ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಆರ್‌.ಕೆ.ಲಕ್ಷ್ಮಣ್‌ ವಿಶೇಷ ಅಂಚೆ ಲಕೋಟೆ, ಅಂಚೆ ಚೀಟಿ ಬಿಡುಗಡೆ

ಜನ್ಮಶತಮಾನೋತ್ಸವ ಅಂಗವಾಗಿ ಹೊರತಂದ ಭಾರತೀಯ ಅಂಚೆ ಇಲಾಖೆ
Last Updated 24 ಅಕ್ಟೋಬರ್ 2021, 12:34 IST
ಅಕ್ಷರ ಗಾತ್ರ

ಮೈಸೂರು: ಭಾರತೀಯ ಅಂಚೆ ಕರ್ನಾಟಕ ವೃತ್ತವು ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಅಂಚೆ ಚೀಟಿಗಳನ್ನು ನಗರದ ನಜರ್‌ಬಾದ್‌ನ ಅಂಚೆ ತರಬೇತಿ ಕೇಂದ್ರದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

ವಿಶೇಷ ಅಂಚೆ ಲಕೋಟೆ ಮೇಲೆ ಆರ್‌.ಕೆ.ಲಕ್ಷ್ಮಣ್‌ ಭಾವಚಿತ್ರ, ಅವರ ‘ಸಾಮಾನ್ಯ ವ್ಯಕ್ತಿ’ಯ ವ್ಯಂಗ್ಯ ಚಿತ್ರದ ಅಂಚೆಚೀಟಿಗಳಿದ್ದು, ಇದಕ್ಕೆ ₹20 ದರ ನಿಗದಿಪಡಿಸಲಾಗಿದೆ. ಮೂರು ಅಂಚೆಚೀಟಿಗಳಲ್ಲಿ ಆರ್‌.ಕೆ.ಲಕ್ಷ್ಮಣ್‌ ಅವರು ಬರೆದಿರುವ ವ್ಯಂಗ್ಯಚಿತ್ರಗಳಿವೆ. ಈ ಮೂರು ಚೀಟಿಗಳಿಗೆ ₹75 ಶುಲ್ಕ ನಿಗದಿಪಡಿಸಲಾಗಿದೆ. ಇವು ಮೈಸೂರು ಪ್ರಧಾನ ಅಂಚೆ ಕಚೇರಿಯ ಅಂಚೆಚೀಟಿಗಳ ಸಂಗ್ರಹಾಲಯದಲ್ಲಿ ಲಭ್ಯ ಇದ್ದು, ಆಸಕ್ತರು ಖರೀದಿಸಬಹುದು.

ವಿಶೇಷ ಅಂಚೆ ಲಕೋಟೆ, ಅಂಚೆ ಚೀಟಿ ಬಿಡುಗಡೆ ಮಾಡಿದ ಮೈಸೂರು ವ್ಯಂಗ್ಯಚಿತ್ರಕಾರರ ಸಂಘದ ಸಂಸ್ಥಾಪಕ ಸದಸ್ಯ ಎಂ.ವಿ. ನಾಗೇಂದ್ರ ಬಾಬು ಮಾತನಾಡಿ, ‘ಜಗತ್ತಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡಿರುವ ಆರ್.ಕೆ. ಲಕ್ಷ್ಮಣ್‌ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಆರ್‌.ಕೆ.ಲಕ್ಷ್ಮಣ್‌ ಮೈಸೂರಿನ ದೇವರಾಜ ಮಾರುಕಟ್ಟೆ, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿನ ಜನಜೀವನವನ್ನು ನೋಡಿ ಚಿತ್ರಗಳನ್ನು ಬಿಡಿಸುತ್ತಿದ್ದರು. ಅವರಿಗೆ ಮೈಸೂರಿನ ಕುಕ್ಕರಹಳ್ಳಿ ಕೆರೆ ಇಷ್ಟವಾದ ಸ್ಥಳವಾಗಿತ್ತು. ಅಲ್ಲಿನ ಸೂರ್ಯೋದಯ ನೋಡಲು ಭೇಟಿ ಕೊಡುತ್ತಿದ್ದರು’ ಎಂದರು.

‘ದೈನಂದಿನ ಜೀವನದ ಘಟನೆ, ಸಮಸ್ಯೆಗಳ ಬಗ್ಗೆ ವಿಡಂಬನಾತ್ಮಕವಾಗಿ ವ್ಯಂಗ್ಯಚಿತ್ರ ಬಿಡಿಸುತ್ತಿದ್ದರು. ಅವರು ಪರಿಶ್ರಮಿ. ಒಂದು ಚಿತ್ರ ಬರೆಯಲು ಗಂಟೆಗಟ್ಟಲೆ ತಯಾರಿ ನಡೆಸುತ್ತಿದ್ದರು. ಆರ್‌.ಕೆ.ನಾರಾಯಣನ್‌ ಅವರ ‘ಮಾಲ್ಗುಡಿ ಡೇಸ್’ ಕಾದಂಬರಿ ಪ್ರಸಿದ್ಧಿ ಪಡೆಯಲು ಲಕ್ಷ್ಮಣ್‌ ಅವರ ಚಿತ್ರಗಳೇ ಕಾರಣ’ ಎಂದರು.

ಆರ್‌.ಕೆ.ಲಕ್ಷ್ಮಣ್ ಅವರಜನ್ಮಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ಪೋಸ್ಟ್‌ಮಾಸ್ಟರ್‌ ಶಾರದಾ ಸಂಪತ್‌, ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಎಂ.ಬಿ. ಗಜಬಾಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT