ಅಮಾನತು ಖಂಡಿಸಿ ಕಾರ್ಮಿಕರ ಪ್ರತಿಭಟನೆ

7
ಜಪಾನ್ ದೇಶದ ಬಹುರಾಷ್ಟ್ರೀಯ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಆರೋಪ

ಅಮಾನತು ಖಂಡಿಸಿ ಕಾರ್ಮಿಕರ ಪ್ರತಿಭಟನೆ

Published:
Updated:
Deccan Herald

ಮೈಸೂರು: ಇಲ್ಲಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜಪಾನ್‌ ದೇಶದ ಬಹುರಾಷ್ಟ್ರೀಯ ಕಾರ್ಖಾನೆ ಮಿಟ್‌ಸುಭೀಷಿ ಹೆವಿ ಇಂಡಸ್ಟ್ರೀಸ್ – ವಿಎಸ್‌ಟಿ ಡೀಸೆಲ್ ಇಂಜಿನ್ ಪ್ರವೇಟ್ ಲಿಮಿಟೆಡ್ ಸಂಸ್ಥೆಯು ಕಾರ್ಮಿಕ ಸಂಘಟನೆಯ ನಾಲ್ವರು ಪದಾಧಿಕಾರಿಗಳು ಸೇರಿದಂತೆ ಒಟ್ಟು 6 ಮಂದಿ ಕಾರ್ಮಿಕರನ್ನು ಅಮಾನತುಗೊಳಿಸಿರುವುದರ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಎಂವಿಡಿಇ ವರ್ಕ್‌ಸ್ ಅಸೋಸಿಯೇಷನ್‌ ನೇತೃತ್ವದಲ್ಲಿ ಸೇರಿದ ಕಾರ್ಮಿಕರು ಘೋಷಣೆಗಳನ್ನು ಕೂಗಿದರು.

ಕಾರ್ಖಾನೆಯು ಕಳೆದ 10 ವರ್ಷಗಳಿಂದ ಇಲ್ಲಿ ಡೀಸೆಲ್ ಎಂಜಿನ್‌ಗಳನ್ನು ತಯಾರಿಸುತ್ತಿದೆ. ಸುಮಾರು 60 ಜನ ಕಾಯಂ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರೂ ಸೇರಿದಂತೆ ಸುಮಾರು 300 ಜನರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಇಲ್ಲಿ ಆರಂಭವಾದ ಕಾರ್ಮಿಕ ಸಂಘಟನೆಯು ಬೇಡಿಕೆಗಳ ಪಟ್ಟಿಯನ್ನು ಆಡಳಿತ ಮಂಡಳಿಗೆ ಸಲ್ಲಿಸಿತು. ಈಡೇರಿಸದೇ ಇದ್ದಾಗ ಸಹಾಯಕ ಕಾರ್ಮಿಕ ಆಯುಕ್ತರ ಮಧ್ಯಪ್ರವೇಶಕ್ಕೆ ಸಂಘ ಕೋರಿತು. ಇದರಿಂದ ಕೋಪಗೊಂಡ ಆಡಳಿತ ಮಂಡಳಿ ವಿನಾ ಕಾರಣ ಕಾರ್ಮಿಕರನ್ನು ಅಮಾನತುಗೊಳಿಸಿತು ಎಂದು ಕಾರ್ಮಿಕರು ದೂರಿದರು.

ಕಾರ್ಮಿಕ ಸಂಘ ಒಡೆಯುವ ಪ್ರಯತ್ನ:

ಆಡಳಿತ ಮಂಡಳಿಯು ಕಾರ್ಮಿಕ ಸಂಘದ ಸದಸ್ಯತ್ವ ಪಡೆಯದವರಿಗೆ ಮಾತ್ರ ವೇತನವನ್ನು ಹೆಚ್ಚು ಮಾಡಿತು. ಪ್ರೋತ್ಸಾಹಿತ ಬೋನಸ್‌ನ್ನೂ ನೀಡಿತು. ಈ ಸೌಲಭ್ಯಗಳನ್ನು ಕಾರ್ಮಿಕ ಸಂಘದ ಸದಸ್ಯತ್ವ ಪಡೆದವರಿಗೆ ನಿರಾಕರಿಸುವ ಮೂಲಕ ಕಾರ್ಮಿಕ ಸಂಘವನ್ನು ಒಡೆಯುವ ‍ಪ್ರಯತ್ನ ನಡೆಸಿತು ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದರಲ್ಲಿ ಯಶಸ್ಸು ಗಳಿಸದ ಆಡಳಿತ ಮಂಡಳಿ ಕೊನೆಗೆ ವಾರದ ರಜೆ ಬದಲಾವಣೆ, ಮೊಬೈಲ್ ಬಳಕೆ ನಿಷೇಧ, ಉತ್ಪಾದನೆಯ ಕಾಲದಲ್ಲಿ ಹೆಚ್ಚಳ ಸೇರಿದಂತೆ ಅನೇಕ ತೆರನಾದ ಕಿರುಕುಳಗಳನ್ನು ನೀಡಿತು. ಇದ್ಯಾವುದಕ್ಕೂ ಕಾರ್ಮಿಕರು ಪ್ರತಿಭಟನೆಗೆ ಇಳಿಯಲಿಲ್ಲ. ಈಗ 6 ಮಂದಿಯನ್ನು ವಿನಾಕಾರಣ ಕೆಲಸದಿಂದ ಅಮಾನತುಗೊಳಿಸಿದೆ. ಹೀಗಾಗಿ, ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಯಿತು ಎಂದು ಅವರು ಹೇಳಿದರು.

ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಅಧ್ಯಕ್ಷ ಬಿ.ಎಂ.ಆನಂದ್, ಕೆ.ಸಿ.ವೆಂಕಟೇಶ್, ಕಾರ್ಯದರ್ಶಿ ಎನ್.ನಾಗೇಂದ್ರ, ಖಜಾಂಚಿ ಸಿ.ಎಂ.ನಾಗೇಂದ್ರ ಸೇರಿದಂತೆ ಹಲವು ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !