ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪದ ನಿರೀಕ್ಷೆಯಲ್ಲಿ ‘ಮಹಾರಾಜರ ಮನು ವನ’

ಮೈಸೂರು ರಾಜ ವಂಶಸ್ಥರ ಒಡೆತನ; ಪವಿತ್ರ ಯಾತ್ರಾ ಸ್ಥಳವಾಗಲಿದೆಯೇ ರಾಜರ ಸಮಾಧಿ ತಾಣ?
Last Updated 21 ಜೂನ್ 2022, 4:06 IST
ಅಕ್ಷರ ಗಾತ್ರ

ಮೈಸೂರು: ಕಣ್ಮನ ಸೆಳೆಯುವ ರಮ್ಯ ತಾಣಗಳನ್ನು ಒಡಲಲ್ಲಿಟ್ಟುಕೊಂಡಿರುವ ನಗರದ ಸೊಬಗಿನ ಸಿರಿಗೆ, ಪವಿತ್ರ ಯಾತ್ರಾ ಸ್ಥಳವಾಗಿ ‘ಮನು ವನ’ವೂ ಸೇರ್ಪಡೆಗೊಳ್ಳಬೇಕು ಎಂಬ ದಶಕಗಳ ಕನಸು ಇನ್ನೂ ನನಸಾಗಿಲ್ಲ.

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿ ಹಲವು ಜನಪರ ಚಿಂತನೆ, ಅಭಿವೃದ್ಧಿ ಕೆಲಸದ ಮೂಲಕ ವಿಶಿಷ್ಟ ಛಾಪು ಮೂಡಿಸಿರುವ ಮೈಸೂರು ಮಹಾರಾಜರ ಬಗ್ಗೆ ವಿಶೇಷ ಅಭಿಮಾನ, ಗೌರವವನ್ನು ಹೊಂದಿರುವ ಜನರ ಕನಸಿದು. ಇದಕ್ಕೆ ಚರಿತ್ರೆಯ ಅಧ್ಯಯನಕಾರರು, ಸಂಶೋಧನಾ ವಿದ್ಯಾರ್ಥಿಗಳು, ಪ್ರವಾಸಿಗರು ಸಹ ಹಿಂದಿನಿಂದಲೂ ದನಿಗೂಡಿಸಿದ್ದಾರೆ.

ಮೈಸೂರು–ನಂಜನಗೂಡು ಹೆದ್ದಾರಿ ಬದಿಯಲ್ಲೇ ‘ಮನು ವನ’ ಇದೆ. ಇಂದಿಗೂ ರಾಜ ವಂಶಸ್ಥರ ಒಡೆತನ ಇದರದ್ದು. ಇಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಯದು ವಂಶದ ರಾಜ ಪರಿವಾರದವರ ಸಮಾಧಿಗಳಿವೆ. ಮಹಾರಾಜರು, ಅವರ ಧರ್ಮ ಪತ್ನಿಯರು, ಉಪ ಪತ್ನಿಯರು, ಸಹೋದರಿಯರು, ಕುಟುಂಬ ವರ್ಗದವರ ಸಮಾಧಿಗಳಿವೆ.

‘ಮನು ವನ’ವನ್ನು ಪವಿತ್ರ ಯಾತ್ರಾ ಸ್ಥಳವಾಗಿ ಅಭಿವೃದ್ಧಿಗೊಳಿಸುವ ಆಲೋಚನೆ ರಾಜ ವಂಶಸ್ಥರದ್ದು. 2019ರಲ್ಲಿ ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ತಮ್ಮ ಕನಸನ್ನು ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದ್ದರು. ‘ಕೆಲ ಸಮಾಧಿಗಳನ್ನು ಜೀರ್ಣೋದ್ಧಾರಗೊಳಿಸಬೇಕಿದೆ. ನಾವೇ ಈ ಕೆಲಸ ಮಾಡುತ್ತೇವೆ. ನಮ್ಮ ಸಂಪ್ರದಾಯಕ್ಕೆ ಕೊಂಚವೂ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆ. ಇಷ್ಟಪಟ್ಟು ಭೇಟಿ ನೀಡುವವರಿಗೆ ಅವಕಾಶವನ್ನು ನೀಡುತ್ತೇವೆ’ ಎಂದು ಹೇಳಿದ್ದರು. ಅದರಂತೆಯೇ ಸ್ವಚ್ಛತಾ ಕೆಲಸವೂ ಭರದಿಂದ ನಡೆದಿತ್ತು. ಹಲವರು ಕೈ ಜೋಡಿಸಿದ್ದರು.

ಮೂರು ವರ್ಷ ಕಳೆದರೂ ಯೋಜನೆ ಸಾಕಾರಗೊಂಡಿಲ್ಲ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಗೆ ‘ಮನು ವನ’ ಕಳೆ ಗಿಡಗಳಿಂದ ಆವೃತ್ತವಾಗಿದೆ. ಇದು ಹಲವರಲ್ಲಿ ಬೇಸರ ಮೂಡಿಸಿದೆ.

ಕಲಾತ್ಮಕತೆ: ಅರಸರ ಆಳ್ವಿಕೆಯಲ್ಲಿ ಅರಮನೆಗೆ ಬೇಕಾದಂತಹ ಹಣ್ಣು, ಹೂವು, ತರಕಾರಿಯನ್ನು ಬೆಳೆಯುತ್ತಿದ್ದಮಧುವನಕ್ಕೆ ಹೊಂದಿಕೊಂಡಂತಿರುವುದೇ ಮನು ವನ. ಮಧುವನದ ಕೆಲ ಭಾಗ ಇದೀಗ ಖಾಸಗಿ ವ್ಯಕ್ತಿಗಳ ಸ್ವತ್ತಾಗಿದೆ. ಇಲ್ಲಿ ಮಹಿಷಾಸುರನ 10 ಅಡಿ ಎತ್ತರದ ಮೂರ್ತಿಯೊಂದಿತ್ತು ಎಂಬುದು ಇತಿಹಾಸಕಾರರ ಉಲ್ಲೇಖ. ಮನು ವನ ಇಂದಿಗೂ ರಾಜವಂಶಸ್ಥರ ಒಡೆತನದಲ್ಲಿದೆ.

ಟಿಪ್ಪು ಸುಲ್ತಾನನ ಮರಣದ ನಂತರ ಮೈಸೂರು ರಾಜಧಾನಿ ಕೇಂದ್ರವಾಯಿತು. 18ನೇ ಶತಮಾನದಿಂದಲೂ ಮನು ವನ ಅಸ್ತಿತ್ವದಲ್ಲಿದೆ. ಮೈಸೂರು ಸಂಸ್ಥಾನವನ್ನಾಳಿದ ಆಳರಸರ ಸಮಾಧಿ ಇಲ್ಲಿವೆ.

ಮನು ವನದಲ್ಲಿ ಕಾಮಧೇನು ಗೋಪುರವಿದೆ. ವಿಜಯನಗರ ಶೈಲಿಯ ಪುಷ್ಕರಣಿಯಿದ್ದು, ತಳದವರೆಗೂ ಮೆಟ್ಟಿಲುಗಳಿವೆ. ಆದರೆ ಇದೀಗ ಕೊಳ ಅವಸಾನದಂಚಿನಲ್ಲಿದೆ. ಕಾಯಕಲ್ಪ ಬೇಕಿದೆ. ವೀರಭದ್ರನ ಪುಟ್ಟ ದೇಗುಲವಿದೆ. ಸುತ್ತಲೂ ಆವರಣಗೋಡೆಯಿದೆ. ಕಾವಲುಗಾರನ ಭದ್ರತೆಯಿದೆ.

ಸುಲ್ತಾನರ ಆಳ್ವಿಕೆಗೊಳಪಟ್ಟಿದ್ದ ಮೈಸೂರು ಸಂಸ್ಥಾನ, ಬ್ರಿಟಿಷರಿಂದ ಮತ್ತೆ ಯದು ವಂಶಕ್ಕೆ ದೊರಕುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಲಕ್ಷ್ಮಮ್ಮಣ್ಣಿ. ಪುತ್ರ–ಸೊಸೆಯ ಮರಣದ ಬಳಿಕ ಮೊಮ್ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್‌ಗೆ ಪಟ್ಟ ಕಟ್ಟಿ, ಮೈಸೂರು ಸಂಸ್ಥಾನದ ಸಿಂಹಾಸನ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು. 1810ರಲ್ಲಿ ಇವರು ನಿಧನರಾದಾಗ ಮನು ವನದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಿ, ಸಮಾಧಿ ನಿರ್ಮಿಸಲಾಗಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್‌ ಸಮಾಧಿ ದೇಗುಲದಂತಿದೆ. ಮನು ವನದಲ್ಲಿರುವ ದೊಡ್ಡ ಸಮಾಧಿಯಿದು. ಸಮಾಧಿಯ ಮೇಲೆ ಗೋಪುರ ನಿರ್ಮಿಸಲಾಗಿದೆ. ಇದರಲ್ಲಿ ಕಲಾತ್ಮಕ ಕೆತ್ತನೆಗಳಿವೆ. ಹೆದ್ದಾರಿಯಲ್ಲಿ ಸಂಚರಿಸುವವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಮುಮ್ಮಡಿ ಪತ್ನಿಯರು, ಉಪ ಪತ್ನಿಯರ ಸಮಾಧಿಗಳು ಇಲ್ಲಿವೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌, ಇವರ ಪತ್ನಿಯರು, ಸಹೋದರಿಯರಾದ ಕೃಷ್ಣಾಜಮ್ಮಣ್ಣಿ, ಚೆಲುವಾಜಮ್ಮಣ್ಣಿ, ಜಯಲಕ್ಷ್ಮಮ್ಮಣ್ಣಿ ಅವರ ಸಮಾಧಿಗಳು ಇಲ್ಲಿವೆ. ಇವು ಕಲಾತ್ಮಕವಾಗಿ ನಿರ್ಮಾಣಗೊಂಡಿವೆ. ಉಳಿದಂತೆ ರಾಜ ಕುಟುಂಬದವರ ಸಮಾಧಿಗಳಿವೆ.

ಕನ್ನಡ ನಾಡಿನ ಕೊನೆಯ ಮಹಾರಾಜ ಎಂದೇ ಬಿಂಬಿತಗೊಂಡಿದ್ದ ಜಯಚಾಮರಾಜ ಒಡೆಯರ್‌ ಅವರ ಸಮಾಧಿಯೂ ಇಲ್ಲಿಯೇ ಇದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಮಾಧಿಯೂ ಮನು ವನದಲ್ಲಿದೆ.

ಸಾಕಾರಗೊಳ್ಳದ ಯಾತ್ರಾ ಸ್ಥಳದ ಪ್ರಸ್ತಾವ...

ಸಿ.ಎಚ್‌.ವಿಜಯಶಂಕರ್‌ ಸಂಸದರಾಗಿದ್ದ ಅವಧಿಯಲ್ಲಿ ‘ಮನು ವನ’ವನ್ನು ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವವೊಂದನ್ನು ಸಿದ್ಧಪಡಿಸಿದ್ದರು. ಪಾಲಿಕೆ, ಮುಡಾ ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿದ್ದರು. ಅಧಿಕಾರದ ಅವಧಿ ಮುಗಿದಿದ್ದರಿಂದ ಸಾಕಾರಗೊಳ್ಳಲಿಲ್ಲ. ನಂತರ ಯಾರೊಬ್ಬರೂ ಪ್ರಸ್ತಾವ ರೂಪಿಸಿಲ್ಲ.

‘ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾಗ, ಮನು ವನದ ದುಸ್ಥಿತಿ ನೋಡಿ ಮುಜುಗರವಾಗಿತ್ತು. ಹಿಂದೊಮ್ಮೆ ಡಿ.ಎಚ್‌.ಶಂಕರಮೂರ್ತಿ, ಡಿ.ವಿ.ಸದಾನಂದಗೌಡ ಜೊತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಸಮಾಧಿ ಸ್ಥಳವನ್ನೇ ಸುಂದರ ಉದ್ಯಾನವನ್ನಾಗಿ ರೂಪಿಸಿದ್ದನ್ನು ಕಣ್ತುಂಬಿಕೊಂಡು ಬಂದಿದ್ದೆ. ಅದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಕನಸಿತ್ತು. ಆದರೆ ಇಂದಿಗೂ ಸಾಕಾರಗೊಳ್ಳದಿರುವುದು ಮನಸ್ಸಿಗೆ ತುಂಬಾ ಬೇಸರವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡ ನೆಲದ ಕೊನೆ ಅರಸರು. ತಮ್ಮ ಜನಪರ ಆಡಳಿತದಿಂದಲೇ ಮನೆ ಮಾತಾಗಿದ್ದವರು. ಕರು ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ಸಾಧನೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಸಮಾಧಿ ಸ್ಥಳ ಪವಿತ್ರ ಯಾತ್ರಾ ತಾಣವಾಗಬೇಕು. ಇದರ ಸಾಕಾರಕ್ಕೆ ಆಡಳಿತಾರೂಢರು ಸಂಕಲ್ಪ ಮಾಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT