ಶುಕ್ರವಾರ, ಆಗಸ್ಟ್ 19, 2022
27 °C
ದೂರು ನೀಡಲು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಸಲಹೆ

ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸರ್ಕಾರದ ಆದೇಶವಿದ್ದರೂ ಒಳಚರಂಡಿ ಕಾರ್ಮಿಕರ ಉದ್ಯೋಗ ಕಾಯಂಗೊಳಿಸಲು ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಪೌರಕಾರ್ಮಿಕರಿಂದ ವ್ಯಕ್ತವಾಯಿತು.

ಇಲ್ಲಿನ ಚಾಮುಂಡಿ ಅತಿಥಿಗೃಹದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಎಲ್ಲ ಸಂಘಟನೆಗಳ ಮುಖಂಡರು ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈಗಾಗಲೇ 280 ಹುದ್ದೆಗಳು ಖಾಲಿ ಇವೆ. ಹಾಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 231 ಜನ ಒಳಚರಂಡಿ ಪೌರಕಾರ್ಮಿಕರನ್ನು ನೇಮಕ ಮಾಡಬಹುದು. ಆದರೆ, ಅಧಿಕಾರಿಗಳಲ್ಲಿ ಇರುವ ಜಡತ್ವದಿಂದ ಸ್ಪಂದನೆಯೇ ಇಲ್ಲದಂತಾಗಿದೆ. ಆಯುಕ್ತರಿಗೆ ನೋಟಿಸ್ ನೀಡಬೇಕು ಎಂದು ಆಗ್ರಹಿಸಿದರು.

ಪೌರಕಾರ್ಮಿಕರನ್ನು ಕಾಯಂಗೊಳಿಸುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಒಳಚರಂಡಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಪಟ್ಟಿಯಿಂದ ಕೈಬಿಡಲಾಯಿತು. ಇವರಿಗೆ ಸಹಾಯಕರು ಎಂದು ಕರೆದು ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಮುಖಂಡ ರಾಚಯ್ಯ ಮಾತನಾಡಿ, ‘ಕಾಯಂ ಆಗದೇ ಇರುವ ಪೌರಕಾರ್ಮಿಕರು ಮೃತಪಟ್ಟರೆ ಅವರಿಗೆ ಪರಿಹಾರ ಸಿಕ್ಕುವುದಿಲ್ಲ. 30 ವರ್ಷಗಳಷ್ಟು ಕಾಲ ಕೆಲಸ ಮಾಡಿದವರೂ ಇಲ್ಲಿದ್ದಾರೆ. ಈಗಲಾದರೂ ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ಆಧುನಿಕ ಯಂತ್ರೋಪಕರಣಗಳಿದ್ದರೂ ಪೌರಕಾರ್ಮಿಕರು ಗುಂಡಿಯೊಳಗೆ ಇಳಿಯಲೇಬೇಕಿದೆ. ಕೈಗಳಿಂದಲೇ ಮಲವನ್ನು ಸ್ವಚ್ಛಗೊಳಿಸಲೇಬೇಕಿದೆ. ಇದು ವಾಸ್ತವ ಎಂದು ಅವರು ಹೇಳಿದರು.

ಮುಖಂಡರಾದ ಎನ್.ಮಾರ, ಆರ್.ಆರ್.ರಮೇಶ್, ಅರುಣ್‌ಕುಮಾರ್, ರಾಜೀವ್, ಗಣೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.