ಮಂಗಳವಾರ, ಸೆಪ್ಟೆಂಬರ್ 21, 2021
21 °C
ಎನ್‌ಟಿಎಂ ಶಾಲೆ ಮುಂಭಾಗ ವರ್ತಕರಿಂದ ಧರಣಿ

ಶಾಲೆ ಉಳಿಸಿ ಪ್ರತಿಭಟನೆಗೆ 30 ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟದ ಒಕ್ಕೂಟವು ಶಾಲೆಯ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಒಂದು ತಿಂಗಳು ಪೂರೈಸಿತು. ಒಕ್ಕೂಟದ ಸದಸ್ಯರೊಂದಿಗೆ ದೇವರಾಜ ಮಾರುಕಟ್ಟೆ, ಮಂಡಿ, ವಾಣಿವಿಲಾಸ ಮಾರುಕಟ್ಟೆಯ ವರ್ತಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು. 

ಬೆಳ್ಳಾಳೆ ಬೆಟ್ಟೇಗೌಡ ಹಾಗೂ ಹೊಸಳ್ಳಿ ಶಿವು ಅವರು ‘ಮಾತು ಕೇಳು ಅಣ್ಣಯ್ಯ... ಮಾತು ಕೇಳೋ... ಕುತೂಂಡು ಮಾತನಾಡುವರ ಮಾತು ಕೇಳೋ’ ಎಂಬ ಗೀತೆಯನ್ನು ಹಾಡಿ ಗಮನ ಸೆಳೆದರು.

‘ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಮಾತು ಉಳಿಯಲಿ’ ಎಂಬ ಭಿತ್ತಿಫಲಕಗಳನ್ನು ಹಿಡಿದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪರಿಸರವಾದಿ ಭಾನುಮೋಹನ್ ಅವರು ಸ್ವಾಮಿ ವಿವೇಕಾನಂದ ಅವರ ಧಿರಿಸಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷ ಎನಿಸಿತ್ತು.

ಬೆಳ್ಳಾಳೆ ಬೆಟ್ಟೆಗೌಡ ಮಾತನಾಡಿ, ‘ಶಾಲೆಯ ಸಮಾಧಿಯ ಮೇಲೆ ವಿವೇಕಾನಂದ ಅವರ ಸ್ಮಾರಕ ನಿರ್ಮಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ವಿವೇಕಾನಂದ ಅವರ ಆಶಯದೊಂದಿಗೆ ಆರಂಭವಾದ ಶಾಲೆ ಇದು ಎಂಬುದೂ ಇವರಿಗೆ ಅರ್ಥವಾಗುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಮಹದೇವು, ಮಂಡಿ ಮಾರುಕಟ್ಟೆಯ ಅಧ್ಯಕ್ಷ ಪ್ರೇಮ್ ಕುಮಾರ್, ವಾಣಿವಿಲಾಸ ಮಾರುಕಟ್ಟೆಯ ಶಿವಕುಮಾರ್, ವರ್ತಕರಾದ ಮನೀಶ್ಕುಮಾರ್, ಕುಮಾರ್, ಹೀರಾಚಂದ್, ಹೋರಾಟ
ಗಾರರಾದ ಪ.ಮಲ್ಲೇಶ್, ಸ.ರ ಸುದರ್ಶನ, ಪುರುಷೋತ್ತಮ್, ಮಾಳವಿಕ ಗುಬ್ಬಿವಾಣಿ, ಅರಸು ಮಹಿಳಾ ಜಾಗೃತಿ ಸಭಾ ಇಂದುಕಲಾ ಅರಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.