ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ ಮಹೋತ್ಸವ: ‘ಪ್ರಥಮ ಪ್ರಜೆ’ಯಿಂದ ಚಾಲನೆ ಪ್ರಥಮ

ನಾಡಹಬ್ಬ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು
Last Updated 11 ಸೆಪ್ಟೆಂಬರ್ 2022, 2:44 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈವರೆಗೆ ಸಾಹಿತಿಗಳು, ಪ್ರಾಜ್ಞರು, ರಾಜಕಾರಣಿಗಳು, ಕವಿಗಳು, ಪ್ರಗತಿಪರರು, ಮಠಾಧೀಶರು, ವಿದ್ವಾಂಸರು, ಚಲನಚಿತ್ರ ನಟರು ಮೊದಲಾದವರು ಉದ್ಘಾಟಿಸಿದ್ದರು. ರಾಷ್ಟ್ರಪತಿಯೊಬ್ಬರು ಚಾಲನೆ ನೀಡುತ್ತಿರುವುದು ಇದೇ ಮೊದಲು ಎನಿಸಲಿದೆ.

‘ಉದ್ಘಾಟನೆಗೆ ಆಗಮಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಸಮ್ಮತಿ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷ ನಾಡಹಬ್ಬವನ್ನು ಸರಳವಾಗಿ ಆಯೋಜಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ. ಇದರಿಂದಾಗಿ ಪ್ರವಾಸಿಗರು ಮತ್ತು ಜನರು ಹೆಚ್ಚಾಗಿ ಸೇರುವ ನಿರೀಕ್ಷೆ ಇದೆ. ಚಾಮುಂಡಿಬೆಟ್ಟದಲ್ಲಿ ನಡೆಯುವ ಸಾಂಪ್ರದಾಯಿಕ ಉದ್ಘಾಟನಾ ಸಮಾರಂಭದಲ್ಲಿ ಅತಿ ಗಣ್ಯರಾದ ‘ದೇಶದ ‍ಪ್ರಥಮ ಪ್ರಜೆ’ಯೇ ಭಾಗವಹಿಸುವುದರಿಂದ ಪೊಲೀಸ್ ಭದ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಅನಿವಾರ್ಯತೆ ಇರುತ್ತದೆ. ಇದರಿಂದ ಜನರು ಬಂದೋಬಸ್ತ್‌ ನೆಪದಲ್ಲಿ ಕಿರಿಕಿರಿ ಎದುರಿಸಬೇಕಾದ ಸಾಧ್ಯತೆಯೂ ಇರಲಿದೆ. ಇದು, ಜಿಲ್ಲಾಡಳಿತಕ್ಕೆ ಹೊಸ ಸವಾಲನ್ನು ಕೂಡ ತಂದಿಟ್ಟಿದೆ.

ರೈತ ಪುಟ್ಟಯ್ಯ ಉದ್ಘಾಟನೆ:

ಈ ಬಾರಿ ಬುಡಕಟ್ಟು ಮಹಿಳೆಯೊಬ್ಬರಿಗೆಅವಕಾಶಸಿಗುತ್ತಿದೆ. ಇತಿಹಾಸವನ್ನು ಗಮನಿಸಿದರೆ, ಹಿಂದೆ ದಸರೆಯನ್ನು ರಾಜ್ಯಪಾಲರು ಉದ್ಘಾಟಿಸಿದ್ದೂ ಇದೆ. 2015ರಲ್ಲಿ ರೈತ (ಎಚ್.ಡಿ.ಕೋಟೆ ತಾಲ್ಲೂಕು ಮಲಾರ ಕಾಲೊನಿಯ ಪುಟ್ಟಯ್ಯ) ಅವರಿಂದ ದಸರಾ ಉದ್ಘಾಟಿಸಲಾಗಿತ್ತು. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಆ ನಿರ್ಧಾರ ಕೈಗೊಳ್ಳಲಾಗಿತ್ತು.

ಚಲನಚಿತ್ರ ನಟರಾದ ಡಾ.ರಾಜ್‌ಕುಮಾರ್‌, ರೆಬಲ್‌ ಸ್ಟಾರ್ ಅಂಬರೀಷ್, ಬಿ.ಸರೋಜಾದೇವಿ ಅವರಿಗೂ ಈ ಗೌರವ ದೊರೆತಿದೆ. ಈ ಬಾರಿ ಸರ್ಕಾರವು ರಾಷ್ಟ್ರಪತಿಯನ್ನೇ ಆಹ್ವಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇದು, ಈ ಭಾಗದಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯದವರ ಖುಷಿಯನ್ನು ಹೆಚ್ಚಿಸಿದೆ.

‘ಈ ಬಾರಿ ನಾಡಹಬ್ಬ ಉದ್ಘಾಟನೆಗೆ ಮಾಜಿ ‍ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಆಹ್ವಾನಿಸಬೇಕು’ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ‘ಆಡಳಿತದಲ್ಲಿರುವ ರಾಜಕಾರಣಿಗಳನ್ನು ಆಹ್ವಾನಿಸಿದ ಉದಾಹರಣೆಗಳಿಲ್ಲ’ ಎಂದು ಹೇಳಿದ್ದರು. ಆದರೆ, ಸರ್ಕಾರವು ಅಧಿಕಾರದಲ್ಲಿರುವವರಿಗೇ ಮಣೆ ಹಾಕಿದೆ!

ದೇವೇಗೌಡರಿಂದ ಪ್ರಾರಂಭ:

‘ಹಿಂದೆ ಉದ್ಘಾಟನೆಗೆ ಮುಖ್ಯಮಂತ್ರಿ ಕೂಡ ಭಾಗವಹಿಸುತ್ತಿರಲಿಲ್ಲ. ಸ್ಥಳೀಯರೇ ಪಾಲ್ಗೊಳ್ಳುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದ್ದೂ ಇದೆ. 1995ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಪಾಲ್ಗೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಬರುವುದನ್ನು ರೂಢಿಸಿಕೊಂಡಿದ್ದರು’ ಎಂದು ಮಾಹಿತಿ ನೀಡಿದರು.

ನಂತರ ಬಂದ ಮುಖ್ಯಮಂತ್ರಿಗಳೆಲ್ಲರೂ ಪಾಲ್ಗೊಂಡಿದ್ದಾರೆ. ಜಂಬೂಸವಾರಿಗೆ ಚಾಲನೆಯನ್ನೂ ನೀಡುತ್ತಿದ್ದಾರೆ. ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತನ್ನು ರಾಜ್ಯಪಾಲರು ಉದ್ಘಾಟಿಸುವುದು ಸಂಪ್ರದಾಯದಂತೆಯೇ ಆಗಿ ಹೋಗಿದೆ. ಮುಖ್ಯಮಂತ್ರಿಗಳು ಕೂಡ ಭಾಗವಹಿಸುತ್ತಿದ್ದಾರೆ.

ಹೋದ ವರ್ಷ (2021) ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸಲಾಗಿತ್ತು. 2020ರಲ್ಲಿ ಕೊರೊನಾ ಮುಂಚೂಣಿ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಅವರಿಗೆ ಉದ್ಘಾಟನೆಯ ಗೌರವವನ್ನು ಸರ್ಕಾರ ನೀಡಿತ್ತು.

‘ಬೇರೆ ಬೇರೆ ಕಾರಣಗಳಿಗೆ...’

ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ‘ಕರ್ನಾಟಕಕ್ಕೆ ಮೀಸಲಾದ ಉತ್ಸವವಾದ್ದರಿಂದ ರಾಷ್ಟ್ರಪತಿ ಅಥವಾ ಪ್ರಧಾನಿ ಹುದ್ದೆಯಲ್ಲಿದ್ದವರನ್ನು ಉದ್ಘಾಟನೆಗೆ ಆಹ್ವಾನಿಸುವ ಯೋಚನೆಯನ್ನು ಹಿಂದೆ ಯಾರೂ ಮಾಡಿರಲಿಲ್ಲ. ಆದರೆ, ಈಗಿನ ಸರ್ಕಾರ ಬೇರೆ ಬೇರೆ ಕಾರಣಗಳಿಗೆ ಇದೇ ಮೊದಲಿಗೆ ರಾಷ್ಟ್ರಪತಿಯನ್ನು ಉದ್ಘಾಟನೆಗೆ ಆಹ್ವಾನಿಸಿದೆ. ಅವರು ನಿಜವಾಗಿಯೂ ಭಕ್ತಿಯಿಂದ ಬರುತ್ತಿದ್ದಾರೆಯೋ, ಪ್ರಚಾರಕ್ಕೆ ಬರುತ್ತಿದ್ದಾರೆಯೋ ನೋಡಬೇಕು’ ಎಂದು ಹೇಳಿದರು.

‘ಭಕ್ತಿ ಪ್ರದರ್ಶಿಸುವ ದಸರೆಯನ್ನು ಪ್ರಚಾರದ ಬದಲಿಗೆ, ಅರ್ಥಪೂರ್ಣವಾಗಿ ನಡೆಸುವುದನ್ನು ಆಡಳಿತಗಾರರು ರೂಢಿಸಿಕೊಳ್ಳಬೇಕು’ ಎಂದರು.

‘ದಸರಾ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಯ್ಕೆ ಮಾಡಿರುವುದು ಬಹಳ ಅರ್ಥಪೂರ್ಣವಾಗಿದೆ’ ಎಂದು ಇತಿಹಾಸ ತಜ್ಞ ಈಚನೂರು ಕುಮಾರ್‌ ಹೇಳಿದರು.

‘ಅಭಿನಂದನೆ ಸಲ್ಲಿಸುವೆ’

ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆ ಸಲ್ಲಿಸುವೆ.

–ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT