ಮಂಗಳವಾರ, ಜೂನ್ 28, 2022
26 °C
ಮೈಸೂರಿನ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಪ್ರಸ್ತುತವೂ ಶೇ 20ರ ಆಸುಪಾಸು ದಾಖಲು

ಮುಂಚೂಣಿಯಲ್ಲಿ ಮೈಸೂರು: ಜನರಲ್ಲಿಲ್ಲ ನಿಟ್ಟುಸಿರು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹತ್ತು ದಿನದ ಕಠಿಣ ಲಾಕ್‌ಡೌನ್‌ ಜಾರಿಯ ಬಳಿಕ, ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಕೋವಿಡ್‌ ಪಾಸಿಟಿವಿಟಿಯ ಪ್ರಮಾಣ ಅರ್ಧಕ್ಕರ್ಧ ತಗ್ಗಿದೆ.

ಕಠಿಣ ಲಾಕ್‌ಡೌನ್‌ ಜಾರಿಗೂ ಮುನ್ನ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ 40ರಿಂದ 50ರ ಆಸುಪಾಸಿತ್ತು. ಕೆಲವೊಂದು ದಿನ ಶೇ 50 ದಾಟಿದ್ದು ಇದೆ.

ಮೇ 28ರಂದು ಜಿಲ್ಲೆಯಾದ್ಯಂತ 4,232 ಜನರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ 40.3ರಷ್ಟಿತ್ತು. ಜೂನ್‌ 4ರಂದು 5802 ಮಂದಿಯ ತಪಾಸಣೆ ನಡೆದಿದ್ದು, ಪಾಸಿಟಿವಿಟಿ ದರ ಶೇ 19.2ರಷ್ಟಿದೆ.

ಕಠಿಣ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಪಾಸಿಟಿವಿಟಿಯ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಿರುವುದು ಹೊಸ ಆಶಾಭಾವ ಮೂಡಿಸಿದೆ. ಎರಡ್ಮೂರು ವಾರದಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ವೇಗ ಇನ್ನಷ್ಟು ತಗ್ಗಲಿದೆ ಎಂಬ ಭರವಸೆ ಅಧಿಕಾರಿ ಸಮೂಹದ್ದಾಗಿದೆ.

ಜಿಲ್ಲೆಯ ಅಂಕಿ–ಅಂಶವನ್ನು ದೇಶ, ರಾಜ್ಯದಲ್ಲಿ ದಾಖಲಾಗುತ್ತಿರುವ ಪಾಸಿಟಿವಿಟಿಯ ಪ್ರಮಾಣಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ಇಂದಿಗೂ ತುಸು ಹೆಚ್ಚೇ ಇದೆ.

ಮೈಸೂರು ಜಿಲ್ಲೆಯಲ್ಲಿ ನಿತ್ಯ ದಾಖಲಾಗುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರಸ್ತುತವೂ ನಾಲ್ಕಂಕಿಯಲ್ಲೇ ಇದೆ. ದಿನವೂ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿವೆ.

ಪಾಸಿಟಿವಿಟಿ ಪ್ರಮಾಣದಲ್ಲೂ ರಾಜ್ಯದಲ್ಲೇ ಮೈಸೂರು ಮುಂಚೂಣಿಯಲ್ಲಿದೆ. ಬಹುತೇಕ ಜಿಲ್ಲೆಗಳ ಪಾಸಿಟಿವಿಟಿ ಪ್ರಮಾಣ ಈಗಾಗಲೇ ಶೇ 10ರ ಆಸುಪಾಸಿನಲ್ಲಿದೆ. ಕೆಲವೊಂದು ಜಿಲ್ಲೆಗಳಲ್ಲಿ ಶೇ 10ಕ್ಕಿಂತಲೂ ಕಡಿಮೆ ದಾಖಲಾಗುತ್ತಿದೆ.

ಮೈಸೂರಿನ ಪಾಸಿಟಿವಿಟಿ ಪ್ರಮಾಣವನ್ನು ಇತರೆಡೆಗೆ ಹೋಲಿಸಿದಾಗ ಹೆಚ್ಚಿಗೆ ದಾಖಲಾಗುತ್ತಿರುವುದರಿಂದ, ಕೋವಿಡ್‌ ಎಂದೊಡನೆ ಜಿಲ್ಲೆಯ ಜನರು ಇಂದಿಗೂ ಏದುಸಿರು ಬಿಡುತ್ತಿದ್ದಾರೆ. ಸೋಂಕಿತರಿಗೆ ಆಮ್ಲಜನಕ ಸಹಿತ ಹಾಸಿಗೆಯ ಸೌಲಭ್ಯ ಸಿಕ್ಕರೂ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗೆ ಬೇಡಿಕೆ ಮುಂದುವರೆದಿದೆ. ನಿರಾಳತೆಯ ನಿಟ್ಟುಸಿರು ಬಿಡಲು ಇನ್ನೆಷ್ಟು ದಿನ ಬೇಕಿದೆ ಎಂಬ ಪ್ರಶ್ನೆ ಮೈಸೂರಿಗರದ್ದಾಗಿದೆ.

‘ವಾರದಲ್ಲೇ ಮೂರಂಕಿಗೆ ಬರಲಿದೆ’

‘ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಜಟಾಪಟಿ ನಡೆಯದೆ, ಎಲ್ಲವೂ ಸಮನ್ವಯದಿಂದ ಸುಸೂತ್ರವಾಗಿ ನಡೆದಿದ್ದರೆ ಈ ವೇಳೆಗೆ ಸೋಂಕು ಮೂರಂಕಿಯಲ್ಲಿರಬೇಕಿತ್ತು. ಆದರೆ ‘ಅಹಂ’ನ ತಿಕ್ಕಾಟಕ್ಕೆ ಜನರು ಹೈರಾಣಾಗಬೇಕಿದೆ. ಈ ವಾರದಲ್ಲೇ ಮೂರಂಕಿಗೆ ಇಳಿಯಲಿದೆ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

‘ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸೂಚನೆಯಂತೆ ಕೋವಿಡ್‌ ಪರೀಕ್ಷಾ ಸಂಖ್ಯೆ ಹೆಚ್ಚಳಗೊಳ್ಳಲಿದೆ. ಇದರಿಂದ ಪಾಸಿಟಿವ್‌ ದೃಢಪಡುವ ಸಂಖ್ಯೆಯಲ್ಲಿ ಒಂದಿಷ್ಟು ಹೆಚ್ಚಳವಾಗಬಹುದು. ಆದರೆ, ಪಾಸಿಟಿವಿಟಿಯ ಪ್ರಮಾಣ ಮೂರ್ನಾಲ್ಕು ದಿನದಲ್ಲಿ ಮತ್ತಷ್ಟು ಕಡಿಮೆಯಾಗಲಿದೆ. ಇದು ಸೋಂಕು ನಿಯಂತ್ರಿಸಲು ಸಹಕಾರಿಯಾಗಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು