ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಪ್ರತ್ಯೇಕ ರೈತ ಸಂಘಟನೆಗಳಿಂದ ಆಕ್ರೋಶ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ನಗರದಲ್ಲಿ ಭುಗಿಲೆದ್ದ ಪ್ರತಿಭಟನೆ
Last Updated 24 ಜೂನ್ 2020, 11:44 IST
ಅಕ್ಷರ ಗಾತ್ರ

ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಬುಧವಾರ ನಗರದಲ್ಲಿ ಹಲವೆಡೆ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತ್ಯೇಕವಾಗಿಯೇ ಪ್ರತಿಭಟನೆ ನಡೆಸಿ ಹಲವು ಶಾಸಕರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಲದರ್ಶಿನಿ ಅತಿಥಿಗೃಹದ ಮುಂದೆ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರೂ ರೈತರೊಂದಿಗೆ ಕೂರುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಶಾಸಕ ಸಾ.ರಾ.ಮಹೇಶ್ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.

ಶಾಸಕ ಎಸ್‌.ಎ.ರಾಮದಾಸ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಇದೇ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಶಾಸಕರಾದ ಎಲ್.ನಾಗೇಂದ್ರ, ತನ್ವೀರ್‌ಸೇಠ್ ಅವರೂ ಮನವಿ ಸ್ವೀಕರಿಸಿದರು.

ಮುಜುರಾಯಿ ಸಚಿವ ಕೋಟ ಶ್ರೀನಿವಾಸಪೂಜಾರಿ ಅವರಿಗೆ ಘೇರಾವ್ ಮಾಡಿದ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿ, ಈ ಕೂಡಲೇ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಇದೇ ರೀತಿ ಇವರು ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ ಅವರ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

‘ಉದ್ದೇಶ ಒಂದೇ ಆದರೂ ಎರಡೂ ಸಂಘಟನೆಗಳು ಒಂದೇ ದಿನ ಪ್ರತಿಭಟನೆ ನಡೆಸಿದರೂ, ಒಂದಾಗಿ ಪ್ರತಿಭಟನೆಗೆ ಇಳಿಯಲಿಲ್ಲ. ರೈತ ಸಂಘಟನೆಗಳಲ್ಲೇ ಒಗ್ಗಟ್ಟಿಲ್ಲ ಎಂಬುದಕ್ಕೆ ಇದು ದ್ಯೋತಕ. ಇನ್ನಾದರೂ ಈ ಸಂಘಟನೆಗಳು ಒಂದಾಗಿ ಪ್ರತಿಭಟನೆ ನಡೆಸಬೇಕು. ಆಗ ಬೇಡಿಕೆ ಈಡೇರಬಹುದು’ ಎಂದು ಪ್ರತಿಭಟನಾ ಸ್ಥಳದಲ್ಲಿದ್ದ ಹೆಸರು ಬಹಿರಂಗಪಡಿಸಲು ಬಯಸದ ರೈತರೊಬ್ಬರು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಎಂ.ಎಸ್.ಅಶ್ವತ್ಥನಾರಾಯಣ ರಾಜೇಅರಸ್, ಹೊಸಕೋಟೆ ಬಸವರಾಜು, ಸರಗೂರು ನಟರಾಜ್, ಪಿ.ಮರಂಕಯ್ಯ, ಹೊಸೂರು ಕುಮಾರ್ ಹಾಗೂ ಇತರರು ಇದ್ದರು.

ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಕುರುಬೂರ್ ಶಾಂತಕುಮಾರ್, ಸಾಮೂಹಿತ ನಾಯಕತ್ವ ರೈತ ಸಂಘದ ವಿದ್ಯಾಸಾಗರ್ ರಾಮೇಗೌಡ, ಅಖಂಡ ಕರ್ನಾಟಕ ರೈತ ಸಂಘದ ಸುಧೀರ್‌ಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್, ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT