ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟೆ ಯೋಜನೆ ಜಾರಿಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
Last Updated 5 ಆಗಸ್ಟ್ 2021, 7:36 IST
ಅಕ್ಷರ ಗಾತ್ರ

ಮೈಸೂರು: ಮೇಕೆದಾಟು ಅಣೆಕಟ್ಟೆ ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡಿನ ಕ್ರಮವನ್ನು ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ತಮಿಳುನಾಡು ಹಾಗೂ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಅಣ್ಣಾ ಮಲೈ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಕೆಲ ಸ್ವಯಂಘೋಷಿತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಾ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ತಮಿಳುನಾಡಿಗೆ ನೀರನ್ನು ಹರಿಸುತ್ತಾ ಬಂದಿದೆ. ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆಗೊಳಿಸಲೇಬೇಕು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ ಆಗ್ರಹಿಸಿದರು.‌

‘ಮೇಕೆದಾಟು ಯೋಜನೆಯ ವರದಿಯನ್ನು 2013ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ 440 ಮೆಗಾವಾಟ್‌ ವಿದ್ಯುತ್‌ ಲಭಿಸಲಿದೆ. ಅಣೆಕಟ್ಟೆಯಲ್ಲಿ 66 ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಯೋಜನೆಗೆ ಕರ್ನಾಟಕದ 12 ಸಾವಿರ ಎಕರೆ ಜಮೀನು ಮುಳುಗಡೆ ಆಗಲಿದೆ. ಆದರೂ ಈ ಯೋಜನೆಯನ್ನು ನಾವು ಬೆಂಬಲಿಸುತ್ತೇವೆ’ ಎಂದರು.

‘ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಗೆ ಈ ಸಾಲಿನಲ್ಲಿ ಪೂರೈಕೆ ಮಾಡುತ್ತಿರುವ ಕಬ್ಬಿಗೆ ₹2,500 ಮುಂಗಡ ಹಣ ನೀಡುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಕೂಡಲೇ ಪ್ರತಿಟನ್‌ಗೆ ₹3,500 ಮುಂಗಡ ಹಣ ನಿಗದಿಪಡಿಸಬೇಕು. ವಿದ್ಯುತ್‌ ಖಾಸಗೀಕರಣದಿಂದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ರೈತರ ಪಂಪ್‌ಸೆಟ್‌ಗಳು ಕತ್ತಲಲ್ಲಿ ಮುಳುಗುವ ಭೀತಿ ಎದುರಾಗಲಿದೆ. ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬಾರದು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ರಘು ಹಿಮ್ಮಾವು, ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್‌, ಜಿಲ್ಲಾ ಗೌರವಾಧ್ಯಕ್ಷ ಕೆ.ಬಿ.ಶಿವಪ್ರಸಾದ್‌, ಸತೀಶ್‌ ರಾವ್‌, ಮೂರ್ತಿ, ಕಳ್ಳಿಪುರ ಮಹದೇವಸ್ತಾಮಿ, ಶಿರಮಳ್ಳಿ ಮಂಜುನಾಥ್‌, ಶ್ರೀಧರ್‌, ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT