ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಕಂಡ ಅತ್ಯಂತ ಸುಳ್ಳುಗಾರ, ಭ್ರಷ್ಟ ಪ್ರಧಾನಿ ಮೋದಿ: ವಿ.ಎಸ್.ಉಗ್ರಪ್ಪ ಆರೋಪ

Last Updated 13 ಸೆಪ್ಟೆಂಬರ್ 2021, 11:19 IST
ಅಕ್ಷರ ಗಾತ್ರ

ಮೈಸೂರು: ‘ಭಾರತ ಕಂಡ ಅತ್ಯಂತ ಸುಳ್ಳುಗಾರ ಹಾಗೂ ಭ್ರಷ್ಟ ಪ್ರಧಾನಿ ಇದ್ದರೆ ಅದು ಮಿಸ್ಟರ್‌ ನರೇಂದ್ರ ಮೋದಿ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದರು.

‘ಮೊದಲ ಬಾರಿ ಕೋವಿಡ್‌ನಿಂದ ಲಾಕ್‌ಡೌನ್‌ ಮಾಡಿದಾಗ ದೇಶ ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ಮಹಾಭಾರತ ಯುದ್ಧ 18 ದಿನ ನಡೆಯಿತು, ನಾವು ವೈರಾಣು ವಿರುದ್ಧ 21 ದಿನ ಯುದ್ಧ ಮಾಡಿ ನೆಮ್ಮದಿಯಿಂದ ಇರೋಣ’ ಎಂದಿದ್ದರು. ಆದರೆ, ಆಗ 565 ಇದ್ದ ಪಾಸಿಟಿವ್‌ ಪ್ರಕರಣ ಬಳಿಕ ಕೋಟಿ ದಾಟಿತು. ಇದಕ್ಕಿಂತ ದೊಡ್ಡ ಸುಳ್ಳಿನ ಉದಾಹರಣೆ ಬೇಕೇ? ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ₹ 39 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಜಂಟಿ ಸದನ ಸಮಿತಿ ತನಿಖೆಗೆ ಪ್ರಧಾನಿ ಹಿಂದೇಟು ಹಾಕುತ್ತಿದ್ದಾರೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಶೇ 65ರಷ್ಟಿದ್ದ ಮೋದಿ ಜನಪ್ರಿಯತೆ ಈಗ ಶೇ 24ಕ್ಕೆ ಇಳಿದಿದೆ. ಅವರ ಕಾರ್ಯಕ್ರಮಗಳು ಜನವಿರೋಧಿಯಾಗಿವೆ. ಸ್ವಂತ ರಾಜ್ಯ ಗುಜರಾತಿನಲ್ಲಿ ಅವರ ಹೆಸರು ಹೇಳಿಕೊಂಡು ವೋಟ್‌ ಪಡೆಯಲು ಸಾಧ್ಯವಿಲ್ಲವೆಂದು ಜಾತಿ ಆಧಾರಿತವಾಗಿ ವೋಟ್‌ ಗಿಟ್ಟಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಹೀಗಾಗಿ, ಪಟೇಲ್‌ ಸಮುದಾಯದ, ಮೊದಲ ಬಾರಿ ಶಾಸಕರಾಗಿರುವ ಭೂಪೇಂದ್ರ ಪಟೇಲ್‌ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯದ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ (ಜಿಟಿಟಿಸಿ) ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಸುಮಾರು ₹ 34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ. ಉಪಕರಣಗಳ ಖರೀದಿಯು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಅನುಮತಿ ಮೇರೆಗೆ ನಡೆದಿದೆ’ ಎಂದು ಆರೋಪಿಸಿದರು.

‘ಡಾ.ಅಶ್ವತ್ಥನಾರಾಯಣ ಅವರಿಗೆ ತಾಕತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ನಾವು ಹೋರಾಟಕ್ಕೆ ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದ ಅವರು, ‘ಬಿಜೆಪಿಯಲ್ಲಿ ಭ್ರಷ್ಟಾಚಾರದ ಗಂಗೋತ್ರಿಯೇ ಹರಿಯುತ್ತಿದ್ದು, ಅದನ್ನು ಮುಚ್ಚಿ ಹಾಕಲು ಯಾತ್ರೆ ನಡೆಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಬಿಜೆಪಿ ಮುಖಂಡರ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯುಪಿಎ ಆಡಳಿತ ಅವಧಿಯಲ್ಲಿ ಕಚ್ಚಾ ತೈಲ ದರ ಹೆಚ್ಚಿದಾಗ, ಜನರ ಹಿತದೃಷ್ಟಿಯಿಂದ ತೈಲ ಬಾಂಡ್ ಬಿಡುಗಡೆ ಮಾಡಿದ್ದು ನಿಜ. ಈ ಬಾಂಡ್ ವಿತರಣೆ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಾರಣ ಎಂದು ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT