ಗುರುವಾರ , ಆಗಸ್ಟ್ 11, 2022
23 °C
ಮಾಹಿತಿ ಕ್ರೋಡೀಕರಣ; ಮೂರ್ನಾಲ್ಕು ದಿನದಲ್ಲಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಕೆ

ನಾಗೇಂದ್ರ ಆತ್ಮಹತ್ಯೆ: ಅಂತಿಮ ಹಂತದಲ್ಲಿ ತನಿಖಾ ವರದಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ನಂಜನಗೂಡು ತಾಲ್ಲೂಕಿನ ಪ್ರಭಾರ ಆರೋಗ್ಯಾಧಿಕಾರಿಯಾಗಿದ್ದ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟದಲ್ಲಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖಾಧಿಕಾರಿ ಯಾಗಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೂರ್ನಾಲ್ಕು ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲಿದ್ದು, ಅಂತಿಮ ರೂಪ ನೀಡುತ್ತಿದ್ದಾರೆ ಎಂಬುದು ಮೂಲ ಗಳಿಂದ ಖಚಿತಪಟ್ಟಿದೆ.

‘ಆತ್ಮಹತ್ಯೆ ಮಾಡಿಕೊಂಡ ವೈದ್ಯ ನಾಗೇಂದ್ರ ಅವರಿಗೆ ವೈಯಕ್ತಿಕ ಸಮಸ್ಯೆಗಳಿದ್ದವಾ? ಕೌಟುಂಬಿಕ ತೊಂದರೆಯಿತ್ತಾ? ಆಡಳಿತಾತ್ಮಕವಾಗಿ ಸಮಸ್ಯೆ ಎದುರಾಗಿದ್ದಾವಾ? ಎಂಬುದು ಸೇರಿದಂತೆ ವಿಭಿನ್ನ ದೃಷ್ಟಿಕೋನದಿಂದ ತನಿಖೆ ನಡೆದಿದೆ’ ಎಂಬುದು ‘ಪ್ರಜಾವಾಣಿ’ಗೆ ಗೊತ್ತಾಗಿದೆ.

‘ನಾಗೇಂದ್ರ ಈ ಹಿಂದೆ ಕೆಲಸ ನಿರ್ವಹಿಸಿದ್ದ ಊರುಗಳಿಗೆ ತೆರಳಿ ಮಾಹಿತಿ ಕಲೆ ಹಾಕಲಾಗಿದೆ. 150ಕ್ಕೂ ಹೆಚ್ಚು ಜನರನ್ನು ತನಿಖಾ ತಂಡ ಮಾತನಾಡಿಸಿದ್ದು, ಎಲ್ಲರೂ ಸದಭಿಪ್ರಾಯ ಹೇಳಿದ್ದಾರೆ’ ಎಂಬುದು ತಿಳಿದು ಬಂದಿದೆ.

‘ಚಿಕಿತ್ಸೆ ನೀಡಲು ಯಾರೊಬ್ಬರ ಬಳಿಯೂ ಹಣ ಪಡೆಯುತ್ತಿರಲಿಲ್ಲ. ತಮ್ಮ ಬಳಿಗೆ ಚಿಕಿತ್ಸೆಗಾಗಿ ಬರುವ ಎಲ್ಲರನ್ನೂ ತಪಾಸಿಸಲು ಟೋಕನ್ ಸಿಸ್ಟಂ ಜಾರಿಗೊಳಿಸಿದ್ದರು. ಸರ್ಕಾರಿ ಆಸ್ಪತ್ರೆಗೆ ಟೋಕನ್ ವ್ಯವಸ್ಥೆ ಪರಿಚಯಿಸಿದ್ದೇ ನಾಗೇಂದ್ರ. ಯಾವುದೇ ವ್ಯಸನಿಯಾಗಿರಲಿಲ್ಲ. ಜನಾನುರಾಗಿ ಯಾಗಿದ್ದರು’ ಎಂಬುದು ತನಿಖಾ ತಂಡಕ್ಕೆ ಮನದಟ್ಟಾಗಿದೆ.

ನಾಗೇಂದ್ರ ಅವರ ತಂದೆ–ತಾಯಿ, ಪತ್ನಿಯ ಹೇಳಿಕೆಯನ್ನು ತನಿಖಾ ತಂಡ ಪಡೆದಿದ್ದು, ಕೌಟುಂಬಿಕ ಸಮಸ್ಯೆ ದಾಖಲಾಗಿಲ್ಲ. ಎಲ್ಲರೂ ಅನ್ಯೋನ್ಯವಾಗಿದ್ದರು ಎಂಬುದು ದೃಢಪಟ್ಟಿದೆ.

‘ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ತಹಶೀಲ್ದಾರ್ ಸೇರಿದಂತೆ 15 ಅಧಿಕಾರಿಗಳ ಹೇಳಿಕೆಯನ್ನು ತನಿಖಾಧಿಕಾರಿ ದಾಖಲಿಸಿ ಕೊಂಡಿದ್ದಾರೆ. ಯಾರೊಬ್ಬರೂ ಒತ್ತಡ ಹಾಕಿರುವುದು ತನಿಖಾ ತಂಡಕ್ಕೆ ಖಚಿತಪಟ್ಟಿಲ್ಲ. ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದೆ. ಆಡಳಿತ ವ್ಯವಸ್ಥೆಯ ಭಾಷೆಯಲ್ಲಿ ಅಧಿಕಾರಿಗಳು ಸಂವಹನ ನಡೆಸಿರುವುದು ದಾಖಲಾಗಿದೆಯಷ್ಟೇ ಎಂಬುದು’ ತನಿಖಾ ತಂಡದ ಗಮನಕ್ಕೆ ಬಂದಿದೆ ಎಂಬುದು ಗೊತ್ತಾಗಿದೆ.

‘ವೈರಲ್ ಆಗಿದ್ದ ಆಡಿಯೊವನ್ನು ತನಿಖಾ ತಂಡ ಸೂಕ್ಷ್ಮವಾಗಿ ಅವಲೋಕಿಸಿದೆ. ಅದರಲ್ಲಿ ಯಾವೊಬ್ಬ ಅಧಿಕಾರಿ ಗುರಿಯಾಗಿಸಿ ಕೊಂಡು ಮಾನಸಿಕ ಕಿರಿಕಿರಿ ಉಂಟು ಮಾಡಿ ರುವುದು ದೃಢಪಟ್ಟಿಲ್ಲ. ಅವಹೇಳನಕಾರಿ ಯಾಗಿ ಮಾತನಾಡಿರುವುದು ಕಂಡು ಬಂದಿಲ್ಲ ಎಂಬುದನ್ನು ತನಿಖಾ ತಂಡ ಸ್ಪಷ್ಟಪಡಿಸಿಕೊಂಡಿದೆ’ ಎಂಬುದನ್ನು ಮೂಲಗಳು ಖಚಿತಪಡಿಸಿವೆ.

ವೈದ್ಯರ ಬಿಗಿಪಟ್ಟಿಗೆ ಮಣಿದಿದ್ದ ಸರ್ಕಾರ

ನಾಗೇಂದ್ರ ಆತ್ಮಹತ್ಯೆ ಬಳಿಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು ತಮ್ಮ ಕರ್ತವ್ಯದಿಂದ ಹೊರಗುಳಿದು ಮುಷ್ಕರ ನಡೆಸಿದ್ದರು. ತನಿಖೆಗೆ ಆಗ್ರಹಿಸಿದ್ದರು. ಸಿಇಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇದು ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

ವೈದ್ಯರ ಆಕ್ರೋಶ ಶಮನಕ್ಕಾಗಿ ರಾಜ್ಯ ಸರ್ಕಾರ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ತನಿಖೆಗಾಗಿ ನಿಯೋಜಿಸಿತ್ತು. ಜೊತೆಗೆ 7 ದಿನದೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದರ ಜೊತೆಗೆ ಜಿ.ಪಂ. ಸಿಇಒ ಮಿಶ್ರಾ ಅವರನ್ನು ವರ್ಗಾವಣೆಗೊಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು