ಬುಧವಾರ, ಜೂನ್ 23, 2021
30 °C
ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಮನವಿಗೆ ಮಿಡಿದ ರೋಟರಿ ಕ್ಲಬ್‌

ಹಸಿದವರಿಗೆ ಅನ್ನ; ಸೇವಾನಿರತರ ಸೇವೆಗೂ ಸೈ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎರಡನೇ ಸುತ್ತಿನ ಲಾಕ್‌ಡೌನ್‌, ಬಿಗಿಕ್ರಮಗಳೊಂದಿಗೆ ಜಾರಿಯಾದ ಬೆನ್ನಿನಲ್ಲೇ ಮೈಸೂರಿನ ರೋಟರಿ ಕ್ಲಬ್‌ಗಳ ಸಮೂಹವು ಅಗತ್ಯವಿರುವವರ ನೆರವಿಗೆ ಧಾವಿಸಿದೆ.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್‌ ಅವರು ನಗರ ದಲ್ಲಿರುವ ನಿರಾಶ್ರಿತರಿಗೆ, ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಕಾಯಕಕ್ಕೆ ಸಾಥ್‌ ನೀಡುವಂತೆ ಕೋರಿದಾಗ, ಅವರ ಮನವಿಗೆ ಥಟ್ಟನೇ ಸ್ಪಂದಿಸಿದ್ದು ರೋಟರಿ ಸಮೂಹ.

ರೋಟರಿ ಸದಸ್ಯರೇ ಹಣ ಹಾಕಿ, ಅನ್ನದಾನಕ್ಕೆ ಮುಂದಾಗಿದ್ದಾರೆ. ಈ ಕಾಯಕವು ಲಾಕ್‌ಡೌನ್‌ ಜಾರಿಗೊಂಡ ಮೇ 10ರ ಸೋಮವಾರದಿಂದಲೇ ಆರಂಭವಾಗಿದೆ.

ರೋಟರಿಯ ಈ ಸೇವೆಯಿಂದಾಗಿ, ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಸರೆ ಪಡೆದಿರುವ 120 ನಿರ್ಗತಿಕರು, ಬಡವರ ಆಸ್ಪತ್ರೆ ಎಂದೇ ಮೈಸೂರು ಪ್ರಾಂತ್ಯದಲ್ಲಿ ಬಿಂಬಿತಗೊಂಡಿರುವ ಕೆ.ಆರ್‌.ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರ ಹೊಟ್ಟೆ ತುಂಬುತ್ತಿದೆ. ಛತ್ರದಲ್ಲಿ ಆಶ್ರಯ ಪಡೆದವರಿಗೆ ಚಾಪೆ, ಸಾಬೂನು, ಟೂತ್‌ಪೇಸ್ಟ್‌–ಬ್ರಶ್‌ಗಳನ್ನೂ ಒದಗಿಸಲಾಗಿದೆ.

ಅವರ ಈ ಕೈಂಕರ್ಯ ನಿರ್ಗತಿಕರು, ಅಸಹಾಯಕರಿಗಷ್ಟೇ ಸೀಮಿತವಾಗಿಲ್ಲ. ಕೋವಿಡ್‌ನ ದುರಿತ ಕಾಲದಲ್ಲಿ ಸ್ವಯಂಸೇವಕರಾಗಿ ಜಿಲ್ಲಾಡಳಿತ, ಪಾಲಿಕೆಯಲ್ಲಿ ದುಡಿಯುತ್ತಿರುವವರಿಗೂ ಸಿಗುತ್ತಿದೆ. ಮಧ್ಯಾಹ್ನದ ಹೊತ್ತು ಊಟಕ್ಕಾಗಿ ಪರದಾಡುವುದನ್ನು ತಪ್ಪಿಸಿದೆ.

ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಕೋವಿಡ್‌ ವಾರ್ ರೂಂನ 50 ಸಿಬ್ಬಂದಿಗೆ, ರೋಟರಿ ಸಭಾಂಗಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೆಲಿ ಕೌನ್ಸಿಲಿಂಗ್‌ನ 40 ಸಿಬ್ಬಂದಿ ಹಾಗೂ ಪಿಕೆ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 50ಕ್ಕೂ ಹೆಚ್ಚು ವೈದ್ಯಕೀಯ–ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ರೋಟರಿ ಸಮೂಹವು ಊಟದ ವ್ಯವಸ್ಥೆ ಮಾಡಿದೆ. ಲಾಕ್‌ಡೌನ್‌ ಮುಗಿಯುವವರೆಗೂ ಈ ಕಾಯಕವನ್ನು ಮುಂದುವರಿಸಿಕೊಂಡು ಬರಲು ನಿರ್ಧರಿಸಿರುವ ರೋಟರಿ ಸದಸ್ಯರು, ಇವರಲ್ಲದೇ ಅಗತ್ಯ ಇರುವ ಯಾರೇ ಇದ್ದರೂ ಅವರಿಗೆ ನೆರವಾಗುವುದಾಗಿ ಹೇಳುತ್ತಾರೆ.

ರೋಟರಿಯ ಈ ಸೇವೆಯನ್ನು ಪಾಲಿಕೆ ಆಡಳಿತ ಶ್ಲಾಘಿಸಿದೆ.

ಲಾಕ್‌ಡೌನ್‌ ಅವಧಿಯುದ್ದಕ್ಕೂ ಸೇವೆ

‘ಪಾಲಿಕೆಯ ಆಯುಕ್ತರ ಮನವಿ ಮೇರೆಗೆ ಮನೆಯಲ್ಲೇ ಐಸೊಲೇಷನ್‌ ಆದ ಸೋಂಕಿತರಿಗೆ ಮೆಡಿಸಿನ್‌ ಕಿಟ್‌ ಕೊಡಲು ರೋಟರಿ ಸಮೂಹ ಮುಂದಾಗಿದೆ. ರೋಟರಿಯ ಎಲ್ಲ ಸದಸ್ಯರು ವೈಯಕ್ತಿಕವಾಗಿ ಹಣ ಹಾಕಿದ್ದೇವೆ. ಎಷ್ಟು ದಿನ ಲಾಕ್‌ಡೌನ್‌ ಇರಲಿದೆಯೋ, ಅಷ್ಟು ದಿನವೂ ಮಧ್ಯಾಹ್ನ 12.30ಕ್ಕೆ ಹಾಗೂ ರಾತ್ರಿ 7.30ಕ್ಕೆ ಎರಡು ಹೊತ್ತು ಊಟವನ್ನು ಹಸಿದವರಿಗೆ ನೀಡುತ್ತೇವೆ’ ಎಂದು ಸಂಸ್ಥೆಯ ಜೋನಲ್‌ ಲೆಫ್ಟಿನೆಂಟ್‌ ಎನ್‌.ಎಸ್‌.ಆನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾತ್‌, ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ ಸೇರಿದಂತೆ ಇನ್ನಿತರೆ ಆಹಾರವನ್ನು ಪ್ಯಾಕೆಟ್ ಮಾಡಿ ಕೊಡಲಾಗುವುದು. ಪ್ರತಿಯೊಬ್ಬರಿಗೂ ಮೊಟ್ಟೆ, ಅರ್ಧ ಲೀಟರ್‌ ನೀರಿನ ಬಾಟಲಿಯನ್ನು ಸಹ ಪ್ರತಿ ಬಾರಿ ಪ್ರತ್ಯೇಕವಾಗಿ ಕೊಡುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಈಗಾಗಲೇ ನಮ್ಮಲ್ಲಿ ಒಂದು ವೇಳಾಪಟ್ಟಿ ಹಾಕಿಕೊಂಡಿದ್ದೇವೆ. ಅದರಂತೆ ತಮ್ಮ ಸರದಿ ಬಂದವರು ಕೇಟರರ್‌ ಬಳಿಯಿಂದ ಆಹಾರದ ಪೊಟ್ಟಣಗಳನ್ನು ಸಂಗ್ರಹಿಸಿಕೊಂಡು ನಿಗದಿತ ಸ್ಥಳಗಳಿಗೆ ತಲುಪಿಸುತ್ತಿದ್ದಾರೆ. ಸ್ವತಃ ವಿತರಿಸುತ್ತಾರೆ. ನಿತ್ಯವೂ 350ರಿಂದ 400 ಜನರಿಗೆ ಎರಡು ಹೊತ್ತು ಊಟ ಕೊಡುತ್ತಿದ್ದೇವೆ. ಸದ್ಯ ದಿನವೊಂದರ ಖರ್ಚು ಕನಿಷ್ಠ ₹ 15 ಸಾವಿರ ಆಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು