ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರ ಆರಂಭದ ಸೂಚನೆ: ಸಾಹಿತಿ ಜಿ.ಪಿ.ಬಸವರಾಜು ಅಭಿಮತ

‘ಮೌನ ಮುರಿಯಿರಿ‘
Last Updated 18 ಸೆಪ್ಟೆಂಬರ್ 2019, 14:59 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಸರ್ವಾಧಿಕಾರ ಆರಂಭದ ಸೂಚನೆ ದಟ್ಟೈಸುತ್ತಿದೆ. ಈ ಹಂತದಲ್ಲಿ ಸಮಾಜ ಮೌನವಾಗಿರುವುದು ಅಪಾಯಕಾರಿಯಾದುದು’ ಎಂದು ಸಾಹಿತಿ ಜಿ.ಪಿ.ಬಸವರಾಜು ಬುಧವಾರ ಇಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ‘ಬಸವರಾಜ ಕಟ್ಟೀಮನಿ ಸಾಹಿತ್ಯ: ಸಮಕಾಲೀನ ಸಂದರ್ಭ’ ವಿಚಾರ ಸಂಕಿರಣದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ‘ಹಿಟ್ಲರ್‌ ಆಡಳಿತದಲ್ಲೂ ಸಮಾಜ ಇದೇ ರೀತಿ ಮೌನವಾಗಿತ್ತು. ಆಗಿನ ಕೆಟ್ಟ ಸನ್ನಿವೇಶವನ್ನು ಅರಿತು, ಈಗ ಮೌನ ಮುರಿಯಲೇಬೇಕಿದೆ’ ಎಂದು ಹೇಳಿದರು.

ಪ್ರೊ.ಸಿ.ವಿ.ಪ್ರಭುಸ್ವಾಮಿ ಮಠ, ಡಾ.ಚಿಕ್ಕಮಗಳೂರು ಗಣೇಶ್‌, ಡಾ.ಸಂಧ್ಯಾ ಹೆಗಡೆ, ಡಾ.ಸರ್ಜಾಶಂಕರ ಹರಳಿಮಠ, ಡಾ.ನಾರಾಯಣ್ ಕ್ಯಾಸಂಬಳ್ಳಿ, ಡಾ.ಗಿರೀಶ್‌ ಮೂಗ್ತಿಹಳ್ಳಿ, ಡಾ.ಕುಪ್ನಳ್ಳಿ ಎಂ.ಭೈರಪ್ಪ ಸಂವಾದದಲ್ಲಿ ಭಾಗಿಯಾಗಿದ್ದರು.

ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಕಟ್ಟೀಮನಿ ಕುರಿತು ಮಾತನಾಡಿದರು.

ದುರ್ಬಲ: ‘ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಲ್ಲಿ ಪತ್ರಕರ್ತರು, ಸಾಹಿತಿಗಳು, ರಾಜಕಾರಣಿಗಳು ಪ್ರಮುಖ ಪಾತ್ರ ವಹಿಸಿದ್ದು, ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಪ್ರಸ್ತುತ ಈ ಮೂರು ಪಾತ್ರಗಳು ಇದೀಗ ದುರ್ಬಲಗೊಳ್ಳುತ್ತಿವೆ’ ಎಂದು ಪತ್ರಕರ್ತ ದಿನೇಶ್ ಅಮಿನ್‍ಮಟ್ಟು ವಿಷಾದಿಸಿದರು.

ಕಟ್ಟೀಮನಿ ಮತ್ತು ಪತ್ರಿಕಾರಂಗ ಕುರಿತಂತೆ ಮಾತನಾಡಿದ ಅವರು, ‘ಸಾಹಿತಿಗಳ ಕೆಲಸ ನಿರಪಾಯಕಾರಿ. ಯಾರನ್ನಾದರೂ ವಿಡಂಬನೆ ಮಾಡಬೇಕಾದರೆ ರೂಪಕ, ಉಪಮೆ ಬಳಸುತ್ತಾರೆ. ಆದರೆ, ಪತ್ರಕರ್ತ ನೇರವಾಗಿ, ಸರಳವಾಗಿ ಸ್ಪಷ್ಟವಾಗಿ ಬರೆಯಬೇಕು. ಇದರಿಂದಲೇ ಎಷ್ಟೋ ಪತ್ರಕರ್ತರು ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ’ ಎಂದರು.

‘ಜಗದ್ಗುರು ಒಬ್ಬರ ಅನಾಚಾರವನ್ನು ಬಯಲಿಗೆಳೆಯಲು ಕಟ್ಟೀಮನಿ ‘ಜರತಾರಿ ಜಗದ್ಗುರು' ಎಂಬ ಕಾದಂಬರಿಯನ್ನೇ ಬರೆದರು. ಈಗ ಹಾಗೆ ಬರೆಯಲು ಸಾಧ್ಯವೇ ? ಸ್ವಾಮೀಜಿ ವಿರುದ್ಧದ ಪ್ರಕರಣವೊಂದರಿಂದ ನ್ಯಾಯಮೂರ್ತಿಗಳೇ ಹಿಂದೆ ಸರಿಯುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಕಟ್ಟೀಮನಿ ಬದುಕು ಮತ್ತು ಹೋರಾಟ' ಕುರಿತು ಸಿದ್ದನಗೌಡ ಪಾಟೀಲ ಮಾತನಾಡಿ, ‘ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರ ಸಂದರ್ಭದಲ್ಲಿ ರೂಪುಗೊಂಡ ಲೇಖಕ ಕಟ್ಟೀಮನಿ. ಸಾಮಾಜಿಕ ಅನಿಷ್ಟಗಳನ್ನು ಧಿಕ್ಕರಿಸಿದ್ದರೂ ಸಮಾಜ ಅವರನ್ನು ಅದೇ ಅನಿಷ್ಟಗಳ ಸಂಕೋಲೆಯಲ್ಲೇ ಸಿಲುಕಿಸಿತ್ತು’ ಎಂದರು.

‘ಕಟ್ಟೀಮನಿ ವಿಧಿವಿಧಾನ ಇಲ್ಲದೇ ನನ್ನ ಅಂತ್ಯಸಂಸ್ಕಾರ ನಡೆಯಬೇಕು ಎಂದು ಕೊನೆಯಾಸೆ ಹೇಳಿಕೊಂಡಿದ್ದರು. ಆದರೆ, ವಿಧಿವಿಧಾನಗಳಿಂದಲೇ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಜಾತಿ ವಿರೋಧಿಸುತ್ತಿದ್ದ ಅವರನ್ನು ಜಾತಿಯಿಂದಲೇ ಜನ ಗುರುತಿಸಿದರು’ ಎಂದು ಕೆಲವು ಘಟನೆಗಳನ್ನು ಸಿದ್ದನಗೌಡ ನೆನಪಿಸಿಕೊಂಡರು.

‘ಗೋಕಾಕ್ ಚಳವಳಿ ಹೋರಾಟಕ್ಕೆ ಅಡಿಗಲ್ಲು ಇಟ್ಟವರು ಕಟ್ಟೀಮನಿ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹೋರಾಡಿದರು. ಪ್ರಗತಿಶೀಲ ಚಳವಳಿಗೂ ರೂಪಕೊಟ್ಟರು. ನೆಹರೂ ಸಿದ್ಧಾಂತ ಮಾದರಿಯ ಸಮಾಜವಾದಿಯಾಗಿ ಹೋರಾಡಿದರು’ ಎಂದು ಬಸವರಾಜರ ಹೋರಾಟದ ಹಾದಿಯನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT