ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ನೇಗಿಲು ಹಿಡಿದ ಕುಂಚ ಕಲಾವಿದ ರವಿಚಂದ್ರ

ಹಂಡುವಿನಹಳ್ಳಿ ಸಮೀಪ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ; ಉತ್ತಮ ಆದಾಯ ಗಳಿಕೆ
Last Updated 29 ಜುಲೈ 2022, 3:57 IST
ಅಕ್ಷರ ಗಾತ್ರ

ನಂಜನಗೂಡು: ನಾಮಫಲಕ ಬರೆಯುವ ಕಲಾವಿದ ರವಿಚಂದ್ರ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ನಗರದ ರಾಷ್ಟ್ರಪತಿ ರಸ್ತೆಯಲ್ಲಿ ‘ನಂದಿನಿ ಆರ್ಟ್ಸ್’ ಸಂಸ್ಥೆಯನ್ನು ಆರಂಭಿಸಿ ಜಾಹೀರಾತು ಫಲಕ, ನಾಮಫಲಕಗಳನ್ನು ಬರೆಯುತ್ತಿದ್ದರು. ಆದರೂ ಕೃಷಿ ಕಡೆಗೆ ಇವರ ತುಡಿತವಿತ್ತು. ಹೀಗಾಗಿ, ಇದ್ದ ನಿವೇಶನವನ್ನು ಮಾರಿ, ತಾಲ್ಲೂಕಿನ ಹಂಡುವಿನಹಳ್ಳಿ ಸಮೀಪ ನಾಲ್ಕೂವರೆ ಎಕರೆ ಜಮೀನು ಖರೀದಿಸಿದರು.

ಕೃಷಿ ಕುಟುಂಬದ ಹಿನ್ನೆಲೆ ಹೊಂದಿರದ ಇವರು, ಯೂಟ್ಯೂಬ್‌ನಲ್ಲಿ ಸುಭಾಷ್ ಪಾಳೇಕರ್, ನಾರಾಯಣರೆಡ್ಡಿ ಅವರ ಕೃಷಿ ಸಂಬಂಧಿ ವಿಡಿಯೊಗಳನ್ನು ನೋಡಿ, ಅವುಗಳಿಂದ ಪ್ರೇರಿತ ರಾಗಿದ್ದರು. ಎರಡು ಕೊಳವೆ ಬಾವಿ ಕೊರೆಸಿದರು. 2020ರಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಖಾಲಿ ಕೈಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಟ್ಟಿ ನಿರ್ಧಾರ ಮಾಡಿದ ಅವರು, ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ₹8 ಲಕ್ಷ ವೆಚ್ಚದಲ್ಲಿ ಬಾಳೆ ಬೆಳೆದರು.

ಇವರಿಗೆ ಅವರ ಪತ್ನಿ ಕಮಲಾ, ಮಗ ಮುರಳಿಕೃಷ್ಣ, ಮಗಳು ರಶ್ಮಿ ಸಾಥ್‌ ನೀಡಿದರು.

ಬಾಳೆ ಬೆಳೆಯಿಂದ ₹26 ಲಕ್ಷ ಆದಾಯ ದೊರೆಯಿತು. ಬಾಳೆ ಜತೆಗೆ ನೆಟ್ಟಿದ್ದ 200 ತೆಂಗು, 30 ಅಡಿಕೆ, 200 ಮಹಾಘನಿ ಮರಗಳು ಈಗ ಬೆಳೆದು ನಳನಳಿಸುತ್ತಿವೆ.

ತೋಡದಲ್ಲಿ ಪಕ್ಷಿಗಳಿಗೆಂದೇ 150ಕ್ಕೂ ಹೆಚ್ಚು ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳಿಗೆ ಹೊಟ್ಟೆ ತುಂಬಾ ಆಹಾರ ಸಿಗುತ್ತಿರುವುದರಿಂದ ಬೆಳೆಗಳಿಗೆ ದಾಳಿಯಿಡುತ್ತಿಲ್ಲ.

ಸದ್ಯ 6,000 ಬಾಳೆ, 180 ತೆಂಗು, 15 ಹಲಸು, 15 ಮಾವು, 15 ಸೀತಾಫಲ, 15 ಸೀಬೆ, 15 ನಿಂಬೆ, 15 ಸಪೋಟ, 5 ಹೇರಳಿಕಾಯಿ, 5 ಕಿತ್ತಳೆ, 3 ಮೂಸಂಬಿ, 3 ಬೆಟ್ಟದನೆಲ್ಲಿ, 2 ಬೇಲ, 3 ನೇರಳೆ, 3 ಗೋಡಂಬಿ, 10 ಬಟರ್ ಫ್ರೂಟ್, 10 ದಾಳಿಂಬೆ, 1 ಚಕ್ಕೋತ, 1 ಪನ್ನೇರಳೆ, 150 ಮಹಾಗನಿ, 50 ತೇಗ, 30 ಸಿಲ್ವರ್, 400 ನುಗ್ಗೇಕಾಯಿ ಗಿಡಗಳನ್ನು ಬೆಳೆದಿದ್ದಾರೆ.

***

ರೈತರು ಯಾವುದಕ್ಕೂ ಕುಗ್ಗಬಾರದು. ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ.

–ರವಿಚಂದ್ರ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT