ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟದಲ್ಲಿ ಸುಸಜ್ಜಿತ ಪೊಲೀಸ್ ಠಾಣೆ

ಅಂದಾಜು ₹ 8 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ: ಸಚಿವ ವಿ.ಸೋಮಣ್ಣ
Last Updated 1 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡೇಶ್ವರಿ ಬೆಟ್ಟದಲ್ಲಿ ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ತಿಳಿಸಿದರು.

ಬೆಟ್ಟದಲ್ಲಿನ ಬಹುಮಹಡಿ ವಾಹನ ನಿಲ್ದಾಣ ಸಮೀಪದಲ್ಲೇ ಅಂದಾಜು ₹ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ವಾಣಿಜ್ಯ ಸಂಕೀರ್ಣದ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಸಂಸದ ಪ್ರತಾಪಸಿಂಹ ಬೇಡಿಕೆಗೆ ಹಸಿರು ನಿಶಾನೆಯ ಮುದ್ರೆಯೊತ್ತಿದರು.

ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಜತೆ ಸ್ಥಳದಿಂದಲೇ ಮೊಬೈಲ್‌ ಮೂಲಕ ಮಾತನಾಡಿದ ಸಚಿವರು, ‘ಬಾಲು ನಿಮ್ಮ ಹೊರಠಾಣೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೆ ಹೇಳಿ ಜಾಗ ಕೊಡಿಸುವೆ. ನಿನ್ನ ಇಲಾಖೆಯಿಂದ ದುಡ್ಡು ಕೊಡಿಸು. ಒಂದೊಳ್ಳೆ ಪೊಲೀಸ್ ಠಾಣೆ ನಿರ್ಮಿಸೋಣ. ಬೆಟ್ಟಕ್ಕೆ ಭದ್ರತೆ ಹೆಚ್ಚಿಸಬೇಕು. ಅಕ್ರಮ ನಡೆಯದಂತೆ ಕ್ರಮ ಜರುಗಿಸು’ ಎಂದು ಸೂಚಿಸಿದರು.

ಸ್ಥಳದಲ್ಲಿದ್ದ ಡಿಸಿಪಿ ಎಂ.ಮುತ್ತುರಾಜು ಈ ಸಂದರ್ಭ ಪೊಲೀಸ್ ಠಾಣೆ ಮಂಜೂರಾತಿಗೆ 1 ಎಕರೆ ಜಮೀನು ಮಂಜೂರು ಮಾಡಿಕೊಡಿ ಎಂದು ಮನವಿ ಮಾಡಿದ್ದಕ್ಕೆ, ಸಚಿವರು ನಿಮಗ್ಯಾಕೆ ಒಂದು ಎಕರೆ ಎಂದು ಗರಂ ಆದರು. ಮಧ್ಯಪ್ರವೇಶಿಸಿದ ಸಂಸದ ಪ್ರತಾಪಸಿಂಹ ಸಚಿವರ ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು. ‘ಮುತ್ತು ಚಾಮುಂಡಮ್ಮನ ಸೇವೆ ಮಾಡ್ರಪ್ಪ’ ಎಂದು ಸೋಮಣ್ಣ ಹೇಳಿದರು.

15ಕ್ಕೆ ಭೂಮಿ ಪೂಜೆ: ‘ಬಹುಮಹಡಿ ವಾಹನ ನಿಲ್ದಾಣದ ಬಳಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ನ.15ರಂದು ಭೂಮಿ ಪೂಜೆ ಮಾಡಲಾಗುವುದು. ಇಲ್ಲಿ 150 ವಾಣಿಜ್ಯ ಮಳಿಗೆ ನಿರ್ಮಿಸುತ್ತೇವೆ. ಇದರೊಳಗೆ ಫುಡ್‌ಕೋರ್ಟ್‌, ಸ್ನಾನಗೃಹ, ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಹೋಗುವ ಸ್ಥಳದ ಆಸುಪಾಸು 23 ಹಣ್ಣು ಕಾಯಿ ಅಂಗಡಿ ನಿರ್ಮಿಸಲಾಗುವುದು. ಏ ವಿನಯ್... ನೋಡಪ್ಪ ನಿಂಗ ಕೈಮುಗಿದು ಹೇಳ್ತೀನಿ. ಚಾಮುಂಡವ್ವನ ಸನ್ನಿಧಿಯ ಕೆಲಸವಿದು. ಒಂದ್ ರೂಪಾಯಿ ಸಹ ಅಪಚಾರ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೋಮಣ್ಣ ಎಂಜಿನಿಯರ್‌ಗೆ ಸೂಚಿಸಿದರು.

‘ದಕ್ಷಿಣ ಭಾರತದಲ್ಲೇ ಇರೋದು ಒಂದೇ ಚಾಮುಂಡಿ ಬೆಟ್ಟ. ಆಗಾಗ್ಗೆ ಇಲ್ಲಿಗೆ ಬಂದು ಮೂಲ ಸೌಕರ್ಯಗಳ ಕಡೆ ಗಮನಹರಿಸಿ ಎಂದು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಜಿ.ಪಂ. ಸಿಇಒಗೆ ಸೋಮಣ್ಣ ಸೂಚಿಸಿದರು. ನಂದಿ ವಿಗ್ರಹಕ್ಕೆ ತೆರಳುವ ರಸ್ತೆಗೆ ನಿರ್ಮಿಸಿದ್ದ ತಡೆಗೋಡೆ ಕುಸಿದ ಜಾಗದಲ್ಲಿ ₹ 1.40 ಕೋಟಿ ವೆಚ್ಚದಲ್ಲಿ 80 ಮೀಟರ್ ಕಾಮಗಾರಿ ನಡೆಸಲಾಗುವುದು’ ಎಂದು ಸಚಿವರು ಇದೇ ಸಂದರ್ಭ ಹೇಳಿದರು.

‘ನೋಡವ್ವ ತಾಯಿ ನಿನಗೆ ಮತ್ತೊಮ್ಮೆ ಕೈ ಮುಗಿದು ಬೇಡಿಕೊಳ್ಳುವೆ. ನಿಮ್ಮ ಅಧೀನದ ಕಟ್ಟಡವನ್ನು ತೆರವುಗೊಳಿಸಿಕೊಡಿ’ ಎಂದು ಸೋಮಣ್ಣ ಜಿ.ಪಂ.ಸಿಇಒ ಕೆ.ಜ್ಯೋತಿಗೆ ಮನವಿ ಮಾಡಿಕೊಂಡರು.

ಬೆಟ್ಟದಲ್ಲಿ ಟ್ರಾಫಿಕ್ ಜಾಮ್‌

ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ವಾಹನ ದಟ್ಟಣೆ ಹೆಚ್ಚಿತ್ತು. ದೇಗುಲದಿಂದ ಬಹು ದೂರದಲ್ಲೇ ವಾಹನ ಪ್ರವೇಶಕ್ಕೆ ಸಂಚಾರ ಪೊಲೀಸರು ಅವಕಾಶ ಕೊಡದಿದ್ದಕ್ಕೆ ಟ್ರಾಫಿಕ್ ಜಾಮ್‌ ನಿರ್ಮಾಣವಾಗಿತ್ತು.

ಸಚಿವ ಸೋಮಣ್ಣ ಭೇಟಿ ಪೂರ್ವ ನಿಗದಿತವಾಗಿದ್ದರೂ; ಪೊಲೀಸರು ಸಂಚಾರ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಸೋಮಣ್ಣ ಬೆಟ್ಟಕ್ಕೆ ಭೇಟಿ ನೀಡಿದ ಕೆಲ ಕ್ಷಣದಲ್ಲೇ ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಬಹುಮಹಡಿ ವಾಹನ ನಿಲ್ದಾಣದೊಳಗೆ ವಾಹನ ನಿಲ್ಲಿಸುವಿಕೆ ಆರಂಭವಾಯ್ತು. ಬೆರಳೆಣಿಕೆಯ ನಿಮಿಷಗಳಲ್ಲೇ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿತು. ವಾಹನಗಳು ಸರಾಗವಾಗಿ ಚಲಿಸಿದವು. ಭಕ್ತರು ನಿರಾಳವಾಗಿ ಪಯಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT