, 6 ರಂದು ಬೆಳಿಗ್ಗೆ 8 ರಿಂದ ಮತಎಣಿಕೆ ನಡೆಯಲಿದೆ. ಮಸ್ಟರಿಂಗ್‌, ಡಿ–ಮಸ್ಟರಿಂಗ್‌ ಮತ್ತು ಮತ ಎಣಿಕೆಗೆ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಮಹಾರಾಜ ಸಂಸ್ಕೃತಿ ಪಾಠ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

2021ರ ಜ.1 ರಂದು ಪ್ರಕಟವಾಗಿರುವ ವಿಧಾನಸಭಾ ಮತದಾರರ ವಿವರವನ್ನು ಆಧರಿಸಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.

ಮತಗಟ್ಟೆಗಳ ವಿವರ

ಶಿಕ್ಷಕರ ಕಾಲೊನಿಯಲ್ಲಿರುವ ಮೌಲಾನಾ ಆಜಾದ್‌ ರೆಸಿಡೆನ್ಷಿಯಲ್‌ ಬಾಲಕಿಯರ ಶಾಲೆ ಮತ್ತು ಯರಗನಹಳ್ಳಿ ಹೊಸ ಬಡಾವಣೆಯ ವಿಜಯ ಕಾನ್ವೆಂಟ್ ಶಾಲೆಯಲ್ಲಿ ತಲಾ ಮೂರು ಮತಗಟ್ಟೆ ಹಾಗೂ ಯರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ಸೇರಿದಂತೆ ಒಟ್ಟು 11 ಮತಗಟ್ಟೆಗಳನ್ನು ಸ್ಥಾ‍ಪಿಸಲಾಗಿದೆ.

ಚುನಾವಣೆ ದಿನ ಬೆಳಿಗ್ಗೆ 6 ರಿಂದ ರಾತ್ರಿ 8ರ ವರೆಗೆ ಮತಗಟ್ಟೆಗಳ ಸುತ್ತಲೂ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಆದೇಶ ಹೊರಡಿಸಿದ್ದಾರೆ.

ಗುರುವಾರ ಬೆಳಿಗ್ಗೆ 7 ರಿಂದ ಶುಕ್ರವಾರ ಮಧ್ಯರಾತ್ರಿಯವರೆಗೆ ವಾರ್ಡ್‌ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್‌ ಗಡಿ
ಯಿಂದ 3 ಕಿ.ಮೀ. ಪರಿಧಿಯಲ್ಲಿ ಮದ್ಯಪಾನ, ಮದ್ಯಮಾರಾಟ ನಿಷೇಧಿಸಲಾಗಿದೆ.

‘ಮತಗಟ್ಟೆಯ ಒಳಗೆ ಮೊಬೈಲ್‌ ಫೋನ್‌ ಹಾಗೂ ಕ್ಯಾಮೆರಾ ಬಳಸಿ ಫೋಟೊ ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಮತಗಟ್ಟೆಗಳಿಗೆ ಮೊಬೈಲ್‌ ಫೋನ್‌, ಕ್ಯಾಮೆರಾ ತೆಗೆದುಕೊಂಡು ಹೋಗುವಂತಿಲ್ಲ’ ಎಂದು ಆಯೋಗ ಸೂಚಿಸಿದೆ.

ಮನೆಮನೆ ಪ್ರಚಾರ

ವಾರ್ಡ್‌ನಲ್ಲಿ ಬಹಿರಂಗ ಪ್ರಚಾರ ಬುಧವಾರ ಬೆಳಿಗ್ಗೆ 7ಕ್ಕೆ ಕೊನೆಗೊಂಡಿದ್ದು, ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿರುವುದರಿಂದ ಉಪಚುನಾವಣೆ ನಡೆಯುತ್ತಿದೆ.

ಸೋಂಕಿತರಿಗೂ ಅವಕಾಶ

ಕೋವಿಡ್‌ ಪಾಸಿಟಿವ್‌ ಇರುವವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಥವರು ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ (ಸಂಜೆ 5 ರಿಂದ 6ರ ವರೆಗೆ) ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಬಂದು ಮತ ಚಲಾಯಿಸಬಹುದು.

‘ಮತದಾರರು ಮತದಾನ ಕೇಂದ್ರಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಮತದಾನಕ್ಕೆ ಸರತಿಯ ಸಾಲಿನಲ್ಲಿ ನಿಲ್ಲುವಾಗ ಅಂತರ ಕಾಯ್ದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT