ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹತಾಶ ಮನಸ್ಸುಗಳಿಗೆ ಉತ್ಸಾಹ ತುಂಬುವ 'ಪ್ರೇರಣ' ಕಾರ್ಯಕ್ಕೆ 22 ವರ್ಷ

ಅನುತ್ತೀರ್ಣರಾದವರಿಗೆ ದಾರಿದೀಪವಾದ ಅಕಾಡೆಮಿ
Last Updated 25 ಜೂನ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅನುತೀರ್ಣರಾದ ಮಾತ್ರಕ್ಕೆ ಜೀವನ ಮುಗಿಯುವುದಿಲ್ಲ; ಪ್ರಯತ್ನಿಸಿದರೆ ಫಲ ಖಚಿತ ಎನ್ನುವ ಸಂದೇಶ ಸಾರುತ್ತಾ, ಹತಾಶ ಮನಸ್ಸುಗಳಿಗೆ ಪ್ರೇರಣೆ ನೀಡುವ ಕೆಲಸದಲ್ಲಿ ತೊಡಗಿರುವ ನಗರದ ಪ್ರೇರಣ ಅಕಾಡೆಮಿ ಈಗ 22 ವಸಂತಗಳ ಸಂಭ್ರಮದಲ್ಲಿದೆ.

2000ನೇ ಇಸವಿಯಲ್ಲಿ ಆರಂಭವಾದ ಅಕಾಡೆಮಿಯು ಈವರೆಗೆ ಬರೋಬ್ಬರಿ 10ಸಾವಿರ ಮಂದಿಗೆ ಮಾರ್ಗದರ್ಶನ ನೀಡಿದೆ; ಆತ್ಮವಿಶ್ವಾಸ ತುಂಬಿದೆ. ಫೇಲಾದವರಲ್ಲಿ ಶೇ 85ರಷ್ಟು ಮಂದಿ ಮರು ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ. ಶೈಕ್ಷಣಿಕ ಜೀವನವನ್ನು ಮುಂದುವರಿಸಿದ್ದಾರೆ. ಇದಕ್ಕೆ ಪ್ರೇರಣಾದಾಯಕ ಕ್ರಮಗಳನ್ನು ಅಕಾಡೆಮಿ ಕೈಗೊಳ್ಳುತ್ತಿದೆ. ನಾಲ್ವರು ಕಾಯಂ ತರಬೇತುದಾರರೊಂದಿಗೆ 16 ಮಂದಿ ಅತಿಥಿ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದಿನ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳು. ಆ ಪರೀಕ್ಷೆಗಳಲ್ಲಿ ಫೇಲಾದಾಗ ಹತಾಶರಾದ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದುದ್ದನ್ನು ಕಂಡು ಎಸ್.ಎಸ್. ಭಟ್ ಅವರು ಆರಂಭಿಸಿದ ಅಕಾಡೆಮಿ ಇದು. ಮಕ್ಕಳಿಗೆ ಎಲ್ಲೋ ಒಂದು ಕಡೆ ಮಾರ್ಗದರ್ಶನದ ಕೊರತೆ ಇರುವುದನ್ನು ಗುರುತಿಸಿ ಅದನ್ನು ನಿವಾರಿಸಲು ಹಾಗೂ ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿಯ ಅಗತ್ಯವನ್ನು ಮನಗಂಡು ಅಕಾಡೆಮಿ ಪ್ರಾರಂಭಿಸಿದರು. ಈಗ ನಗರದ ಮೂರು ಕಡೆಗಳಿಗೆ ಚಾಚಿದೆ. ಬೋಗಾದಿ 2ನೇ ಹಂತ, ಗಂಗೋತ್ರಿ ಬಡಾವಣೆ ಹಾಗೂ ಸಿದ್ದಾರ್ಥ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಫಲವಾದವರು ಪ್ರಯತ್ನ ಬಿಡದೆ ಸಫಲವಾಗುವುದಕ್ಕೆ ಬೇಕಾದ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇಲ್ಲಿ ಕಲಿತವರು ಉನ್ನತ ಶಿಕ್ಷಣ ಪಡೆದಿದ್ದಾರೆ. ಕೆಲವರು ಒಳ್ಳೆಯ ಕೆಲಸವನ್ನೂ ಪಡೆದಿದ್ದಾರೆ.

‘ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಲಾಗುತ್ತದೆ. ನಮ್ಮಲ್ಲಿ ತರಬೇತಿ ಪಡೆದ ನಂತರವೂ ಪಾಸಾಗದಿದ್ದಲ್ಲಿ ಶುಲ್ಕದ ಶೇ 85ರಷ್ಟನ್ನು ಮರುಪಾವತಿಸಲಾಗುತ್ತದೆ. ಒಂದು ತಿಂಗಳು ಹಾಗೂ 8 ತಿಂಗಳ ತರಬೇತಿ ಲಭ್ಯವಿದೆ. ನಗರ, ಗ್ರಾಮೀಣ ಪ್ರದೇಶದವರು ಭಾಗವಹಿಸಿದ್ದಾರೆ. ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳೂ ಪ್ರಯೋಜನ ಪಡೆದಿದ್ದಾರೆ’ ಎನ್ನುತ್ತಾರೆ ಅಕಾಡೆಮಿಯ ತರಬೇತುದಾರ ಪ್ರದೀಪ್‌ಕುಮಾರ್ ಎನ್‌.ಬಿ.

‘ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದವರಲ್ಲಿ ಸರಾಸರಿ ಶೇ 60ರಷ್ಟು ಮಂದಿ ಪೂರಕ ಅಥವಾ ಮುಂದಿನ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆಲವರು ದ್ವಿತೀಯ ಶ್ರೇಣಿ ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬೇರೆ ಬೇರೆ ರಂಗದ ಸಂಪನ್ಮೂಲ ವ್ಯಕ್ತಿಗಳಿಂದಲೂ ಮಾರ್ಗದರ್ಶನ ಕೊಡಿಸಲಾಗುತ್ತದೆ. ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಿಸಲಾಗುತ್ತದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ 9845081342.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT