ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಮೈಸೂರು ನವೋದ್ಯಮ ಉತ್ಸವ: ಆ.7ರವರೆಗೆ ಆಯೋಜನೆ

Last Updated 5 ಆಗಸ್ಟ್ 2022, 12:58 IST
ಅಕ್ಷರ ಗಾತ್ರ

ಮೈಸೂರು: ‘ನವೋದ್ಯಮದಿಂದ ನವಭಾರತ’ ಘೋಷವಾಕ್ಯದೊಂದಿಗೆ ಎಸ್‌ಜೆಸಿಇ–ಸ್ಟೆಪ್‌ ಸಹಯೋಗದಲ್ಲಿ ಇಲ್ಲಿನ ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಫುಟ್‌ಬಾಲ್‌ ಮೈದಾನದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ‘ಮೈಸೂರು ನವೋದ್ಯಮ ಉತ್ಸವ’ (ಮೈಸೂರು ಸ್ಟಾರ್ಟ್‌ ಅಪ್‌ ‍ಪೆವಿಲಿಯನ್‌) ಶುಕ್ರವಾರ ಆರಂಭಗೊಂಡಿತು.

ಉತ್ಸವದ ಭಾಗವಾಗಿ ನಡೆದ ಸಮ್ಮೇಳನವು, ನವೋದ್ಯಮಗಳಿಗಿರುವ ಅವಕಾಶ, ಸರ್ಕಾರದಿಂದ ದೊರೆಯುತ್ತಿರುವ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ನಗರಿಯಲ್ಲಿರುವ ಪೂರಕ ವಾತಾವರಣದ ಬಗ್ಗೆ ಬೆಳಕು ಚೆಲ್ಲಿತು.

ಎಸ್‌ಜೆಸಿಇ–ಸ್ಟೆಪ್‌, ಟಿಐಇ ಮೈಸೂರು, ಯಂಗ್‌ ಇಂಡಿಯನ್ಸ್, ಸಿಐಐ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಡಿಜಿಟಲ್‌, ಸ್ಟಾರ್ಟ್‌ ಅಪ್‌ ಇಂಡಿಯಾ ಮತ್ತು ಸ್ಟಾರ್ಟ್‌ ಅಪ್‌ ಕರ್ನಾಟಕ ಸಹಯೋಗದಲ್ಲಿ ಉತ್ಸವ ಅನಾವರಣಗೊಂಡಿದೆ. 20ಕ್ಕೂ ಹೆಚ್ಚು ಹೂಡಿಕೆದಾರರು, ಮೆಂಟರ್‌ಗಳು, 25ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. ನೂರು ಮಳಿಗೆಗಳು ಮತ್ತು ವಿದ್ಯಾರ್ಥಿಗಳು, ಸಂಶೋಧಕರು, ಕೈಗಾರಿಕಾ ವೃತ್ತಿಪರರು ಪಾಲ್ಗೊಂಡಿದ್ದಾರೆ. ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ.

ಉದ್ಘಾಟಿಸಿದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ‘ಮೈಸೂರು ಮಹಾರಾಜರ ಕಾಲದಲ್ಲೇ ನವೋದ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಮೈಸೂರಿನ ಹಲವು ಬ್ರ್ಯಾಂಡ್‌ಗಳು ಸಾಕ್ಷಿಯಾಗಿವೆ. ನಗರವನ್ನು ‌ಸೈಬರ್ ಸೆಕ್ಯುರಿಟಿ ಹಬ್ ಆಗಿ ರೂಪಿಸುವುದಕ್ಕೂ ಅವಕಾಶವಿದೆ’ ಎಂದರು.

‘ಪ್ರೊಟೀನ್‌ ಕ್ಲೌಡ್‌’ ಕಂಪನಿಯ ಸಿಇಒ ಸುರೇಶ್ ಸೇಥಿ ಮಾತನಾಡಿ, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರಾಂತಿ ಮಾಡಿದೆ. ಪ್ರೊಟೀನ್‌ ಕ್ಲೌಡ್‌ ಆತ್ಮನಿರ್ಭರ ಭಾರತಕ್ಕೆ ‌ಸಹಕಾರಿಯಾಗಿದೆ. ದೇಶದ ನಾಳೆಗಳು ಇಂದಿಗಿಂತಲೂ ಚೆನ್ನಾಗಿರಲಿವೆ’ ಎಂದು ಹೇಳಿದರು.

ಆತ್ಮನಿರ್ಭರ ಭಾರತಕ್ಕೆ:‘ವಿಜ್ಣಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸರ್ಕಾರ ಆದ್ಯತೆ ಕೊಡುತ್ತಿದೆ. ಸದ್ಯ 160 ಇನ್ಕ್ಯುಬೇಟರ್‌ಗಳನ್ನು (ತಂತ್ರಜ್ಞಾನ ಪರಿಪೋಷಣಾ ಕೇಂದ್ರ) ಸ್ಥಾಪಿಸಲಾಗಿದೆ. ಮತ್ತೆ 25 ಸ್ಥಾಪಿಸಲಾಗುವುದು. ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ‌ನವೋದ್ಯಮಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ತಂತ್ರಜ್ಞಾನ ಅಭಿಯಾನ ವಿಭಾಗದ ಮುಖ್ಯಸ್ಥೆ ಡಾ.ಅನಿತಾ ಗುಪ್ತ ತಿಳಿಸಿದರು.

ವಿಜ್ಞಾನಾನಂದ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಸಂಪತ್ತು ಮಾಡಿದವರನ್ನು ಕಳ್ಳರಂತೆ ನೋಡುವ ಮನೋಭಾವವಿದೆ. ಆತ, ಕಪ್ಪು ಹಣ ಇಟ್ಟುಕೊಂಡಿರಬಹುದು ಅಥವಾ ಸರ್ಕಾರಕ್ಕೆ ವಂಚಿಸಿರಬೇಕು ಎಂದುಕೊಳ್ಳುತ್ತಾರೆ. ಇದು ದೂರಾಗಬೇಕು. ಉದ್ಯಮಿಗಳು ಸಂಕಷ್ಟಕ್ಕೆ ಒಳಗಾದಾಗ ನೆರವಾಗಬೇಕು. ಉದ್ಯಮಗಳು ವೃದ್ಧಿಸಿದರೆ ಸಮಾಜವೂ ಬೆಳೆಯುತ್ತದೆ’ ಎಂದು ಹೇಳಿದರು.

‘ರಾಜಕಾರಣಿಗಳು ಕೂಡ ಸಾಮಾನ್ಯ ಕುಟುಂಬದಿಂದ ಬಂದವರೇ ಆಗಿರುತ್ತಾರೆ. ಅವರು, ವೈದ್ಯಕೀಯ ಕಾಲೇಜುಗಳನ್ನು ನಡೆಸುವಷ್ಟರ ಮಟ್ಟಿಗೆ ಸಂಪತ್ತು ಗಳಿಸುತ್ತಾರೆ. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಇದನ್ನು ಯಾರೂ ಕೇಳುವುದಿಲ್ಲ’ ಎಂದು ವಿಷಾದಿಸಿದರು.

ನವೋದ್ಯಮ ನೀತಿ:ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಮಾತನಾಡಿ, ‘ದೇಶದಲ್ಲಿಯೇ ಮೊದಲಿಗೆ ನವೋದ್ಯಮ‌ ನೀತಿ ರೂಪಿಸಿ ಪ್ರೋತ್ಸಾಹಿಸಲಾಗುತ್ತಿದೆ. 30 ದೇಶಗಳ ಜತೆಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ’ ಎಂದರು.

‘ಬೆಂಗಳೂರು ಹೊರಗಿನ ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬೀದರ್‌, ಮಂಗಳೂರು ಮೊದಲಾದ ಕಡೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು‌ ಕೊಡಲಾಗುತ್ತಿದೆ. ವಿವಿಧ ರಿಯಾಯಿತಿಗಳನ್ನೂ‌ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಎನ್‌ಎಸ್‌ಡಿಎಲ್‌ ಕಂಪನಿಯ ‘ಭಾರತದಲ್ಲಿ ರೂಪಿಸಿದ’ ಇಂಧನ ಕ್ಷಮತೆಯ ಕ್ಲೌಡ್‌ ತಂತ್ರಜ್ಞಾನ ‘ಪ್ರೊಟೀನ್‌ ಕ್ಲೌಡ್‌’ ಪರಿಚಯಿಸಲಾಯಿತು. ಕಂಪನಿಯ 25 ವರ್ಷಗಳ ಕಾರ್ಯ ಚಟುವಟಿಕೆಯ ಸ್ಮರಣೆಗೆ ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರಕುಮಾರ್‌ ಬಿಡುಗಡೆ ಮಾಡಿದರು.

ಎಕ್ಸೆಲ್ ಸಾಫ್ಟ್‌ ಟೆಕ್ನಾಲಜೀಸ್ ಸಿಇಒ ಮತ್ತು ಸಂಸ್ಥಾಪಕ ಸುಧನ್ವ ಧನಂಜಯ ಮಾತನಾಡಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಭಾಗವಹಿಸಿದ್ದರು. ಎಸ್‌ಜೆಸಿಇ–ಸ್ಟೆಪ್‌ ಸಿಇಒ ಶಿವಶಂಕರ್‌ ಸ್ವಾಗತಿಸಿದರು. ಪ್ರಿಯಾಂಕಾ ಪ್ರಾಸ್ತಾವಿಕ ಮಾತನಾಡಿದರು.

‘ಮೈಸೂರು ವ್ಯವಸ್ಥಿತವಾಗಿ ಬೆಳೆಯಬೇಕು’
‘ಮುಂದಿನ ಹತ್ತು ವರ್ಷಗಳಲ್ಲಿ ಮೈಸೂರು‌ ಬಹಳಷ್ಟು ಬದಲಾಗಲಿದೆ. ಅಡ್ಡಾದಿಡ್ಡಿ ಬದಲಿಗೆ ವ್ಯವಸ್ಥಿತವಾಗಿ ಪ್ರಗತಿ ಕಾಣಬೇಕು. ಸ್ವಚ್ಛ– ಶುದ್ಧ–ಸಮೃದ್ಧ ಮೈಸೂರು ಆಗಿ ರೂಪುಗೊಳ್ಳಬೇಕು’ ಎಂದು ಸ್ಕ್ಯಾನ್‌ರೇ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಆಶಯ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಕರ್ನಾಟಕದಲ್ಲಿ ಮೊದಲಿಗೆ ನವೋದ್ಯಮ ಹಾಗೂ‌ ಹೊಸ ಆಯಾಮಗಳಿಗೆ ಪ್ರೋತ್ಸಾಹ ನೀಡಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ’ ಎಂದು ಸ್ಮರಿಸಿದರು.

‘ಬಹುತೇಕರು ಉದ್ಯೋಗಿಗಳಾಗಲು ಬಯಸುತ್ತಾರೆಯೇ ಹೊರತು, ಉದ್ಯಮಿಯಾಗುವ ರಿಸ್ಕ್‌ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಯುವಕರು ಮನಸ್ಸು ಮಾಡಿದರೆ ದೇಶವನ್ನು ಎತ್ತರಕ್ಕೆ ಬೆಳೆಸಬಹುದಾಗಿದೆ’ ಎಂದರು.

‘ಪರಿಶುದ್ಧ ವಾತಾವರಣವನ್ನು ಕಾಪಾಡಿಕೊಂಡು ಮೈಸೂರನ್ನು ಮೈಸೂರಾಗಿಯೇ ಉಳಿಸಿಕೊಳ್ಳಬೇಕು. ಮಾದರಿಯಾಗಿ ಮೈಸೂರು ರೂಪಿಸಿರುವ ಕೀರ್ತಿ ಅರಸರಿಗೆ ಸಲ್ಲುತ್ತದೆ. ಆ ಪರಂಪರೆಯನ್ನು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಸಮೃದ್ಧಿಯಾಗುತ್ತದೆ
ಶ್ರೀಮಂತಿಕೆ ಎನ್ನುವುದು ಆಕಾಶದಿಂದ ಬರುವುದಿಲ್ಲ. ವೈಯಕ್ತಿಕವಾಗಿ ‌ಬಹಳಷ್ಟು ಶ್ರಮಿಸಬೇಕು. ಆದ್ದರಿಂದ ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕು. ಆಗ ದೇಶವೂ ಸಮೃದ್ಧಿಯಾಗುತ್ತದೆ.
-ವಿಜ್ಞಾನಾನಂದ ಸ್ವಾಮೀಜಿ

*
ಪ್ರೋತ್ಸಾಹ ಕೊಡುತ್ತಿದೆ
ಸರ್ಕಾರವು ನವೋದ್ಯಮಿಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ಬೆಳೆಯುತ್ತಿರುವವರನ್ನು ನೋಡಿ ಗೌರವಿಸಬೇಕೇ ಹೊರತು ಅಸೂಯೆ ಪಡಬಾರದು.‌ ಬೆಳೆದವರ ಪರಿಶ್ರಮವನ್ನು ಅಳವಡಿಸಿಕೊಂಡು ಮುಂದೆ ಬರಬೇಕು
-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT