ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ರದ್ದು; ಬಿಎಸ್‌ವೈ ವಿರುದ್ಧ ಆಕ್ರೋಶ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಒಕ್ಕೊರಲ ಆಗ್ರಹ
Last Updated 3 ಆಗಸ್ಟ್ 2019, 19:55 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ರದ್ದುಗೊಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರಕ್ಕೆ ಟಿಪ್ಪು ಜಯಂತಿ ಆಚರಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ನಡೆದ ಪ್ರತಿಭಟನೆಯಲ್ಲಿ, ರದ್ದು ಆದೇಶ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಬರಗಾಲ, ನೀರು, ನಿರುದ್ಯೋಗ ಸೇರಿದಂತೆ ರಾಜ್ಯದ ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡದೆ, ಅಲ್ಪಸಂಖ್ಯಾತರ ಭಾವನೆಗಳಿಗೆ ನೋವುಂಟು ಮಾಡುವ ನಿರ್ಧಾರ ಕೈಗೊಂಡಿದ್ದು ಅಕ್ಷಮ್ಯ ಎಂದು ದೂರಿದರು.

ಬಿಎಸ್‌ವೈ ನಡೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಜಾರಿಯಾಗಿದ್ದ ಜನಪರ ಯೋಜನೆಗಳನ್ನು ರದ್ದು ಮಾಡುವ ಲಕ್ಷಣ ಗೋಚರಿಸುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೋರಾಟಗಾರರು ಆಗ್ರಹಿಸಿದರು.

ಸಾಹಿತಿ ಪ್ರೊ.ಭಗವಾನ್, ಸಂಘಟನೆಯ ಅಧ್ಯಕ್ಷ ಜಾಕೀರ್ ಹುಸೇನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಲ್ಲಿಗೇರಿಸಿ; ಅಸ್ಪೃಶ್ಯತೆ ತಡೆಗಟ್ಟಿ
ಮೈಸೂರು:
ಅತ್ಯಾಚಾರಿ, ಕೊಲೆಗಡುಕ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್ ಸೇಂಗಾರ್ ಮತ್ತು ಆತನ ಸಹಚರರನ್ನು ಗಲ್ಲಿಗೇರಿಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತೆ ಕುಟುಂಬಕ್ಕೆ ವರ್ಗಾಯಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.

ನಗರದ ಪುರಭವನದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಡಿಎಸ್‌ಎಸ್‌ ಕಾರ್ಯಕರ್ತರು, ಯೋಗಿ ಆದಿತ್ಯನಾಥ್‌ ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕೇರಳದಲ್ಲಿ ಶಾಸಕಿಯ ವಿರುದ್ಧವೇ ಅಸ್ಪೃಶ್ಯತಾ ಆಚರಣೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಎಲ್ಲಾ ಆರೋಪಿಗಳನ್ನು ಗಡಿಪಾರು ಮಾಡಲು ನಿರ್ದೇಶನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದೇಶಪ್ರೇಮಿ ಟಿಪ್ಪುಸುಲ್ತಾನ್ ಜಯಂತಿ ರದ್ದುಪಡಿಸಿದ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಇದೇ ಸಂದರ್ಭ ಆಗ್ರಹಿಸಿದರು.

ಚೋರನಹಳ್ಳಿ ಶಿವಣ್ಣ, ಕಿರಂಗೂರು ಸ್ವಾಮಿ, ಕೆ.ವಿ.ದೇವೇಂದ್ರ, ಉಮಾ ಮಹದೇವ್, ಮೂಡಳ್ಳಿ ಮಹದೇವ್, ಯಡದೊರೆ ಮಹಾದೇವಯ್ಯ, ಶಿವರಾಜು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹ
ರಾಜ್ಯ ಬಿಸಿಯೂಟ ತಯಾರಕರ ಸಂಘ ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟಿಸಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳ ಸುರಿಮಳೆಗೈದರು.

ನಿವೃತ್ತಿ ವೇತನವನ್ನು ಮಾಸಿಕ ಕನಿಷ್ಠ ₹ 3000 ಸಿಗುವಂತೆ ಯೋಜನೆ ರೂಪಿಸಬೇಕು. ಇಎಸ್ಐ, ಭವಿಷ್ಯ ನಿಧಿ ಯೋಜನೆ ಅನುಷ್ಠಾನಗೊಳಿಸಬೇಕು. ಅಡುಗೆ ಕೆಲಸದಲ್ಲಿ ನಿರತರಾಗಿರುವಾಗ ಆಕಸ್ಮಿಕ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಅಂಗವಿಕಲರಾಗಿದ್ದಲ್ಲಿ ಹಾಲಿ ಇರುವ ಪರಿಹಾರ ಧನ ಕಡಿಮೆಯಿದ್ದು, ಕನಿಷ್ಠ ₹ 5 ಲಕ್ಷ ಪರಿಹಾರ ಧನವನ್ನು ನೀಡುವ ವಿಮಾ ಯೋಜನೆ ಜಾರಿಗೊಳಿಸಿ. ಅಡುಗೆ ಮಹಿಳಾ ಸಿಬ್ಬಂದಿಯವರಿಗೆ 26 ವಾರಗಳ ಸಂಬಳ ಸಹಿತ ಹೆರಿಗೆ ರಜಾ ಸೌಲಭ್ಯ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಎಚ್.ಬಿ.ರಾಮಕೃಷ್ಣ, ಕೆ.ಕೆ.ಸೋಮರಾಜೇ ಅರಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಧಾನಿಗೆ ಅಂಚೆ ಪತ್ರ ಚಳವಳಿ
ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಯಲ್ಲಿನ ಸಮಸ್ಯೆ ನಿವಾರಿಸಲು ಒತ್ತಾಯಿಸಿ, ಪ್ರಧಾನಮಂತ್ರಿಗಳಿಗೆ ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ಅಂಚೆ ಪತ್ರ ಚಳವಳಿ ನಡೆಯಿತು.

ಪಾಲಿಕೆ ಮುಂಭಾಗ ನಡೆದ ಚಳವಳಿಯಲ್ಲಿ ಮಾತನಾಡಿದ ಹೋರಾಟಗಾರರು, ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಯ ಅವ್ಯವಸ್ಥೆಯಿಂದ ಮೈಸೂರು ಒನ್ ಹಾಗೂ ಅಧಿಕೃತ ಕೇಂದ್ರಗಳಲ್ಲಿ ಸಾರ್ವಜನಿಕರು ಮಧ್ಯರಾತ್ರಿಯಿಂದಲೇ ಪರದಾಡುವಂತಾಗಿದೆ. ಅಧಿಕಾರಿಗಳ ಉದಾಸೀನತೆಯಿಂದ ಸಾಮಾನ್ಯರು ತಮ್ಮ ಅಮೂಲ್ಯ ಸಮಯವನ್ನು ಆಧಾರ್ ನೋಂದಣಿಗೆ ಮೀಸಲಿಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಕೇಂದ್ರಗಳನ್ನು ನಗರಪಾಲಿಕೆಯಲ್ಲಿ ತೆರೆಯುವ ಮೂಲಕ ಅನುಕೂಲ ಮಾಡಿಕೊಡಬೇಕು. ಆಧಾರ ಕೇಂದ್ರಗಳು ಸುಲಿಗೆ ಕೇಂದ್ರಗಳಾಗಿದ್ದು, ನಿಯಂತ್ರಿಸುವ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದಾರೆ. ಪ್ರಧಾನಮಂತ್ರಿ ಆಧಾರ್ ಹೆಸರಿನಲ್ಲಿ ನಡೆಯುವ ಹಗಲು ದರೋಡೆ ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರುಬಸಪ್ಪ, ಗೋಪಿ, ಬೀಡಾ ಬಾಬು, ಪಾಪಣ್ಣಿ, ಮಹದೇವಸ್ವಾಮಿ, ಅರವಿಂದ, ಸೀಮೆಎಣ್ಣೆ ಮಾದಪ್ಪ, ಬಸವಣ್ಣ, ಸುನೀಲ್, ಕಾವೇರಮ್ಮ, ಸ್ವಾಮಿಗೈಡ್, ಶ್ರೀನಿವಾಸ ಅಂಚೆ ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT