ಬುಧವಾರ, ಜೂನ್ 29, 2022
26 °C
ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕವೇ ನೆರವಾದ ಮೈಸೂರಿನ ಪಲ್ಲವಿ

ಉಕ್ರೇನ್‌ನಲ್ಲಿದ್ದವರಿಗೆ ಇಂಗ್ಲೆಂಡ್‌ನಿಂದಲೇ ಸಹಾಯಹಸ್ತ!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರಿಗೆ, ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾಗೇನಹಳ್ಳಿಯ ಡಾ.ಜಿ.ಕೆ.ಪಲ್ಲವಿ ಅವರು ಇಂಗ್ಲೆಂಡ್‌ನಲ್ಲಿದ್ದುಕೊಂಡೇ ಆನ್‌ಲೈನ್‌ ಮೂಲಕ ನೆರವು–ಮಾರ್ಗದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್‌ ಆಫ್ ಪಬ್ಲಿಕ್ ಹೆಲ್ತ್ ಇಂಟರ್‌ನ್ಯಾಷನಲ್ (ಎಂಪಿಎಚ್‌) ಓದುತ್ತಿರುವ ಅವರು, ಉಕ್ರೇನ್‌ನ ಸುಮಿ ಪ್ರಾಂತ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

‘ರಾಜ್ಯ ವಿಪತ್ತು ನಿರ್ವಹಣೆ ಉಸ್ತುವಾರಿ ನೋಡಲ್ ಅಧಿಕಾರಿ ಮನೋಜ್‌ ರಾಜನ್‌ ಅವರಿಂದ ಸುಮಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳ ವಿವರ ಪಡೆದು, ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, ಯಾರಿಗೆ ಏನು ಬೇಕು ಎಂಬ ಸಂದೇಶ ಆಧರಿಸಿ ಸುಮಿ ಪ್ರಾಂತ್ಯದಲ್ಲಿದ್ದ ಸ್ನೇಹಿತರು, ಶೈಕ್ಷಣಿಕ ಸಲಹೆಗಾರರ ಗಮನ ಸೆಳೆದಿದ್ದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ನೀರು, ಆಹಾರ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಯಿತು. ಇತರೆ ದೇಶಗಳಲ್ಲಿರುವ ಸ್ನೇಹಿತರನ್ನೂ ಸಂಪರ್ಕಿಸಿ, ಸುಮಿ ಪ್ರಾಂತ್ಯದಲ್ಲಿದ್ದ ಅವರ ಸ್ನೇಹಿತರ ನೆರವನ್ನೂ ಪಡೆದೆ’ ಎಂದರು.

‘ಉಕ್ರೇನ್‌ನ ಕೀವ್, ಹಾರ್ಕೀವ್‌ ನಗರದಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸುವಾಗ ಸುಮಿಯಲ್ಲಿದ್ದವರ ಕಡೆಗೆ ಹೆಚ್ಚಿನ ಗಮನ ಕೊಟ್ಟಿರಲಿಲ್ಲ. ಆಗ ಟ್ವಿಟರ್‌ನಲ್ಲಿ ಅಭಿಯಾನ ನಡೆಸಿ ಭಾರತದ ಪ್ರಧಾನಿ ಸೇರಿದಂತೆ ಅಗ್ರಮಾನ್ಯ ನಾಯಕರ ಗಮನ ಸೆಳೆದು ಒತ್ತಡ ಹಾಕಿದೆವು. ನನ್ನೊಂದಿಗೆ ನೂರಾರು ಗೆಳೆಯರೂ ಪಾಲ್ಗೊಂಡರು’ ಎಂದು ಸ್ಮರಿಸಿದರು.

‘ರೊಮೇನಿಯಾ ಗಡಿಗೆ ಬಂದವರಿಗೆ ಧನ ಸಹಾಯವನ್ನೂ ಮಾಡಲಾಯಿತು. ಹಂಗೇರಿ ಗಡಿಯಲ್ಲಿ ಬಳಲಿದ್ದ ಭಾರತೀಯರಿಗೆ ಗೆಳೆಯರು ಊಟೋಪಚಾರ ಮಾಡಿದರು. ಸುಮಿ ಪ್ರಾಂತ್ಯದಿಂದ ಹೊರಬರಲು ಮಾರ್ಗದರ್ಶನವನ್ನೂ ನೀಡಲಾಯಿತು’ ಎಂದು ವಿವರಿಸಿದರು.

‘ಗ್ಲಾಸ್ಕೊ ವಿಶ್ವವಿದ್ಯಾಲಯದ ರಕ್ಷಿತಾ ಧರ್, ಅಂಕಿತ್ ಡೋಗ್ಡೆ, ರಾಜೀವ್ ಕೋರ್ಗಡೆ, ಆಸ್ಟ್ರೀಯಾದ ಚಾಕ್ಷುಪಾಲ್, ಹಂಗೇರಿಯ ರಾಹುಲ್, ಪೋಲೆಂಡ್‌ನ ರಜತ್ ರತ್ನ, ಇಂಗ್ಲೆಂಡಿನ ನಮಿ ಮೆಹ್ತಾ, ಭಾರತದ ಮಿತ್ರ ಸ್ವಾಮಿದೀಪ್, ವೈಶಾಲಿ, ಲಂಡನ್ನಿನ ರಾಹುಲ್, ಪಿಯೂಷ್ ಚತಂ, ಹಂಗೇರಿಯ ಮಂಜುನಾಥ್, ಜ್ಯೋತಿ ಸಹಕರಿಸಿದರು’ ಎಂದು ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಉಕ್ರೇನ್‌ನ ಕೀವ್ ಪ್ರಾಂತ್ಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಾಗಪುರದ ಪ್ರಫುಲ್ ಪರೇಟ್, ‘ನಾನು ಹಸಿವೆಯಿಂದ ಬಳಲುತ್ತಿದ್ದಾಗ ಪಲ್ಲವಿ ಅವರ ಸ್ನೇಹಿತರು ನೆರವಿಗೆ ಬಂದರು. ನಾನು ಅಲ್ಲಿಂದ ಹೊರಬರುವ ಬಗ್ಗೆಯೂ ಮಾಹಿತಿ–ಮಾರ್ಗದರ್ಶನ ನೀಡಿದರು’ ಎಂದು ಪ್ರತಿಕ್ರಿಯಿಸಿದರು.

‘ಉಕ್ರೇನಿನಲ್ಲಿ ಸಿಲುಕಿದವರ ಕುರಿತು ಪಲ್ಲವಿ ಮಾಹಿತಿಗಳನ್ನು ನೀಡುತ್ತಿದ್ದರು’ ಎಂದು ಮನೋಜ್‌ ರಾಜನ್‌ ಖಚಿತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು