ನಿಷ್ಫಲಗೊಂಡ ಸಚಿವದ್ವಯರ ಮಾತುಕತೆ, ತೀವ್ರ ಸ್ವರೂಪ ಪಡೆದ ಪೌರಕಾರ್ಮಿಕರ ಪ್ರತಿಭಟನೆ

7
ಸಭೆ ಸಾಧ್ಯತೆ

ನಿಷ್ಫಲಗೊಂಡ ಸಚಿವದ್ವಯರ ಮಾತುಕತೆ, ತೀವ್ರ ಸ್ವರೂಪ ಪಡೆದ ಪೌರಕಾರ್ಮಿಕರ ಪ್ರತಿಭಟನೆ

Published:
Updated:
Deccan Herald

ಮೈಸೂರು: ನಗರದಲ್ಲಿ ನಡೆಯುತ್ತಿರುವ ಪೌರಕಾರ್ಮಿಕರ ಪ್ರತಿಭಟನೆ ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಸಚಿವದ್ವಯರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರಾದರೂ ಯಶಸ್ಸು ಸಿಗಲಿಲ್ಲ. ಸಚಿವರ ಭರವಸೆಗಳಿಗೆ ಸೊಪ್ಪು ಹಾಕದ ಪೌರಕಾರ್ಮಿಕರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ಬಂದ ಸಚಿವರು ದಸರೆ ಸನಿಹದಲ್ಲಿರುವಾಗ ಇಂತಹ ಪ್ರತಿಭಟನೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಬೇಡಿಕೆ ನ್ಯಾಯಯುತವಾದುದು ಎಂಬುದೇನೋ ನಿಜ. ಆದರೆ, ಅದರ ಈಡೇರಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ದಸರೆ ಮುಗಿದ ಬಳಿಕ ಕನಿಷ್ಠ ಒಂದು ತಿಂಗಳಾದರೂ ಸಮಯ ನೀಡಿದರೆ ಖಂಡಿತ ಬೇಡಿಕೆ ಈಡೇರಿಸುತ್ತೇವೆ’ ಎಂದು ಭರವಸೆ ನೀಡಿದರು.

ಆದರೆ, ಪೌರಕಾರ್ಮಿಕರ ಮುಖಂಡ ನಾರಾಯಣ ಮಾತನಾಡಿ, 2017ರ ಡಿಸೆಂಬರ್ 7ರಂದೇ ಸಚಿವ ಸಂಪುಟ ಸಭೆಯು ಗುತ್ತಿಗೆ ಪದ್ಧತಿ ರದ್ದುಪಡಿಸಲು ನಿರ್ಧರಿಸಿತ್ತು. ಇದನ್ನು ಕಾರ್ಯರೂಪಕ್ಕೆ ತರಲು ಇಷ್ಟು ತಿಂಗಳುಗಳು ಬೇಕೆ ಎಂದು ಪ್ರಶ್ನಿಸಿದರು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಸಾಕಷ್ಟು ತಿಂಗಳುಗಳು ಕಳೆಯಿತು. ನಿರಂತರವಾಗಿ ಬೇಡಿಕೆಯನ್ನು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 15 ದಿನಗಳ ಹಿಂದೆಯಷ್ಟೇ ಸಾಂಕೇತಿಕವಾಗಿ ಒಂದು ದಿನದ ಮಟ್ಟಿಗೆ ಪ್ರತಿಭಟನೆ ಮಾಡಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತೇವೆ ಎಂದು ಮಾಹಿತಿಯನ್ನೂ ನೀಡಲಾಗಿತ್ತು. ಈಗ ಮತ್ತೆ ಸಮಯ ಕೊಡಿ ಎಂದರೆ ಪೌರಕಾರ್ಮಿಕರು ಒಪ್ಪುವುದಿಲ್ಲ ಎಂದು ಹೇಳಿದರು.

ಸೇರಿದ್ದ ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ ತಕ್ಷಣ ಗುತ್ತಿಗೆ ಪದ್ಧತಿ ರದ್ದಾಗಬೇಕು ಎಂದು ಒತ್ತಾಯಿಸಿದರು. ಕೊನೆಗೆ, ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸಚಿವದ್ವಯರು ವಾಪಸ್ಸಾದರು. ಇದಕ್ಕೂ ಮುನ್ನ ಶಾಸಕ ನಾಗೇಂದ್ರ ಭೇಟಿ ನೀಡಿ ಪೌರಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.‌

 ಇಂದು ಸಭೆ?

ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಪೌರಕಾರ್ಮಿಕರ ಮುಖಂಡರೊಂದಿಗೆ ಶನಿವಾರ ಮಧ್ಯಾಹ್ನ ಸಭೆ ನಡೆಯುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಸಕರಾತ್ಮಕ ತೀರ್ಮಾನ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ.

ರಸ್ತೆಗಳಲ್ಲಿ ಕಸ:

ಕಳೆದ ಮೂರು ದಿನಗಳಿಂದ ರಸ್ತೆಗಳಲ್ಲಿ ಕಸ ಗುಡಿಸದೇ ಇರುವುದರಿಂದ ಬೀದಿ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಆಗಾಗ್ಗೆ ಬೀಳುವ ಮಳೆ ಕಸ ಕೊಳೆಯುವಂತೆ ಮಾಡಿದೆ. ಪ್ರತಿ ರಸ್ತೆಯೂ ಪ್ಲಾಸ್ಟಿಕ್‌ ಕವರ್‌ಗಳಿಂದ ಆವೃತ್ತವಾಗಿದೆ. ಸಾರ್ವಜನಿಕರ ಪರಿಸ್ಥಿತಿ ಅಸಹನೀಯ ಎನಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !