ಸೋಮವಾರ, ಜನವರಿ 18, 2021
27 °C
ನೂರೆಂಟು ವಿಘ್ನಗಳ ನಂತರ ಉದ್ಘಾಟನೆಗೆ ಸಜ್ಜು

ಕಂಗೊಳಿಸಲಿದೆ ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ನಜರ್‌ಬಾದ್‌ನ ಕುಪ್ಪಣ್ಣ ಉದ್ಯಾನ ಮತ್ತು ಮಕ್ಕಳ ಉದ್ಯಾನದ ನಡುವೆ ದಿಟ್ಟಿಸಿದರೆ ಮಹಲಿನಂತೆ ಕಂಗೊಳಿಸುತ್ತಿದೆ ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ. ಈ ಕಟ್ಟಡವನ್ನು ನ. 23ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಒಟ್ಟು ₹ 19.36 ಕೋಟಿ ವೆಚ್ಚದ ಈ ಕಾಮಗಾರಿ ಆರಂಭವಾಗಿದ್ದು 2014ರಲ್ಲಿ. ಬರೋಬರಿ 6 ವರ್ಷಗಳ ಕಾಲದ ನಂತರ ಕಚೇರಿ ಕಟ್ಟಡವು ಉದ್ಘಾಟನೆಗೆ ಅಣಿಯಾಗಿದೆ.

ಕರ್ನಾಟಕ ರಾಜ್ಯ ಹೌಸಿಂಗ್ ಕಾರ್ಪೊರೇಷನ್ ವತಿಯಿಂದ ಒಟ್ಟು 4,268.42 ಚ.ಮೀ ಅಳತೆ ವಿಸ್ತೀರ್ಣದಲ್ಲಿ ತಲೆಎತ್ತಿರುವ ಮೂರು ಅಂತಸ್ತಿನ ಕಟ್ಟಡ ಇದಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರವೂ ಇದೀಗ ಲಭಿಸಿದೆ.

ಕಚೇರಿಯಲ್ಲಿ ಏನೇನಿವೆ?

ಹೊಸ ಕಟ್ಟಡದಲ್ಲಿ ನಗರ ಅಪರಾಧ ದಾಖಲಾತಿಗಳ ವಿಭಾಗ, ವಿದೇಶಿಯರ ಶಾಖೆ, ಪೊಲೀಸ್‌ ಪರಿಶೀಲನೆಗೆ ಪ್ರತ್ಯೇಕ ಕೊಠಡಿ, ಕಂಪ್ಯೂಟರ್ ಫೋಟೊಗ್ರಫಿ, ದಾಖಲಾತಿ ಕೊಠಡಿಗಳು, ವೈಯರ್ ಲೆಸ್‌ ವಿಭಾಗ, ಟ್ರಾಫಿಕ್‌ ಆಟೊಮೇಷನ್‌ ಕೇಂದ್ರ, ಸಿಸಿಟಿವಿ ವಿಭಾಗಗಳ ಜತೆಗೆ ಗ್ರಂಥಾಲಯವೂ ಇದೆ. ವಿದೇಶಗಳಲ್ಲಿ ಇರುವಂತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ವಿಚಾರಣೆಗೊಳಪಡಿಸುವ ಸೌಲಭ್ಯವೂ ಇಲ್ಲಿದೆ.

ಉದ್ಘಾಟನೆಗೆ ನೂರೆಂಟು ವಿಘ್ನ!

ನೂತನ ಕಚೇರಿ ಕಟ್ಟಡ ಸಿದ್ಧವಾಗಿದ್ದರೂ, ಸ್ಥಳೀಯ ನಿವಾಸಿಯೊಬ್ಬರು ಕಸ್ತೂರ ಬಾ ಉದ್ಯಾನದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ, ತಡೆಯಾಜ್ಞೆ ತಂದಿದ್ದರು. ಇದರಿಂದ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗದೇ ದೂರ ಉಳಿದಿದ್ದರು.

ಈ ಕುರಿತು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ, ‘ಸದ್ಯ ನ್ಯಾಯಾಲಯದಲ್ಲಿರುವ ಎಲ್ಲ ತಡೆಯಾಜ್ಞೆಗಳೂ ತೆರವುಗೊಂಡಿವೆ. ಉದ್ಘಾಟನೆಗೆ ಯಾವುದೇ ಕಾನೂನು ತೊಡಕಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

108 ವಸತಿ ಗೃಹಗಳು ಉದ್ಘಾಟನೆಗೆ ಸಜ್ಜು

ಪೊಲೀಸ್ ಸಿಬ್ಬಂದಿಗಾಗಿಯೇ ‘ಗೃಹ 2020’ ಯೋಜನೆಯಡಿ 2018ರಲ್ಲಿ ₹ 20.31 ಕೋಟಿ ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಾದ 108 ವಸತಿ ಗೃಹಗಳ ಉದ್ಘಾಟನೆಯೂ ನಡೆಯಲಿದೆ. ಜ್ಯೋತಿ ನಗರದಲ್ಲಿ 36 ಹಾಗೂ ಜಾಕಿ ಕ್ವಾಟರ್ಸ್‍ನಲ್ಲಿ 72 ವಸತಿ ಗೃಹಗಳು ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು