ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾನ್‌ಗೆ ಮಸಿ: ಪ್ರತಿಭಟನೆ

Last Updated 4 ಫೆಬ್ರುವರಿ 2021, 15:16 IST
ಅಕ್ಷರ ಗಾತ್ರ

ಮೈಸೂರು: ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದಿರುವುದನ್ನು ಖಂಡಿಸಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಗುರುವಾರ ನಗರದ ನ್ಯಾಯಾಲಯದ ಮುಂಭಾಗ ಪ್ರತಿಭಟಿಸಲಾಯಿತು.

‘ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸಾಹಿತಿ ಕೆ.ಎಸ್.ಭಗವಾನ್ ಸದಾ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ವಕೀಲೆ ಮೀರಾ ರಾಘವೇಂದ್ರ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದರು. ಈ ಕೃತ್ಯ ಖಂಡಿಸಿ, ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನ್ಯಾಯಾಲಯದ ಮುಂಭಾಗ ಜಮಾಯಿಸಿದ ವೇದಿಕೆ ಕಾರ್ಯಕರ್ತರು ‘ಮನುವಾದಿ ಧರ್ಮ ರೋಗಿಗಳಿಗೆ ಧಿಕ್ಕಾರ, ಭಗವಾನ್ ಮೇಲಿನ ಹಲ್ಲೆಗೆ ತೀವ್ರ ಖಂಡನೆ’... ಮತ್ತಿತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ವ್ಯಕ್ತಿಗತ ಹಿತಾಸಕ್ತಿ ಈಡೇರಿಸಿಕೊಳ್ಳಲು, ಪ್ರಚಾರ ಪಡೆಯಲು ನ್ಯಾಯಾಲಯವನ್ನೇ ಮೆಟ್ಟಿಲಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿ ಸಂವಿಧಾನ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ’ ಎಂದು ದೂರಿದರು.

‘ಭಗವಾನ್ ತಪ್ಪು ಮಾಡಿದ್ದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿ. ನಮ್ಮ ಅಭ್ಯಂತರವೇನಿಲ್ಲ. ಆದರೆ, ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿಯುವ ಮೂಲಕ, ಕಪ್ಪು ಕೋಟನ್ನು ಧರಿಸಿ ನ್ಯಾಯಾಲಯದ ಮಾನ ತೆಗೆಯುವ, ನ್ಯಾಯ ದೇವತೆಯ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಡೆ ಹೋರಾಟ ಇಂದು

ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ವೈಚಾರಿಕತೆ, ಮಾನವೀಯ ಹಾಗೂ ಸಂವಿಧಾನ ಮೌಲ್ಯಗಳಿಗೆ ಬದ್ಧರಾಗಿ ಬದುಕುತ್ತಿರುವ ಭಗವಾನ್ ಅವರ ಮುಖಕ್ಕೆ ಮಸಿ ಬಳಿದು, ಅವಿವೇಕತನದಿಂದ ವರ್ತಿಸಲಾಗಿದೆ. ಈ ಸಂಬಂಧ ಫೆ.5ರ ಶುಕ್ರವಾರದಿಂದಲೇ ರಾಜ್ಯ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

‘ಮೀರಾ ರಾಘವೇಂದ್ರ ಪ್ರಚಾರಕ್ಕಾಗಿ, ಬಿಜೆಪಿ ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ವೈಯಕ್ತಿಕವಾಗಿ ಟೀಕೆಗಳನ್ನು ವ್ಯಕ್ತಪಡಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಅದನ್ನು ಬಿಟ್ಟು ಈ ರೀತಿ ಅಸಭ್ಯವಾಗಿ ವರ್ತಿಸಿ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಇದಕ್ಕೆ ಎದೆಗುಂದುವುದಿಲ್ಲ. ಭಗವಾನ್ ಅವರಿಗೆ ನೈತಿಕ ಸ್ಥೈರ್ಯ ನೀಡುತ್ತೇವೆ’ ಎಂದು ತಿಳಿಸಿದರು.

‘ಮೀರಾ ರಾಘವೇಂದ್ರ ವಕೀಲ ವೃತ್ತಿ ನಡೆಸದಂತೆ ನಿರ್ಬಂಧ ಹೇರಬೇಕು’ ಎಂದು ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್‌, ಪ್ರಧಾನ ಕಾರ್ಯದರ್ಶಿ ಡೇರಿ ವೆಂಕಟೇಶ್‌, ಕನಕ ಯುವ ಸೇನೆ ರಾಜ್ಯ ಅಧ್ಯಕ್ಷ ಎ.ಎಚ್.ಕೃಷ್ಣೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT