ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಗರದ ಹಲವೆಡೆ ರಾಮನಾಮ ಜಪ

ರಾಮಮಂದಿರಗಳಲ್ಲಿ ವಿಶೇಷ ಪೂಜೆ, ನೆನಪಾದ ರಾಮನವಮಿ
Last Updated 5 ಆಗಸ್ಟ್ 2020, 13:57 IST
ಅಕ್ಷರ ಗಾತ್ರ

ಮೈಸೂರು: ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಭೂಮಿಪೂಜೆಗೆ ಸಾಂಸ್ಕೃತಿಕ ನಗರಿಯಲ್ಲೂ ಬುಧವಾರ ಭರಪೂರ ಸ್ಪಂದನೆ ವ್ಯಕ್ತವಾಯಿತು.

ಹಲವು ರಾಮಮಂದಿಗಳು ಹಾಗೂ ಹನುಮ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ, ಜನರಿಗೆ ಸಹಿ ಹಂಚಿದರು. ಸಂಜೆಯ ವೇಳೆಗೆ ಹಲವು ಮನೆಗಳ ಮುಂದೆ ದೀಪಗಳು ಬೆಳಗಿದವು.

ಬೆಳಿಗ್ಗೆಯಿಂದಲೇ ಭಗವಾಧ್ವಜ, ತಳಿರು ತೋರಣ, ಕೇಸರಿ ಬಣ್ಣದ ಕಾಗದಗಳಿಂದ ರಾಮಮಂದಿರಗಳನ್ನು ಸಿಂಗರಿಸಿಲಾಗಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬಂದಿದ್ದರು.

ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನ, ಕೋದಂಡರಾಮ ದೇವಸ್ಥಾನ, ಒಂಟಿಕೊಪ್ಪಲಿನ ರಾಮಮಂದಿರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಚಾಮರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಒಂಟಿಕೊಪ್ಪಲಿನ ಪ್ರಸನ್ನ ಆಂಜನೇಯಸ್ವಾಮಿ ದೇಗುದಲ್ಲಿ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಿದರು. ಶಾಸಕ ಎಲ್.ನಾಗೇಂದ್ರ, ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ಪುನೀತ್ ಹಾಗೂ ಇತರರು ಇದ್ದರು.

ದೀಪ ಬೆಳಗುವ ಮೂಲಕ ಸಂಭ್ರಮ

ಕುಂಬಾರಕೊಪ್ಪಲಿನ ಬಿಜೆಪಿ ಕಾರ್ಯಕರ್ತರು ಮೇಗಲರಾಮಂದಿರದಲ್ಲಿ ದೀಪ ಬೆಳಗುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಉಪಾಧ್ಯಕ್ಷ ಕುಮಾರ್‌ಗೌಡ, ಜನಸ್ನೇಹಿ ಕೇಂದ್ರದ ನವೀನ್ ಹಾಗೂ ಇತರರು ಇದ್ದರು.

ಮುಸ್ಲಿಂ ಮುಖಂಡರು ಭಾಗಿ

ಬಿಜೆಪಿಯ ಚಾಮುಂಡೇಶ್ವರಿ ನಗರ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಶಾರದಾದೇವಿನಗರದ ‘ಶಾರದಾ ತ್ರಿಶಾಖಾ ವಿಪ್ರ ಬಳಗ’ದಲ್ಲಿ ಸೌಹಾರ್ದಯುತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಸ್ಲಿಂ ಧರ್ಮದ ಮುಖಂಡರು ಭಾಗಿಯಾದರು.

ಈ ವೇಳೆ ಗುಲಾಬಿ ನೀಡುವ ಮೂಲಕ ಶುಭ ಕೋರಿದ ಕಾರ್ಯಕರ್ತರು, ಅಲ್ಪಸಂಖ್ಯಾತ ಮುಖಂಡರನ್ನು ಅಭಿನಂದಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡರು.

ಮಂಡಲದ ಅಧ್ಯಕ್ಷ ಬಿ.ಎಂ.ರಘು, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸ್ಟೀಫನ್ ಸುಜಿತ್, ಶಾರದಾ ತ್ರಿಶಾಖಾ ವಿಪ್ರ ಬಳಗದ ಅಧ್ಯಕ್ಷ ಶ್ರೀಧರ ಶರ್ಮಾ, ಮಂಡಲದ ಉಪಾಧ್ಯಕ್ಷ ರಾಕೇಶ್‌ಭಟ್, ಪ್ರಧಾನ ಕಾರ್ಯದರ್ಶಿ ಎಚ್.ಜಿ.ರಾಜಾಮಣಿ ಹಾಗೂ ಇತರರು ಇದ್ದರು.

ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಸನ್ನ ಶಿವಲಿಂಗೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ದೇವರಿಗೆ ಪಾಲಿಕೆ ಸದಸ್ಯ ಶಿವಕುಮಾರ್ ಪೂಜೆ ನೇರವೇರಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಮುಖಂಡರಾದ ಲೋಕೇಶ್, ಶ್ರೀರಂಗಯ್ಯ, ಮೋಹನ್, ಹೇಮಂತ್ ಕುಮಾರ್, ಶಾಂತವೀರಪ್ಪ, ಉಪೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು.

ನೂರೊಂದು ಗಣಪತಿ ದೇವಾಲಯ ಸಮೀಪದ ಅರಳಿ ಕಟ್ಟೆಯ ಬಳಿ ಶ್ರೀರಾಮನ ಬೃಹತ್ ಚಿತ್ರಪಟವನ್ನಿರಿಸಿ, ರಂಗೋಲಿ ಬಿಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT