ಮಂಗಳವಾರ, ನವೆಂಬರ್ 24, 2020
26 °C

ಮೈಸೂರು: ಕೋವಿಡ್ ಆಸ್ಪ‌ತ್ರೆಯಲ್ಲಿ ನಿರ್ಲಕ್ಷ್ಯ, ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಹೆಬ್ಬಾಳದ ಲಕ್ಷ್ಮೀಕಾಂತನಗರದ ನಿವಾಸಿ ಪ್ರೇಮ್‌ಕುಮಾರ್‌ ಎಂಬುವವರು  ತಮಗೆ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಗ್ಯಾಂಗ್ರಿನ್ ಉಂಟಾಗಿ, ಎರಡೂ ಕಾಲು ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.

ಆದರೆ, ಈ ಆರೋಪವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ಅಲ್ಲಗಳೆದಿದ್ದಾರೆ. 

‘ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್‌ ಕಾಯಿಲೆಯಿಂದ ಗುಣಪಡಿಸಿ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಗ್ಯಾಂಗ್ರಿನ್ ಸೇರಿದಂತೆ ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್‌ನಿಂದ ಮುಕ್ತವಾದ ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಕೋವಿಡ್ ಆಸ್ಪತ್ರೆಯಲ್ಲಿ ಯಾವುದೇ ನಿರ್ಲಕ್ಷ್ಯ ಆಗಿಲ್ಲ’ ಎಂದು ಪ್ರತಿಕ್ರಿಯಿಸಿದರು. 

‘ಸಿಬ್ಬಂದಿ ನಿರ್ಲಕ್ಷ್ಯ’

ಬೆಟ್ಟದಪುರ: ಇಲ್ಲಿನ ನಂದೀಪುರ ಗ್ರಾಮದ ನಿವಾಸಿ ಪದ್ಮಮ್ಮ (60) ಅವರು ಪಿರಿಯಾಪಟ್ಟಣ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಇವರ ಸೋದರ ಭಾಸ್ಕರಾಚಾರಿ ಆರೋಪಿಸಿದ್ದಾರೆ.

‘ಸೆ. 8ರಂದು ಇವರಿಗೆ ಕೊರೊನಾ ಸೋಂಕು ತಗುಲಿದ್ದು, ಮೈಸೂರಿನ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಹೇಳಿ ಪಿರಿಯಾಪ‍ಟ್ಟಣ ತಾಲ್ಲೂಕು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಕರೆದುಕೊಂಡು ಹೋದರು. 15 ದಿನಗಳ ನಂತರ ಕೋವಿಡ್ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಅಲ್ಲಿ ಪದ್ಮಮ್ಮ ಹೆಸರಿನ ರೋಗಿ ದಾಖಲಾಗಿಲ್ಲ ಎಂದು ಹೇಳಿದರು. ರಸ್ತೆ ಬದಿಯಲ್ಲಿ ಗುರುತು ಸಿಗದ ಮಹಿಳೆ ಮೃತಪಟ್ಟಿದ್ದು, ಸಂಬಂಧಿಕರು ಸಿಗದ ಕಾರಣ ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪರಿಶೀಲನೆ: ಈ ಪ‍್ರಕರಣ ಕುರಿತು ಪರಿಶೀಲನೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.