ಸೋಮವಾರ, ಆಗಸ್ಟ್ 3, 2020
23 °C
‘ನ್ಯಾಕ್‌’ ಉನ್ನತ ಮಾನ್ಯತೆಗಾಗಿ ನಡೆದಿದೆ ಸಿದ್ಧತೆ; ವಿದ್ಯಾರ್ಥಿ ಪ್ರತಿಕ್ರಿಯೆಯ ಮೇಲೆ ನಿಂತಿದೆ ವಿ.ವಿ ಪ್ರತಿಷ್ಠೆ

ಬೋಧಕರ ನೇಮಕಾತಿಯೇ ಮೈಸೂರು ವಿ.ವಿ.ಗೆ ಸವಾಲ್‌

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್‌) ಯಿಂದ ‘ಎ ಡಬಲ್‌ ಪ್ಲಸ್’ ಶ್ರೇಣಿ ಮಾನ್ಯತೆ ಪಡೆಯಲು, ಬೋಧಕರ ಕೊರತೆ ನೀಗಿಸುವುದೇ ದೊಡ್ಡ ಸವಾಲಾಗಿದೆ.

ಮೈಸೂರು ವಿಶ್ವವಿದ್ಯಾಲಕ್ಕೆ ಪ್ರೊ.ಎಸ್‌.ಎನ್‌.ಹೆಗ್ಡೆ, ಪ್ರೊ.ಜೆ.ಶಶಿಧರಪ್ರಸಾದ್ ಅವರು ಕುಲಪತಿಯಾಗಿದ್ದಾಗ ಪಂಚತಾರಾ ಮಾನ್ಯತೆ ದೊರಕಿತ್ತು (ಆಗ ಶ್ರೇಣಿ ವ್ಯವಸ್ಥೆ ಇರಲಿಲ್ಲ). ಆದರೆ, ಪ್ರೊ.ವಿ.ಜಿ.ತಳವಾರ್‌, ಪ್ರೊ.ಕೆ.ಎಸ್‌.ರಂಗಪ್ಪ ಅವಧಿಯಲ್ಲಿ ಬೋಧಕ ಸಿಬ್ಬಂದಿಯ ನೇಮಕಾತಿಗೆ ಅವಕಾಶ ಸಿಗದ ಕಾರಣ, ಸಂಖ್ಯೆ ಅತೀವ ಇಳಿಮುಖ ಕಂಡಿತು. ಅಂದಿಗೆ ಹೋಲಿಸಿದಲ್ಲಿ ಈಗ ವಿ.ವಿ.ಯಲ್ಲಿ ಕೇವಲ ಶೇ 49ರಷ್ಟು ಬೋಧಕ ಸಿಬ್ಬಂದಿ ಇದ್ದಾರೆ. ಬಹುತೇಕರು ನಿವೃತ್ತರಾಗಿದ್ದಾರೆ. ಇದು ‘ನ್ಯಾಕ್‌’ ಉನ್ನತ ಶ್ರೇಣಿ ಪಡೆಯಲು ದೊಡ್ಡ ತೊಡಕಾಗಿದೆ.

ಇದೇ ಕಾರಣದಿಂದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಸಾಂಸ್ಥಿಕ ಸ್ಥಾನಮಾನ ನಿರ್ಧರಿಸುವ ಸಂಸ್ಥೆ (ಎನ್ಐಆರ್‌ಎಫ್) ಮೈಸೂರು ವಿಶ್ವವಿದ್ಯಾಲಯಕ್ಕೆ ವಿ.ವಿ.ಗಳ ಪೈಕಿ 54ನೇ ರ‍್ಯಾಂಕ್‌ ನೀಡಿತ್ತು. ಇದು ವಿ.ವಿ.ಗೆ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನವನ್ನು ತಂದುಕೊಟ್ಟಿತ್ತಾದರೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಾಧನೆ ಅನ್ನಿಸಿಕೊಳ್ಳಲಾಗಲಿಲ್ಲ. ‘ಎನ್ಐಆರ್‌ಎಫ್’ ದೇಶದ ಒಟ್ಟು 4,867 ಸಂಸ್ಥೆಗಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು.

ನೇಮಕಾತಿಗೆ ಆದ್ಯತೆ: ಹಾಗಾಗಿ, ಬೋಧಕರ ಸಂಖ್ಯೆಯನ್ನು ತುಂಬಲು ವಿ.ವಿ ಆದ್ಯತೆ ನೀಡಿದೆ. ‘ನ್ಯಾಕ್‌’ ನಿಯಮದ ಪ್ರಕಾರ 10 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಇರಲೇಬೇಕು. ಮೈಸೂರು ವಿ.ವಿ.ಯ ಬೋಧಕರ ಸಂಖ್ಯೆ ಈಗ ಇದಕ್ಕಿಂತಲೂ ಕಡಿಮೆಯಾಗಿದೆ. ‘ಅದೃಷ್ಟವಶಾತ್‌ ರಾಜ್ಯ ಸರ್ಕಾರವು ಬ್ಯಾಕ್‌ಲಾಗ್‌ ಹಾಗೂ ಹೈದರಾಬಾದ್‌ ಕರ್ನಾಟಕ ಮೀಸಲಾತಿ ಅಡಿಯಲ್ಲಿ ನೇಮಕಾತಿ ನಡೆಸಲು ಅನುಮತಿ ಕೊಟ್ಟುಬಿಟ್ಟಿದೆ. ಚುನಾವಣಾ ನೀತಿ ಸಂಹಿತೆ ಇಷ್ಟು ದಿನ ಜಾರಿಯಲ್ಲಿತ್ತು. ಒಟ್ಟು 76 ಹುದ್ದೆಗಳು ಬ್ಯಾಕ್‌ಲಾಗ್‌ಗೆ 54 ಹುದ್ದೆಗಳು ಹೈದರಾಬಾದ್‌ ಕರ್ನಾಟಕ ಮೀಸಲಿಗೆ ಸಿಗಲಿವೆ. ಹಾಗಾಗಿ, ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ’ ಎಂದು ವಿ.ವಿ.ಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಈ ಸಂಖ್ಯೆ ಸಾಲದು. ವಿ.ವಿ.ಗೆ ಕನಿಷ್ಠವೆಂದರೂ ಹೆಚ್ಚುವರಿಯಾಗಿ 200 ಬೋಧಕ ಹುದ್ದೆ, 200 ಬೋಧಕೇತರ ಹುದ್ದೆಗಳನ್ನು ತುಂಬಬೇಕಿದೆ. ‘ಡಿಸೆಂಬರ್‌ ಒಳಗಾಗಿ ಈ ಪ್ರಕ್ರಿಯೆ ಮುಗಿದಲ್ಲಿ ನ್ಯಾಕ್ ‘ಎ ಡಬಲ್‌ ಪ್ಲಸ್’ ಮಾನ್ಯತೆ ಸಿಗಬಲ್ಲುದು. ರಾಜ್ಯ ಸರ್ಕಾರ ಇದಕ್ಕಾಗಿ ಮನಸು ಮಾಡಬೇಕು. ಹತ್ತು ವರ್ಷಗಳಿಂದಲೂ ಇಲ್ಲಿ ನೇಮಕಾತಿ ನಡೆದಿಲ್ಲ’ ಎಂದು ಹೇಳಿದರು.

‘ಎ ಡಬಲ್‌ ಪ್ಲಸ್’ ಮಾನ್ಯತೆ ಸಿಗಲು ಕನಿಷ್ಠ 3.51 (ಸಿಜಿಪಿಎ) ಗಿಂತ ಹೆಚ್ಚು ಅಂಕಗಳು ಸಿಗಬೇಕು. ಕಳೆದ ಬಾರಿ ವಿ.ವಿ.ಗೆ 3.47 ಅಂಕಗಳು ಸಿಕ್ಕಿದ್ದವು. ಈಗ ವಿ.ವಿ.ಗೆ ‘ಎ’ ಶ್ರೇಣಿ ಮಾನ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು