ಶುಕ್ರವಾರ, ಮೇ 20, 2022
24 °C
ಪಕ್ಷಾತೀತ, ಜಾತ್ಯಾತೀತವಾಗಿ ಮುಖಂಡರಿಂದ ಎಂ.ಶಿವಣ್ಣಗೆ ಅಭಿನಂದನೆ

ಪೌರಕಾರ್ಮಿಕರಿಗೂ ಗೌರವಯುತ ಬದುಕು: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ‘ಪೌರಕಾರ್ಮಿಕರ ಬದುಕನ್ನು ಸರಿಪಡಿಸಿ ಸಮಾಜದಲ್ಲಿ ಎಲ್ಲರಂತೆ ಅವರೂ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಈ ಆಯೋಗ ಕೆಲಸ ಮಾಡಲಿದೆ’ ಎಂದು ಸಫಾಯಿ ಕರ್ಮಚಾರಿಗಳ ಅಧ್ಯಕ್ಷ ಎಂ. ಶಿವಣ್ಣ ಹೇಳಿದ್ದಾರೆ.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಎಚ್‌.ಡಿ.ಕೋಟೆ ಮತ್ತು ಸರಗೂರು ನಾಗರಿಕರು ಹಾಗೂ ಬಾಬು ಜಗಜೀವನ್ ರಾಂ ವಿಚಾರ ವೇದಿಕೆಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸ್ವೀಕರಿಸಿ ಮಾತನಾಡಿದರು.

‘ಅಧಿಕಾರಿಗಳು ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ’ ಎಂದರು.

‘ಒಬ್ಬ ರಾಜಕಾರಣಿ ಎಲ್ಲಾ ಕ್ಷೇತ್ರದಲ್ಲಿ ಶ್ರಮಿಸಿ ಸಮುದಾಯದ ಏಳಿಗೆಗೆ ಕೆಲಸ ನಿರ್ವಹಿಸಬೇಕು. ಈ ಹಿಂದೆ 5 ಖಾತೆಗಳಲ್ಲಿ ಸಚಿವನಾಗಿ, ಸಾಮೂಹಿಕವಾಗಿ ರಾಜ್ಯದ ಮತ್ತು ಕೆಲ ಸಮುದಾಯಗಳ ಅಭಿವೃದ್ಧಿಗೆ ಕೆಲಸ ನಿರ್ವಹಿಸಿದ್ದೇನೆ’ ಎಂದರು.

‘ಸಮುದಾಯದ ಕಟ್ಟಕಡೆ ವ್ಯಕ್ತಿಗಳಾದ ಪೌರಕಾರ್ಮಿಕರ, ನೊಂದವರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವುದು ತಾಲ್ಲೂಕಿಗೆ ಹೆಮ್ಮೆಯ ತರುವ ವಿಚಾರವಾಗಿದೆ. ಇದರಲ್ಲಿ ನಾನು ಕೆಲಸ ನಿರ್ವಹಿಸುತ್ತಿರುವುದು ತೃಪ್ತಿಕರವಾಗಿದೆ. ಇಂತಹ ಅವಕಾಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕಲ್ಪಿಸಿ ಕೊಟ್ಟಿರುವುದರಿಂದ ರಾಜ್ಯದ ಪೌರಕಾರ್ಮಿಕ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ನನ್ನ ಕರ್ತವ್ಯವಾಗಿದೆ’ ಎಂದರು.

‘ಈ ಕ್ಷೇತ್ರದ ಋಣತೀರಿಸಲು ಬಿಜೆಪಿ ಸರ್ಕಾರ ಅವಕಾಶ ಸಿಕ್ಕಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಜೊತೆ ಕೈಜೋಡಿಸಿ ಕೆಲಸ ನಿರ್ವಹಿಸುತ್ತೇನೆ’ ಎಂದರು.

 ‘ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಸೇರಿ ಅಭಿನಂದನೆ ಸಲ್ಲಿಸಿರುವುದು ನಾನು ರಾಜಕೀಯ ಇತಿಹಾಸದಲ್ಲಿ ಮರೆಯಲಾಗದ ದಿನ’ ಎಂದು ಶಿವಣ್ಣ ಭಾವುಕರಾದರು.

ಶಾಸಕ ಸಿ.ಅನಿಲ್ ಕುಮಾರ್‌ ಮಾತನಾಡಿ, ‘ರಾಜಕಾರಣ ಮತ್ತು ವ್ಯಕ್ತಿತ್ವಕ್ಕೆ ಬಿಜೆಪಿ ಸರ್ಕಾರ ಶಿವಣ್ಣಗೆ ಇನ್ನು ಉನ್ನತ ಹುದ್ದೆ ನೀಡಬಹುದಾಗಿತ್ತು. ಅವರ ಮಾರ್ಗದರ್ಶನ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾಗಿದೆ’ ಎಂದರು.

ಪುರಸಭಾ ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷೆ ಗೀತಾ, ಎಚ್.ಸಿ.ಶಿವಣ್ಣ, ಮೊತ್ತಬಸವರಾಜಪ್ಪ, ವೆಂಕಟಸ್ವಾಮಿ, ಗುರುಸ್ವಾಮಿ, ಎಂ.ಸಿ.ದೊಡ್ಡ ನಾಯಕ, ಕೆ.ಈರೇಗೌಡ, ಪುರಸಭಾ ಸದಸ್ಯರಾದ ಶಾಂತಮ್ಮ, ಎಚ್.ಸಿ.ನರಸಿಂಹಮೂರ್ತಿ, ರಾಜು, ನಂಜಪ್ಪ, ಪ್ರೇಮ್‌, ಹರೀಶ್‌, ಸಮಾಜದ ಅಧ್ಯಕ್ಷ ಪಿ.ನಾಗರಾಜು, ಪರಶಿವಮೂರ್ತಿ, ಸಿ.ಎನ್.ನರಸಿಂಹೇಗೌಡ, ಚಾ.ನಂಜುಂಡಮೂರ್ತಿ, ಪಿ.ರವಿ, ಶಂಭುಲಿಂಗ ನಾಯಕ, ಶಿವಯ್ಯ, ಪ್ರಕಾಶ್, ಚೆಲುವರಾಜು, ಬೆಟ್ಟಸ್ವಾಮಿ, ಭಾಗ್ಯಲಕ್ಷ್ಮಿ, ಕೃಷ್ಣೆಗೌಡ, ಹನು ಇದ್ದರು.

ಸಮಾಧಿಗೆ ಪೂಜೆ: ಕಾರ್ಯಕ್ರಮಕ್ಕೂ ಮುನ್ನ ಎಂ.ಶಿವಣ್ಣ ತಮ್ಮ ಸ್ವಗ್ರಾಮ ಕೃಷ್ಣಪುರಕ್ಕೆ ಭೇಟಿ ನೀಡಿ ಅವರ ತಂದೆ-ತಾಯಿ ಮತ್ತು ತಮ್ಮನ ಸಮಾಧಿಗೆ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ₹ 2 ಕೋಟಿ ವೆಚ್ಚದ ಬಾಬು ಜಗಜೀವನ್ ರಾಂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು