ರಾಜಕಾರಣ: ಮೈಸೂರಿನ ಕೊಡುಗೆ ಅಪಾರ

ಗುರುವಾರ , ಜೂನ್ 20, 2019
30 °C
ಹಲವು ನಾಯಕರನ್ನು ನೀಡಿದ ಜಿಲ್ಲೆ: ಮುಖ್ಯಮಂತ್ರಿ ಕುಮಾರಸ್ವಾಮಿ ಶ್ಲಾಘನೆ

ರಾಜಕಾರಣ: ಮೈಸೂರಿನ ಕೊಡುಗೆ ಅಪಾರ

Published:
Updated:
Prajavani

ಮೈಸೂರು: ಅರಸರ ಆಡಳಿತದಲ್ಲಿ ಅಭಿವೃದ್ಧಿ ಕಂಡಂತಹ ಮೈಸೂರು ಭಾಗ ಪ್ರಜಾಪ್ರಭುತ್ವ ಸರ್ಕಾರ ಅಸ್ವಿತ್ವಕ್ಕೆ ಬಂದ ಬಳಿಕವೂ ಉತ್ತಮ ನಾಯಕರನ್ನುಈ ರಾಜ್ಯಕ್ಕೆ ನೀಡಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೂಪ ಪ್ರಕಾಶನ ವತಿಯಿಂದ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್‌.ರಾಚಯ್ಯ ಅವರಿಂದ ಆರಂಭವಾದ ಜಿಲ್ಲೆಯ ರಾಜಕಾರಣದಲ್ಲಿ ಈಗಿನ ಯುವ ಪೀಳಿಕೆಯ ನಾಯಕರು ಹೊರಹೊಮ್ಮಿದ್ದಾರೆ. ಶಾಸಕರಾದ ಅನಿಲ್ ಕುಮಾರ್‌, ಯತೀಂದ್ರ ಸಿದ್ದರಾಮಯ್ಯ, ನಾಗೇಂದ್ರ, ಹರ್ಷವರ್ಧನ ಅವರು ಹೊಸ ತಲೆಮಾರಿನ ನಾಯಕರಾಗಿ ಬೆಳೆದಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು 13 ಬಜೆಟ್‌ಗಳನ್ನು ಮಂಡಿಸಿದ್ದರೆ, ವಿ.ಶ್ರೀನಿವಾಸಪ್ರಸಾದ್‌ ಅವರು 13 ಚುನಾವಣೆಗಳನ್ನು ಎದುರಿಸಿದ್ದಾರೆ. ಈ ಎರಡೂ ನಾಯಕರು ಜಿಲ್ಲೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಮೈಸೂರು ಜಿಲ್ಲೆ ಎಂದೂ ಜಾತಿಯ ಆಧಾರದಲ್ಲಿ ನಾಯಕರುಗಳನ್ನು ಗುರುತಿಸಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ ರಾಜಕಾರಣದ ಸೋಂಕು ಮೈಸೂರು ಜಿಲ್ಲೆಯಲ್ಲೂ ಪಸರಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಹೋಗುವುದು ಅಪರಾಧವೇ?: ನಾವು ದೇವಸ್ಥಾನಕ್ಕೆ ಹೋದರೆ ‘ಟೆಂಪಲ್‌ ರನ್‌’ ಎಂದು ಟೀಕಿಸುತ್ತಾರೆ. ನರೇಂದ್ರ ಮೋದಿ ಕೇದಾರನಾಥಕ್ಕೆ ಹೋಗಿರುವುದನ್ನು ಯಾವ ರನ್‌ ಎನ್ನಬೇಕು, ದೇವಸ್ಥಾನಕ್ಕೆ ಹೋಗುವುದು ಮಹಾ ಅಪರಾಧವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ಕರ್ನಾಟಕವನ್ನು ಕಟ್ಟಿ ಬೆಳೆಸುವಲ್ಲಿ ಮೈಸೂರಿಗರ ಪಾತ್ರ ಅಪಾರವಾದದ್ದು. ಟಿಪ್ಪು ಸುಲ್ತಾನ್‌ನಿಂದ ಹಿಡಿದು ಸಿದ್ದರಾಮಯ್ಯ ತನಕ ಹಲವಾರು ನಾಯಕರನ್ನು ಕಂಡಂತಹ ಜಿಲ್ಲೆ ಇದು ಎಂದು ತಿಳಿಸಿದರು.

‘ದೇವರಾಜ ಅರಸು ಅವರನ್ನು ಮೂರು ದಶಕಗಳ ಬಳಿಕವೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಅವರು ನೀಡಿದ್ದಂತಹ ಉತ್ತಮ ಆಡಳಿತ, ಕಾರ್ಯಕ್ರಮಗಳೇ ಇದಕ್ಕೆ ಕಾರಣ. ಅವರು ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತಿ ಪಡೆದವರು. ಎಚ್‌.ಎಂ.ಚನ್ನಬಸಪ್ಪ, ಬಸವಲಿಂಗಪ್ಪ, ಅಜೀಜ್‌ ಸೇಠ್‌ ಮುಂತಾದವರು ಅರಸು ಜತೆ ಕೆಲಸ ಮಾಡಿದ್ದಾರೆ. ನನ್ನನ್ನು ಕೂಡಾ ಅರಸು ಅವರೇ ಬೆಳೆಸಿದ್ದಾರೆ’ ಎಂದರು.

ಪ್ರಧಾನಿಗೆ ಹೆದರಿಕೆ: ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮದವರನ್ನು ಕಂಡರೆ ಹೆದರುತ್ತಾರೆ. ಪ್ರಧಾನಿಯಾದ ಬಳಿಕ ಮಾಡಿದ ಏಕೈಕ ಪತ್ರಿಕಾಗೋಷ್ಠಿಯಲ್ಲಿ ತಾವೊಬ್ಬರೇ ಪಾಲ್ಗೊಳ್ಳಲಿಲ್ಲ. ಅಮಿತ್‌ ಶಾ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿದ್ದರು. ನೆಹರೂ ಬಳಿಕ ಯಾವ ಪ್ರಧಾನಿ ಕೂಡಾ ಮಧ್ಯಮದವರಿಗೆ ಹೆದರಿಲ್ಲ. ಎಲ್ಲ ಪ್ರಧಾನಿಗಳು ತಮ್ಮ ಆಡಳಿತವನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಯಪಡಿಸುತ್ತಿದ್ದರು. ಆದರೆ ಮೋದಿ ಮಾಧ್ಯಮದವರಿಗೆ ಹೆದರಿದ್ದಾರೆ ಎಂದು ಟೀಕಿಸಿದರು.

ಪುಸ್ತಕ ಬಿಡುಗಡೆ: ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರ ‘ಸಮುದಾಯ ನಾಯಕರು’ ಮತ್ತು ‘ಸಮಾಜಮುಖಿ ಶ್ರೀಸಾಮಾನ್ಯರು’ ಪುಸ್ತಕಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ತನ್ವೀರ್‌ ಸೇಠ್‌, ಎಲ್‌.ನಾಗೇಂದ್ರ, ಅಶ್ವಿನ್‌ ಕುಮಾರ್‌, ಯತೀಂದ್ರ ಸಿದ್ದರಾಮಯ್ಯ, ಬಿ.ಹರ್ಷವರ್ಧನ, ಅನಿಲ್‌ಕುಮಾರ್, ವಿಧಾನಪರಿಷತ್‌ ಸದಸ್ಯರಾದ ಆರ್‌.ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್ ಮುಖಂಡ ವಾಸು, ಮೇಯರ್‌ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಚಿಂತಕ ಗುಬ್ಬಿಗೂಡು ರಮೇಶ್ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !