ಬುಧವಾರ, ಸೆಪ್ಟೆಂಬರ್ 18, 2019
28 °C
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮೈಸೂರು ಸಂಸ್ಥಾನ

‘ಬೆಳಕಿನ ಕಿರಣ ಬೀರಿದವರು ನಾಲ್ವಡಿ’

Published:
Updated:
Prajavani

ಮೈಸೂರು: ‘ರಾಜ ಪ್ರಭುತ್ವದಲ್ಲೇ ಪ್ರಜಾಪ್ರಭುತ್ವದ ಮುನ್ನೋಟದ ಬೆಳಕಿನ ಕಿರಣ ಬೀರಿದವರು ನಾಲ್ವಡಿ ಕೃಷ್ಣರಾಜ ಒಡೆಯರ್’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗ ಶುಕ್ರವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮೈಸೂರು ಸಂಸ್ಥಾನದಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತ್ಯಂತರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

‘ನಾಲ್ವಡಿ ತಮ್ಮ ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೆ ಮುಂದಾದಾಗ, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಇದನ್ನು ವಿರೋಧಿಸಿ ರಾಜೀನಾಮೆ ನೀಡಿದರು. ಮೀಸಲಾತಿ ಜಾರಿ ವಿರೋಧಿ ಗುಂಪು ವಿಶ್ವೇಶ್ವರಯ್ಯನವರನ್ನು ಪ್ರತಿನಿಧಿಕರಿಸಿ, ಹಲವು ವರ್ಷಗಳ ಕಾಲ ನಾಲ್ವಡಿಯ ಸಾಧನೆ ಬೆಳಕಿಗೆ ಬಾರದಂತೆ ನೋಡಿಕೊಂಡಿತು. ಸ್ವತಃ ವಿಶ್ವೇಶ್ವರಯ್ಯನವರೇ ರಾಜರೇ ನನಗೆ ವಿಶ್ವವಿದ್ಯಾಲಯ, ಬ್ಯಾಂಕ್, ಕನ್ನಂಬಾಡಿ, ಕಸಾಪ ಕಟ್ಟುವಂತೆ ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ’ ಎಂದು ಬರಗೂರು ಹೇಳಿದರು.

‘ಬಹುಸಂಖ್ಯಾತ ಅದೃಷ್ಟಹೀನರಿಗಾಗಿ ವಿಶ್ವವಿದ್ಯಾಲಯ ನಿರ್ಮಿಸಲಾಗಿದೆ. ಪ್ರಾಧ್ಯಾಪಕ ವರ್ಗ ಇವರಿಗಾಗಿಯೇ ಬೋಧನೆ ಮಾಡಬೇಕು ಎಂದು ನಾಲ್ವಡಿ ಘಟಿಕೋತ್ಸವದಲ್ಲಿ ಹೇಳಿದ್ದು ದಾಖಲಾಗಿದೆ. ಯಾರೊಬ್ಬರ ಜಾತಿ ಆಧರಿಸಿ ಶಾಲಾ ಪ್ರವೇಶ ನಿರಾಕರಿಸಬಾರದು ಎಂಬ ಕಾನೂನನ್ನು ಶತಮಾನದ ಹಿಂದೆಯೇ ಮೈಸೂರು ಸಂಸ್ಥಾನದಲ್ಲಿ ಜಾರಿಗೊಳಿಸಲಾಗಿತ್ತು’ ಎಂದು ರಾಮಚಂದ್ರಪ್ಪ ಸ್ಮರಿಸಿದರು.

‘ನಾಲ್ವಡಿ ತಮ್ಮ ಆಡಳಿತದಲ್ಲಿ 11ಸಾವಿರ ರಾತ್ರಿ ಶಾಲೆ ತೆರೆದಿದ್ದರು. ಅಸ್ಪೃಶ್ಯರು, ದಲಿತರು, ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲೆಗಳನ್ನು ಆರಂಭಿಸಿದ್ದರು. ಮಕ್ಕಳಿಗೆ ಊಟ ಕೊಡುವುದನ್ನು ಅಂದೇ ಜಾರಿಗೊಳಿಸಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸುವ ತಂದೆ–ತಾಯಿಗಳಿಗೆ ಪ್ರೋತ್ಸಾಹಧನ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಬರೋಡ ಸಂಸ್ಥಾನ ಬಿಟ್ಟರೇ, ಕಡ್ಡಾಯ ಶಿಕ್ಷಣ ಹಕ್ಕು ಜಾರಿಯಲ್ಲಿದ್ದುದು ಆಗಿನ ರಾಜಪ್ರಭುತ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ಮಾತ್ರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇವದಾಸಿ ಪದ್ಧತಿ ನಿಷೇಧಿಸಿದ್ದರು ನಾಲ್ವಡಿ. ವಿಧವಾ ವಿವಾಹಕ್ಕೆ ಕಾನೂನಿನ ಮನ್ನಣೆ ನೀಡಿದ್ದರು. ಮಹಿಳಾ ಪರ ಕಾನೂನು ಜಾರಿಗೊಳಿಸಿದ್ದರು. ಹೆರಿಗೆ ರಜೆಯನ್ನು ಆಗಲೇ ನೀಡಿದ್ದರು. ಕಾನೂನಿನ ಮೂಲಕ ಮಹಿಳೆಗೆ ಬಲ ತುಂಬಿದ್ದ ಒಡೆಯರ್, ಸಾಮಾಜಿಕವಾಗಿ ಹಲ ಸ್ಥಿತ್ಯಂತರಕ್ಕೆ ಮುನ್ನುಡಿ ಬರೆದಿದ್ದರು’ ಎಂದರು.

Post Comments (+)