ಮಂಗಳವಾರ, ಸೆಪ್ಟೆಂಬರ್ 17, 2019
25 °C
ನಾಡಕುಸ್ತಿ: ಪ್ರಕಾಶ್‌ ವಿರುದ್ಧ ಕಿರಣ್‌ ಭದ್ರಾವತಿಗೆ ಗೆಲುವು

ಪ್ರವೀಣ್‌ ಚಿಕ್ಕಳ್ಳಿ, ವಿಷ್ಣುಕೋಶೆ ಮಿಂಚು

Published:
Updated:
Prajavani

ಮೈಸೂರು: ಪ್ರೇಕ್ಷಕರ ಸಿಳ್ಳೆ, ಕೇಕೆ ನಡುವೆ ಬಿಗಿ ಪಟ್ಟುಗಳನ್ನು ಹಾಕಿದ ಮೈಸೂರಿನ ಪ್ರವೀಣ್‌ ಚಿಕ್ಕಳ್ಳಿ ಮತ್ತು ಪುಣೆಯ ವಿಷ್ಣುಕೋಶೆ ಅವರು ಇಟ್ಟಿಗೆಗೂಡಿನ 95ನೇ ಕರಗ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ನಾಡಕುಸ್ತಿಯ ‘ಮಾರ್ಫಿಟ್‌’ ಹಣಾಹಣಿಯಲ್ಲಿ ಗೆದ್ದುಬೀಗಿದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕುಸ್ತಿ ಪ್ರಿಯರನ್ನು ಪೈಲ್ವಾನರು ನಿರಾಸೆಗೊಳಿಸಲಿಲ್ಲ. ತೊಡೆ ತಟ್ಟುತ್ತಾ, ಅಖಾಡದಲ್ಲಿ ದೂಳೆಬ್ಬಿಸಿದರು. ಬಿಗಿಪಟ್ಟುಗಳನ್ನು ಹಾಕಿ ನೋಡುಗರನ್ನು ರೋಮಾಂಚನಗೊಳಿಸಿದರು.

ಎರಡು ಮಾರ್ಫಿಟ್‌ ಕುಸ್ತಿಗಳು ಒಳಗೊಂಡಂತೆ 25 ಜೊತೆ ನಾಡಕುಸ್ತಿ ನಡೆದವು. ಮೊದಲ ಮಾರ್ಫಿಟ್‌ ಕುಸ್ತಿಯಲ್ಲಿ ಪುಣೆಯ ವಿಷ್ಣುಕೋಶೆ ಹಾಗೂ ಹರಿಯಾಣದ ಲಕ್ಕಿ ಪೈಪೋಟಿ ನಡೆಸಿದರು. ಆರಂಭದಲ್ಲಿ ಸಮಬಲದ ಪೈಪೋಟಿ ಕಂಡುಬಂತು. ಆದರೆ ವಿಷ್ಣುಕೋಶೆ ಅವರು 20 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಮೈಸೂರಿನ ಫಕೀರ್ ಅಹಮ್ಮದ್‌ ಸಾಹೇಬರ ಗರಡಿಯ ಪ್ರವೀಣ್ ಚಿಕ್ಕಳ್ಳಿ ಮತ್ತು ಹಂಪಾಪುರದ ನಾಗೇಶ್ ನಡುವಿನ ಎರಡನೇ ಮಾರ್ಫಿಟ್‌ ಕುಸ್ತಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. 30 ನಿಮಿಷಗಳಲ್ಲಿ ಪ್ರವೀಣ್‌ ಅವರು ಎದುರಾಳಿಯನ್ನು ಚಿತ್‌ ಮಾಡಿದರು.

ಆರಂಭದ ಕೆಲವು ನಿಮಿಷ ಇಬ್ಬರೂ ಕುಸ್ತಿ ಆಡದೆ ರಕ್ಷಣೆಗೆ ಒತ್ತು ನೀಡಿದರು. ಆ ಬಳಿಕ ತುರುಸಿನ ಹಣಾಹಣಿ ಕಂಡುಬಂತು. ನಾಗೇಶ್‌ ಅವರು ಒಮ್ಮೆ ಎದುರಾಳಿಯನ್ನು ನೆಲಕ್ಕೆ ಬೀಳಿಸಿದರೂ ಚಿತ್‌ ಮಾಡಲು ವಿಫಲರಾದರು. ಪ್ರವೀಣ್‌ ಮರುಹೋರಾಟ ನಡೆಸಿ ಎದ್ದುನಿಂತರು. ಅಲ್ಪ ಸಮಯದ ಬಳಿಕ ಬಿಗಿಪಟ್ಟು ಹಾಕಿದ ಪ್ರವೀಣ್‌ ಅವರು ಎದುರಾಳಿಯನ್ನು ಮಣಿಸಿದರು.

ಪ್ರವೀಣ್‌ ಗೆಲ್ಲುತ್ತಿದ್ದಂತೆಯೇ ಅಖಾಡಕ್ಕೆ ಧಾವಿಸಿದ ಅಭಿಮಾನಿಗಳು ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು. ಈ ವೇಳೆ ಎರಡೂ ಪೈಲ್ವಾನರ ಬೆಂಬಲಿಗರ ನಡುವೆ ಕೆಲಹೊತ್ತು ನೂಕಾಟ, ತಳ್ಳಾಟ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕಿರಣ್‌ಗೆ ಗೆಲುವು: ಒಂದು ಗಂಟೆಯ ಕುಸ್ತಿಯಲ್ಲಿ ದಾವಣಗೆರೆ ಕ್ರೀಡಾನಿಲಯದ ಕಿರಣ್‌ ಭದ್ರಾವತಿ ಅವರು ಪ್ರಕಾಶ್‌ ಕರೋಟೆ ಅವರನ್ನು ಮಣಿಸಿದರು. ಈ ಹಣಾಹಣಿ ಕೇವಲ 10 ನಿಮಿಷಗಳಲ್ಲಿ ಕೊನೆಗೊಂಡಿತು. ಮಹಾರಾಷ್ಟ್ರದ ಓಂಕಾರ್‌ ಮಾರೆ ಮತ್ತು ಭೂತಪ್ಪನಗರಡಿಯ ಯಶ್ವಂತ್ ನಡುವಿನ 30 ನಿಮಿಷಗಳ ಕುಸ್ತಿ ಸಮಬಲದಲ್ಲಿ ಕೊನೆಗೊಂಡಿತು.

ಮೆಲ್ಲಹಳ್ಳಿಯ ಯೋಗೇಶ್‌, ತುಮಕೂರಿನ ಜಯಸಿಂಹ ವಿರುದ್ಧ; ರಮ್ಮನಹಳ್ಳಿಯ ರವಿ, ಹೊಸ ಆನಂದೂರಿನ ಕಿರಣ್‌ ವಿರುದ್ಧ; ರಮ್ಮನಹಳ್ಳಿಯ ರಾಮಚಂದ್ರ, ಮಾಗಡಿಯ ಶಿವಕುಮಾರ್‌ ವಿರುದ್ಧ; ಗಂಜಾಂನ ತೇಜಸ್‌, ಹುಣಸೂರಿನ ಶ್ರೀನಿವಾಸಮೂರ್ತಿ ವಿರುದ್ಧ; ಧಾರವಾಡದ ಧರಿಯಪ್ಪ, ಪುಣೆಯ ಗೋಪಿ ವಿರುದ್ಧ; ಪಡುವಾರಹಳ್ಳಿಯ ಚಂದ್ರು, ಪಾಂಡವಪುರದ ಶಿವು ವಿರುದ್ಧ; ನಂಜನಗೂಡಿನ ಸೂರ್ಯಕಾಂತ, ಕ್ಯಾತಮಾರನಹಳ್ಳಿಯ ಬಸವರಾಜು ವಿರುದ್ಧ, ಮೈಸೂರಿನ ಮಹಮ್ಮದ್‌ ರಾಜೀಖಾನ್, ಗಂಜಾಂನ ರವಿಚಂದ್ರ ವಿರುದ್ಧ; ಯಾಂದಳ್ಳಿಯ ಸ್ವಾಮಿ, ಗೋಪಾಲಸ್ವಾಮಿಣ್ಣನಗರಡಿ ವಿಶಾಲ್‌ ವಿರುದ್ಧವೂ ಜಯ ಪಡೆದರು.

ಏಳರ ಹರೆಯದ ಬಾಲಕರಾದ ಬೊಕ್ಕಹಳ್ಳಿಯ ಪವರ್ ಸುಮಂತ್ ಮತ್ತು ರಮ್ಮನಹಳ್ಳಿ ತರುಣ್ ನಡುವಿನ ಕುಸ್ತಿ ಪ್ರೇಕ್ಷಕರ ಗಮನ ಸೆಳೆಯಿತು. 10 ನಿಮಿಷ ನಡೆದ ಈ ಪಂದ್ಯ ಸಮಬಲದಲ್ಲಿ ಕೊನೆಗೊಂಡಿತು.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್, ಪುರುಷೋತ್ತಮ್, ಸಂದೇಶಸ್ವಾಮಿ, ಪಾಲಿಕೆ ಸದಸ್ಯ ಸಾತ್ವಿಕ್, ಪತ್ರಕರ್ತ ಕೆ.ಬಿ.ಗಣಪತಿ, ಬಿಜೆಪಿ ಮುಖಂಡ ರಘು ಕೌಟಿಲ್ಯ ಇದ್ದರು.

Post Comments (+)