ಇಂದಿನಿಂದ ಸ್ವಚತಾಕಾರ್ಯಕ್ಕೆ ಕಾಯಂ ಪೌರಕಾರ್ಮಿಕರು

7
ಕಾಯಂ ಪೌರಕಾರ್ಮಿಕರು, ರಾತ್ರಿ ಸ್ವಚ್ಛತಾಕಾರ್ಯದ ಸಿಬ್ಬಂದಿಯಿಂದ ಕಾರ್ಯಾಚರಣೆ ಆರಂಭ

ಇಂದಿನಿಂದ ಸ್ವಚತಾಕಾರ್ಯಕ್ಕೆ ಕಾಯಂ ಪೌರಕಾರ್ಮಿಕರು

Published:
Updated:
Deccan Herald

ಮೈಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಐದು ದಿನಗಳಿಂದ ಅಸಹಕಾರ ಚಳವಳಿ ನಡೆಸುತ್ತಿರುವ ಪೌರಕಾರ್ಮಿಕರ ಪೈಕಿ ಕಾಯಂ ನೌಕರರು ಇಂದಿನಿಂದ ಸ್ವಚ್ಛತಾಕಾರ್ಯಕ್ಕೆ ಮರಳಲು ನಿರ್ಧರಿಸಿದ್ದಾರೆ.

ಶನಿವಾರ ನಡೆದಿದ್ದ ಸಂಧಾನ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪೌರಕಾರ್ಮಿಕರ ಮುಖಂಡ ನಾರಾಯಣ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿರುವುದು ಹಾಗೂ ಮಂಗಳವಾರದಂದು ಬೆಂಗಳೂರಿನಲ್ಲಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಭಾಗಶಃ ಕೈಬಿಡಲು ಮುಖಂಡರು ತೀರ್ಮಾನಿಸಿದ್ದಾರೆ.

ನಗರದಲ್ಲೀಗ 2,426 ಪೌರಕಾರ್ಮಿಕರು ಇದ್ದಾರೆ. ಇವರ ಪೈಕಿ ಕಾಯಂ ನೇಮಕಾತಿ ಹೊಂದಿರುವವರು ಕೇವಲ 580 ಮಾತ್ರ. 1,846 ಮಂದಿ ಗುತ್ತಿಗೆ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಪೌರಕಾರ್ಮಿಕರು ಸೋಮವಾರದಿಂದ ಸ್ವಚ್ಛತಾಕಾರ್ಯಕ್ಕೆ ಮರಳುವಂತೆ ಭಾನುವಾರ ನಡೆದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲ್ಲದೇ, ದಸರೆಯ ಅಂಗವಾಗಿ ರಾತ್ರಿ ವೇಳೆಯಲ್ಲಿ ಸ್ವಚ್ಛತಾಕಾರ್ಯ ನಡೆಸಲು 280 ಮಂದಿಯನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಈ ಪೌರಕಾರ್ಮಿಕರು ಭಾನುವಾರ ರಾತ್ರಿಯಿಂದಲೇ ಸ್ವಚ್ಛತಾಕಾರ್ಯಕ್ಕೆ ಮರಳಿದ್ದಾರೆ.

‘ದಸರೆಯ ಸಂದರ್ಭದಲ್ಲಿ ನಾಗರಿಕರು ಹಾಗೂ ‍ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಬಾಕಿ 1,846 ಗುತ್ತಿಗೆ ಪೌರಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರೆಸುತ್ತಾರೆ. ಅವರಿಗೆ ಕಾಯಂ ನೌಕರರ ಬೆಂಬಲ ಇರುತ್ತದೆ. ಮಂಗಳವಾರ ಮುಖ್ಯಮಂತ್ರಿ ಜತೆಗಿನ ಸಭೆಯ ಯಶಸ್ಸನ್ನು ನೋಡಿಕೊಂಡು ಪ್ರತಿಭಟನೆಯನ್ನು ಸಂಪೂರ್ಣವಾಗಿ ಹಿಂಪಡೆಯುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಮುಖಂಡ ಎನ್.ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ನಾಲ್ಕು ದಿನದಿಂದ ಸ್ವಚ್ಛತಾಕಾರ್ಯ ನಡೆದಿರದ ಕಾರಣ, ದಿನವೊಂದಕ್ಕೆ 450 ಟನ್‌ನಂತೆ, ಐದು ದಿನದಿಂದ 2,250 ಟನ್ ಕಸ ಸೇರಿದೆ. ಕೇವಲ 580 ಪೌರಕಾರ್ಮಿಕರಿಂದ ಇಷ್ಟು ಪ್ರಮಾಣದ ಕಸ ತೆರವು ಅಸಾಧ್ಯ. ಹಾಗಾಗಿ, ಬುಧವಾರದಿಂದಲೇ ಸ್ವಚ್ಛತೆಯನ್ನು ನಾಗರಿಕರು ನಿರೀಕ್ಷಿಸಬಹುದು’ ಎಂದರು.

ಸ್ವಚ್ಛತಾ ಕಾರ್ಯಕ್ಕಿಳಿದ ಸ್ವೀಪಿಂಗ್‌ ಯಂತ್ರ:

ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಗಬ್ಬು ನಾರುತ್ತಿರುವ ಮೈಸೂರಿನ ರಸ್ತೆಗಳನ್ನು ಸ್ವಚ್ಛಗೊಳಿಸಲು ಮೈಸೂರು ಮಹಾನಗರಪಾಲಿಕೆಯು ಎರಡು ಸ್ವೀಪಿಂಗ್‌ ಯಂತ್ರಗಳನ್ನು ರಸ್ತೆಗಿಳಿಸಿದೆ.

ನಗರಪಾಲಿಕೆಯಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಬಳಸುತ್ತಿದ್ದ ಯಂತ್ರವನ್ನೇ ರಸ್ತೆ ಸ್ವಚ್ಛತೆಗೆ ಬಳಸಲು ಮಾರ್ಪಾಟು ಮಾಡಿಕೊಳ್ಳಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರದಿಂದಲೇ ಈ ಯಂತ್ರವು ಸ್ವಚ್ಛತೆಯಲ್ಲಿ ತೊಡಗಿದೆ.

ಅಲ್ಲದೇ, ಪಾಲಿಕೆ ಬಳಿ ಇರುವ ಮತ್ತೊಂದು ಬೃಹತ್‌ ಸ್ವೀಪಿಂಗ್ ಯಂತ್ರವನ್ನು ದುರಸ್ತಿಗೊಳಿಸಿ ಅದನ್ನೂ ಸ್ವಚ್ಛತಾಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ನಿರ್ವಹಿಸಲೆಂದು ಪುಣೆಯಿಂದ ಚಾಲಕನನ್ನು ಕರೆಸಲಾಗಿದೆ. ಈ ಯಂತ್ರವನ್ನು ರಸ್ತೆಗಳಲ್ಲಿ ದೂಳು ತೆಗೆಯಲು ಬಳಸಿಕೊಳ್ಳಲಾಗುವುದು ಎಂದು ನಗರಪಾಲಿಕೆ ಕಮಿಷನರ್ ಕೆ.ಎಚ್‌.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭರವಸೆಯ ಮಾತುಗಳಿಗೆ ಬಗ್ಗಬೇಡಿ...

‘ಪೌರಕಾರ್ಮಿಕರ ಸಮಸ್ಯೆ ಬಗೆಹರಿವುಸುವುದು ಸರ್ಕಾರದ ಜವಾಬ್ದಾರಿ. ಯಾವುದೇ ಭರವಸೆಯ ಮಾತುಗಳಿಗೆ ಬಗ್ಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ’ ಎಂದು ನಟ ಪ್ರಕಾಶ್ ರೈ ಪೌರಕಾರ್ಮಿಕರಿಗೆ ಹೇಳಿದರು.

ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎನ್ನುವ ಸರ್ಕಾರಗಳು ಪೌರ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಕೂಡದು. ದುಡಿಯುವ ಕೈಗಳಗೆ ಸಮಾನ ವೇತನ ನೀಡಬೇಕು. ಸರ್ಕಾರ ಹಾಗೂ ಅಧಿಕಾರಿಗಳ ಧೋರಣೆಯನ್ನು ನಾವು ಖಂಡಿಸಬೇಕಿದೆ’ ಎಂದರು.

ಸಾಹಿತಿ ದೇವನೂರು ಮಹಾದೇವ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !