ಬುಧವಾರ, ಜನವರಿ 22, 2020
18 °C

ರಾಹುಲ್ ಗಾಂಧಿ ಮೊದಲು ಸಂಸತ್ತಿಗೆ ಬರಲಿ: ಶ್ರೀನಿವಾಸ ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಪಲಾಯನ ಮಾಡಿರುವ ರಾಹುಲ್ ಗಾಂಧಿ ಮೊದಲು ಸಂಸತ್ತಿಗೆ ಬರಲಿ, ಚರ್ಚೆಯಲ್ಲಿ ಭಾಗವಹಿಸಲಿ. ನಂತರ, ದೇಶದ ವಿದ್ಯಮಾನಗಳನ್ನು ಕುರಿತು ಪ್ರತಿಕ್ರಿಯಿಸಲಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

‘ದೇಶವು ಪ್ರಪಂಚದ ಅತ್ಯಾಚಾರಗಳ ರಾಜಧಾನಿ’ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆ ಕುರಿತು ಇಲ್ಲಿ ಭಾನುವಾರ ಸುದ್ದಿಗಾರರು ಗಮನ ಸೆಳೆದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಜಯ ಗಳಿಸಲಿದ್ದಾರೆ. ಒಂದು ವೇಳೆ ವಿಶ್ವನಾಥ್ ಸೋತರೂ ಪ್ರಪಂಚ ಏನೂ ಮುಳುಗಿ ಹೋಗುವುದಿಲ್ಲ ಎಂದು ಹೇಳಿದರು.

‘ತೊಡೆ ತಟ್ಟಿದ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎರಡರಲ್ಲೂ ಬಿದ್ದು ಹೋದರು. ಅವರಪ್ಪರಾಣೆ ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆಗಲ್ಲ ಎಂದರು. ನಂತರ ಇಬ್ಬರೂ ಸಿಎಂ ಆದರು. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ‘ವೈಟ್‌ ವಾಷ್’ ಆಯಿತು. ಈಗಲೂ ಇದೇ ಪರಿಸ್ಥಿತಿ ಆಗಲಿದೆ. ಹುಣಸೂರು ವಿಧಾನಸಭಾ ಕ್ಷೇತ್ರವಷ್ಟೇ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ ಧರ್ಮ ಮತ್ತು ಜಾತಿಯ ಪ್ರಭಾವಗಳು ವಿಜೃಂಭಿಸುತ್ತಿವೆ. ಇವುಗಳ ಸಂಕೋಲೆಗಳಿಂದ ಮನುಷ್ಯ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು