ಯೋಧನ ಮನವಿಗೆ ತಡವಾಗಿ ಸ್ಪಂದಿಸಿದ ಪೊಲೀಸರು

7
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌

ಯೋಧನ ಮನವಿಗೆ ತಡವಾಗಿ ಸ್ಪಂದಿಸಿದ ಪೊಲೀಸರು

Published:
Updated:
ಪಿರಿಯಾಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಯೋಧ ಮಂಜುನಾಥ್‌ ತಂದೆ, ತಾಯಿ, ಪತ್ನಿ ಮತ್ತು ಸಂಬಂಧಿ ಗಣೇಶ್ ದೂರು ನೀಡಲು ಬಂದಿದ್ದರು

ಪಿರಿಯಾಪಟ್ಟಣ: ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಯೋಧ ಮಂಜುನಾಥ್ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್‌ ಆಗಿದೆ. ಇದರಿಂದ ಎಚ್ಚತ್ತ ಸ್ಥಳೀಯ ಠಾಣೆ ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ:  ತಾಲ್ಲೂಕಿನ ಮುತ್ತೂರು ಸಮೀಪದ ರಾಜೀವ್‌ ಗ್ರಾಮದ ನಿವಾಸಿ ಸಿಐಎಸ್ಎಫ್‌ ಯೋಧ ಮಂಜುನಾಥ್ ಅವರ ತಂದೆ ರಾಜು ಅವರು ಜೂನ್‌ 5ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗ್ರಾಮದ ಬಳಿ ಎದುರಿಗೆ ಬಂದ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ರಾಜು ಅವರ ಮೇಲೆ ಧನುಷ್ ಮತ್ತು ಸತೀಶ್‌ ಎಂಬುವವರು ಹಲ್ಲೆ ನಡೆಸಿದ್ದರು. ಹಲ್ಲೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಕುರಿತು ನ್ಯಾಯಕ್ಕಾಗಿ ಯೋಧ ವಿಡಿಯೊ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರಿಂದ ಸಿಪಿಐ ಎಚ್.ಎನ್.ಸಿದ್ದಯ್ಯ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುವನ್ನು ಮಾತನಾಡಿಸಿ ಈಗಾಗಲೇ ಅಪಘಾತ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ತಿಳಿಸಿದ್ದರು.

ಬುಧವಾರ ಯೋಧನ ತಂದೆ ರಾಜು, ತಾಯಿ ಸೀತಮ್ಮ, ಪತ್ನಿ ರೂಪಾ ಮತ್ತು ಸಂಬಂಧಿ ಗಣೇಶ್ ಅವರು ಪಟ್ಟಣದ ಪೊಲೀಸ್ ಠಾಣೆಗೆ ಬಂದು ಘಟನೆ ಕುರಿತಂತೆ ದೂರು ನೀಡಿದ್ದಾರೆ. ಪೊಲೀಸರು ಧನುಷ್ ಮತ್ತು ಸತೀಶ್‌ ಅವರನ್ನು ಬಂಧಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಮಂಜುನಾಥ್ ಕರ್ತವ್ಯ ನಿಮಿತ್ತ ಬುಧವಾರ ಬೆಳಿಗ್ಗೆ ಜಾರ್ಖಂಡ್‌ಗೆ ತೆರಳಿದ್ದು ತಮ್ಮ ಕುಟುಂಬದ ಸದಸ್ಯರ ರಕ್ಷಣೆಯ ಕುರಿತಂತೆ ಪಟ್ಟಣದ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಮೊದಲು ಜೂನ್ 7ರಂದು ಅಪಘಾತ ಬಗ್ಗೆ ದೂರು ದಾಖಲಾಗಿದ್ದು, ಆ ಸಂದರ್ಭದಲ್ಲಿ ದೂರುದಾರರು ಹಲ್ಲೆಯ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ  ಹಲ್ಲೆ ನಡೆದಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಯೋಧನ ಮಾತಿನ ವಿಡಿಯೊ ವೈರಲ್‌ ಆಗಿದ್ದರಿಂದ ಜಾಗೃತರಾದ ಪೊಲೀಸರು ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !