ಪ‍ಕ್ಷ ನೋಡದೇ ವ್ಯಕ್ತಿ ನೋಡಿದ್ದು ವಿಶೇಷ

7

ಪ‍ಕ್ಷ ನೋಡದೇ ವ್ಯಕ್ತಿ ನೋಡಿದ್ದು ವಿಶೇಷ

Published:
Updated:
Deccan Herald

ಒಂದು ಕಡೆ ಬಿಜೆಪಿ ನಿಮಗೆ ಟಿಕೆಟ್ ನಿರಾಕರಿಸಿತು. ಮತ್ತೊಂದೆಡೆ ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಜಾಹೀರಾತು ನೀಡಿತು. ಹೀಗಿದ್ದರೂ, ನೀವು ಭಾರಿ ಅಂತರದಿಂದ ಗೆಲುವು ಸಾಧಿಸಿದಿರಿ? ಇದು ಹೇಗೆ ಸಾಧ್ಯವಾಯಿತು?

ಈ ಬಾರಿಯ ಚುನಾವಣೆಯಲ್ಲಿ ನಮ್ಮ ವಾರ್ಡಿನ ಮತದಾರರು ಪಕ್ಷ ಹಾಗೂ ಜಾತಿ ನೋಡದೇ, ವ್ಯಕ್ತಿ ನೋಡಿ ಮತ ಹಾಕಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾನು ಸತತ ಎರಡು ಬಾರಿ ಇಲ್ಲಿಂದಲೇ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಸಾರ್ವಜನಿಕರು ಕರೆ ಮಾಡಿದಾಗಲೆಲ್ಲಾ ಕರೆ ಸ್ವೀಕರಿಸಿದ್ದೇನೆ. ಮಿಸ್‌ ಕಾಲ್ ಕೊಟ್ಟಾಗಲೂ ವಾಪಸ್ ಮಾಡಿದ್ದೇನೆ. ಅವರ ದೂರನ್ನು ಆಲಿಸಿ, ಸಾಧ್ಯವಿರುವಷ್ಟು ಮಟ್ಟಿಗೆ ಪರಿಹರಿಸಲು ಯತ್ನಿಸಿದ್ದೇನೆ. ಇವು ಒಂದು ಕಾರಣ. ಮತ್ತೊಂದು ಪ್ರಮುಖ ಕಾರಣ ಎಂದರೆ, ಪಕ್ಷ ನನ್ನನ್ನು ತಿರಸ್ಕರಿಸಿದಾಗ ರಾಜಕೀಯವೇ ಬೇಡ ಎಂದು ಕುಳಿತೆ. ಆಗ ಸಾರ್ವಜನಿಕರೇ ಮನೆಗೆ ಬಂದು ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂದು ಒತ್ತಾಯಿಸಿದರು. ಇದು ಅವರ ಒತ್ತಾಸೆಯಾಗಿತ್ತು. ಮತದಾರರ ಮನಸ್ಸನ್ನು ಗೆದ್ದಿದ್ದು ಗೆಲುವು ಸುಲಭ ಸಾಧ್ಯವಾಗುವಂತೆ ಮಾಡಿತು.

* ವಾರ್ಡ್‌ನ ಪ್ರಮುಖ ಸಮಸ್ಯೆಗಳೇನು?

ಉದ್ಯಾನಗಳು ಅಭಿವೃದ್ಧಿ ಆಗಬೇಕಿದೆ. ಎಲ್ಲ ಉದ್ಯಾನಗಳ ಅಭಿವೃದ್ಧಿ ಆಗಿಲ್ಲ ಎಂಬುದು ನಿಜ. ಉದ್ಯಾನಗಳು ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅತ್ಯಾವಶ್ಯಕ. ಹೀಗಾಗಿ, ಈ ಬಾರಿ ಅವುಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕೆಲವು ಕಡೆ ಮೋರಿ ಸಮಸ್ಯೆ ಇದೆ. ಇದರ ನಿವಾರಣೆಗೆ ಯೋಜನೆ ರೂಪಿಸುತ್ತೇನೆ. ಇನ್ನು ಹೊಸದಾಗಿ ಬಂಡಿಕೇರಿ ವಾರ್ಡ್‌ಗೆ ಸೇರ್ಪಡೆಯಾಗಿದೆ. ಇಲ್ಲಿನ ಸಮಸ್ಯೆಗಳನ್ನು ಅರಿಯಲು ಬಡಾವಣೆಯಲ್ಲಿ ಸಂಚರಿಸುತ್ತೇನೆ. ಗಮನಕ್ಕೆ ಬಂದ ಸಮಸ್ಯೆಗಳನ್ನೆಲ್ಲ ನಿವಾರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ.

* ನಿಮ್ಮದೇ ಯೋಜನೆಗಳು ಏನಿವೆ?

ಯುವಕರು ನನ್ನ ಗುರಿ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವಾರ್ಡ್‌ನಲ್ಲಿರುವ ನಿರುದ್ಯೋಗಿ ಯುವಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸುತ್ತೇನೆ. ಯಾವುದಾದರೂ ಅನುದಾನದಲ್ಲಿ ಆಟೊ ಕೊಡಿಸುವ ಯೋಚನೆ ಇದೆ. ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸುತ್ತೇನೆ.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತೇನೆ.

* ವಾರ್ಡ್ ಪುನರ್‌ ಹಂಚಿಕೆಯಿಂದ ನಿಮಗೆ ಕಷ್ಟ ಆಗಿದೆಯೇ?

ಖಂಡಿತವಾಗಿಯೂ ಇಲ್ಲ. ವಾರ್ಡ್‌ಗೆ ಹೊಸದಾಗಿ ಸೇರ್ಪಡೆಯಾದ ಭಾಗಗಳಿಗೆ ಹೋದಾಗ ಜನರು ‘ನಮಗೆ ಒಳ್ಳೆಯ ಕಾರ್ಪೋರೇಟರ್ ಬೇಕು. ಪಕ್ಕದ ವಾರ್ಡ್‌ನಲ್ಲಿ ಏನು ಮಾಡಿದ್ದೀರಿ ಎಂದು ನಮಗೆ ಗೊತ್ತಿದೆ. ಈಗ ನಮ್ಮ ಪ್ರದೇಶ ನಿಮ್ಮ ವಾರ್ಡ್‌ಗೆ ಸೇರುತ್ತಿದೆ. ನಾವು ಜಾತಿ, ಮತ, ಧರ್ಮ, ಪಕ್ಷ ನೋಡಿ ಮತ ಹಾಕುವುದಿಲ್ಲ. ವ್ಯಕ್ತಿ ನೋಡಿ ಮತ ಹಾಕುತ್ತೇವೆ. ನಮಗೆ ಕೆಲಸ ಮಾಡುವ ಕಾರ್ಪೋರೇಟರ್ ಬೇಕು’ ಎಂದು ಹೇಳಿದ್ದರು. ಹೀಗಿರುವಾಗ, ಕಷ್ಟ ಎಲ್ಲಿಯದು?

* ಅಧಿಕಾರಿಗಳ ಸಹಕರ ಪಡೆಯುವುದು ಸುಲಭವೇ?

ವಾರ್ಡ್‌ನ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳ ಸಹಕಾರ ಅತ್ಯಾವಶ್ಯಕವಾಗಿ ಬೇಕೇಬೇಕು. ಎಲ್ಲ ಅಧಿಕಾರಿಗಳೂ ಒಳ್ಳೆಯವರಲ್ಲ, ಎಲ್ಲ ಅಧಿಕಾರಿಗಳೂ ಕೆಟ್ಟವರಲ್ಲ. ಒಳ್ಳೆಯ ಅಧಿಕಾರಿಗಳ ಬಳಿ ನಯ, ವಿನಯದಿಂದ ಮನವಿ ಸಲ್ಲಿಸಬೇಕು. ಉದಾಸೀನ ಮಾಡುವ, ಆಲಸ್ಯ ತುಂಬಿ ಅಧಿಕಾರಿಗಳ ಬಳಿ ಜೋರು ದನಿಯಲ್ಲಿ ಕೇಳಿ ವಾರ್ಡ್‌ನ ಸಮಸ್ಯೆಗಳನ್ನು ನಿವಾರಿಸಕೊಳ್ಳಬೇಕು. ಪಾಲಿಕೆ ಸದಸ್ಯ ಹೇಗಿರುತ್ತಾರೋ ಹಾಗೇ ಅಧಿಕಾರಿಗಳೂ ಇರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !