ಮಂಗಳವಾರ, ಜೂನ್ 28, 2022
27 °C

₹ 12 ಕೋಟಿ ಸಿಎಸ್‌ಆರ್‌ ನಿಧಿ ಬಳಕೆ ಬಗ್ಗೆ ಪ್ರಶ್ನಿಸಿದ್ದೆ: ರೋಹಿಣಿ ಸಿಂಧೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ಬಂದ ₹ 12 ಕೋಟಿ ವಿಚಾರದ ಬಗ್ಗೆ ಪ್ರಶ್ನಿಸಿದ್ದೆ. ಎಲ್ಲವನ್ನು ಮೈಸೂರು ನಗರ ವ್ಯಾಪ್ತಿಗೆ ಬಳಸಿಕೊಂಡಿರಾ? ಯಾವುದಕ್ಕೆ ಖರ್ಚು ಮಾಡಿದ್ದೀರಿ, ಯಾರಿಗೆ ಕೊಟ್ಟಿದ್ದೀರಿ ಎಂದು ಮಾಹಿತಿ ಕೇಳಿದ್ದೆ. ಇದು ತಪ್ಪೇ’ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶುಕ್ರವಾರ ಇಲ್ಲಿ ಪ್ರಶ್ನಿಸಿದರು. 

‘ಎಲ್ಲವನ್ನೂ ನಗರಕ್ಕೆ ಖರ್ಚು ಮಾಡಲಾಗಿದೆ ಎಂಬುದಾಗಿ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಇದುವರೆಗೆ ಯಾವುದಕ್ಕೂ ಸರಿಯಾದ ಮಾಹಿತಿ ಕೊಟ್ಟಿಲ್ಲ’ ಎಂದರು. 

‘ವೈದ್ಯರ ನಡೆ ಹಳ್ಳಿಗಳ ಕಡೆ‌ ಯೋಜನೆಗಾಗಿ ಗ್ರಾಮಾಂತರ ಪ್ರದೇಶಕ್ಕೆ ಸಿಎಸ್‌ಆರ್‌ ನಿಧಿ ಬಳಸಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆಯುಕ್ತರು ಕೇವಲ ನಗರದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು, ನಂಜನಗೂಡು ತಾಲ್ಲೂಕಿನ ಕಾರ್ಖಾನೆ, ಕಂಪನಿಗಳಿಂದಲೂ ಸಿಎಸ್‌ಆರ್‌ ನಿಧಿ ಬಂದಿದೆ. ಆ ಪ್ರದೇಶಗಳಿಗೂ ನೀಡಬೇಕು ಎಂಬುದಾಗಿ ಅವರ ಬಳಿ ಲೆಕ್ಕ ಕೇಳಿದ್ದೆ’ ಎಂದು ಹೇಳಿದರು. 

ಇದನ್ನೂ ಓದಿ: 

‘ಪಾಲಿಕೆಯ ವಾರ್ಡ್‌ಗಳಲ್ಲಿ ಎಷ್ಟು ಕೊರೊನಾ ಸೋಂಕು ಪ್ರಕರಣಗಳಿವೆ ಎಂಬ ಬಗ್ಗೆಯೂ ಅವರು ಸರಿಯಾದ ಮಾಹಿತಿ ನೀಡಿಲ್ಲ’‌ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಯಾರಿಗೆ ಒತ್ತಡ ಇಲ್ಲ ಹೇಳಿ? ಕೇಂದ್ರದಿಂದ ಹಿಡಿದು ರಾಜ್ಯದವರೆಗೆ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರಿಗಿಂತ ಯಾರಿಗೆ ಹೆಚ್ಚು ಒತ್ತಡವಿದೆ? ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಬೇಕಲ್ಲವೇ’ ಎಂದು ಕೇಳಿದರು. 

‘ನಿಮ್ಮ ಸೀನಿಯರ್‌ ಮೇಲೆ ಅಸಮಾಧಾನವಿದ್ದರೆ ಕ್ಯಾಮೆರಾ ಮುಂದೆ ಬರುತ್ತೀರಾ? ಸೀನಿಯರ್‌ ಬಳಿ ಹೇಳಿಕೊಳ್ಳುತ್ತೀರಿ, ಇಲ್ಲವೇ ಲಿಖಿತ ದೂರು ನೀಡುತ್ತೀರಿ. ಎಲ್ಲದಕ್ಕೂ ಒಂದು ವ್ಯವಸ್ಥೆ, ಕ್ರಮ ಎಂಬುದು ಇರುತ್ತದೆ. ಕುಂದುಕೊರತೆ ಹೇಳಿಕೊಳ್ಳಲೂ ವೇದಿಕೆ ಇದೆ. ಆ ವ್ಯವಸ್ಥೆ ಮೀರಿ ಮಾತನಾಡಬಾರದು’ ಎಂದರು. 

‘ಶಿಲ್ಪಾನಾಗ್‌ ಫೆ.15ರಂದು ಮೈಸೂರು ನಗರಕ್ಕೆ ಪಾಲಿಕೆ ಆಯುಕ್ತರಾಗಿ ಬಂದರು. ಇತ್ತೀಚಿನವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಳೆದ 15 ದಿನಗಳಲ್ಲಿ ಮಾತ್ರ ಏಕೆ ಸಮಸ್ಯೆ‌’ ಎಂದು ಪ್ರಶ್ನಿಸಿದರು. 

ಇದನ್ನೂ ಓದಿ: 

‘ಅಧಿಕಾರಿಗಳಿಗೆ ಒಂದು ವೇದಿಕೆ ಹಾಗೂ ಹುದ್ದೆಯ ಶ್ರೇಣಿ ಇರುತ್ತದೆ. ಅವರಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಅಲ್ಲ. ಸರ್ಕಾರಕ್ಕೆ ವರದಿ ನೀಡುತ್ತೇನೆ. ಮುಖ್ಯ ಕಾರ್ಯದರ್ಶಿಯ ಗಮನಕ್ಕೂ ತಂದಿದ್ದೇನೆ’ ಎಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು