ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ ಸಮಾನ ವೈರಿಗಳು, ಒಳ ಒಪ್ಪಂದ ನಡೆದಿಲ್ಲ: ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸ್ಪಷ್ಟನೆ
Last Updated 3 ಡಿಸೆಂಬರ್ 2019, 18:36 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು): ‘ಜೆಡಿಎಸ್‌ ಜತೆ ಯಾವುದೇ ಒಳ ಒಪ್ಪಂದ ಇಲ್ಲ. ನಮಗೆ, ರಾಜಕೀಯವಾಗಿ ಬಿಜೆಪಿ ಎಷ್ಟು ವೈರಿಯೋ ಜೆಡಿಎಸ್‌ ಕೂಡ ಅಷ್ಟೇ ವೈರಿ. ಇಬ್ಬರ ವಿರುದ್ಧವೂ ಸಮಾನ ರೀತಿಯ ಹೋರಾಟ ನಡೆಸಿ, ಎಲ್ಲ ಸ್ಥಾನ ಗೆಲ್ಲುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಡಿ.9ರಂದು ಸಿಹಿ ಸುದ್ದಿ ಸಿಗಲಿದೆ ಎಂದಿದ್ದರೇ ಹೊರತು ತಾವೇ ಮುಂದಿನ ಮುಖ್ಯಮಂತ್ರಿ ಆಗುವುದಾಗಿ ಹೇಳಿಲ್ಲ. ಮಾಧ್ಯಮಗಳು ಅವರ ಹೇಳಿಕೆಯನ್ನು ತಿರುಚಿವೆ ಎಂದರು.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ‘ಬಿಜೆಪಿ ಬಳಿ ವಿಪರೀತ ದುಡ್ಡು ಇದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಾಕಷ್ಟು ದುಡ್ಡು ಕೊಟ್ಟಿದ್ದಾರೆ. ಜನರು ಬಿಜೆಪಿಯಿಂದ ಹಣ ತಗೊಂಡು, ಕಾಂಗ್ರೆಸ್‌ಗೆ ಓಟು ಹಾಕ್ತಾರೆ’ ಎಂದರು.

ಎಲ್ಲ 15 ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ‌‘ಮುಂಬೈ ನೋಟು, ಕಾಂಗ್ರೆಸ್‌ಗೆ ಓಟು’ ಎಂದು ಮತದಾರರೇ ಹೇಳುತ್ತಿದ್ದಾರೆ. ಶಾಸಕರು ತಮ್ಮನ್ನು ದುಡ್ಡಿಗೆ ಮಾರಿಕೊಂಡರೂ ಜನರು ಮತಗಳನ್ನು ಮಾರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

‘ಮಾರಾಟವಾಗಿರುವ ‘ಅನರ್ಹ’ ಶಾಸಕರ ಮೇಲೆ ಜನರು ಆಕ್ರೋಶಗೊಂಡಿದ್ದಾರೆ. ಅವರು ಏನೇ ಬಣ್ಣದ ಮಾತುಗಳನ್ನಾಡಿದರೂ ಜನರು ನಂಬಲ್ಲ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಮತಗಳಿಸಲು ಗಿಮಿಕ್: ಹುಣಸೂರಿನ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ತಮ್ಮನ್ನು ‘ಉತ್ತಮ ಆಡಳಿತಗಾರ’ ಎಂದು ಹೊಗಳಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಚುನಾವಣಾ ತಂತ್ರದ ಭಾಗವಾಗಿ ನನ್ನನ್ನು ಹೊಗಳಿದ್ದಾರೆ. ನನ್ನನ್ನು ಬೈಯ್ದರೆ ಜನ ಮತ ಹಾಕಲ್ಲ ಎಂಬುದು ಗೊತ್ತು. ಸುಳ್ಳು ಹೇಳುತ್ತಾ ಗಿಮಿಕ್‌ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಎಚ್‌ಡಿಕೆಗೆ ತೊಂದರೆ ಕೊಟ್ಟಿಲ್ಲ’

ಕೆ.ಆರ್‌.ಪೇಟೆ: ‘ಸಮ್ಮಿಶ್ರ ಸರ್ಕಾರ ಇದ್ದಾಗ ನಾವು ಎಚ್‌.ಡಿ.ಕುಮಾರಸ್ವಾಮಿಗೆ ತೊಂದರೆ ಕೊಟ್ಟಿಲ್ಲ. ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಆರೇಳು ಪ್ರಮುಖ ಸಚಿವ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೆವು. ಆದರೂ ಅವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಕೆ.ಆರ್. ಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌, ಕಣ್ಣೀರು ಹಾಕುತ್ತ ಮತಯಾಚಿಸಿದರು.

‘ಸಚಿವ ಮಾಧುಸ್ವಾಮಿ ಬಂಧಿಸಿ, ವಜಾಗೊಳಿಸಿ’

ಹೊಸಪೇಟೆ: ‘ವೀರಶೈವ ಲಿಂಗಾಯತ ಧರ್ಮೀಯರ ಸಭೆ ಸಂಘಟಿಸಿ, ಅವರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಚುನಾವಣಾ ಆಯೋಗ ತಕ್ಷಣವೇ ಬಂಧಿಸಬೇಕು. ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಸಮಾಜದವರ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು. ಒಂದುವೇಳೆ ಬೇರೆಯವರಿಗೆ ಮತ ಹಾಕಿದರೆ ಅದು ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ, ಅವರಿಗೆ ಕಲ್ಲು ಹೊಡೆದು ಅಪಮಾನ ಮಾಡಿದಂತೆ ಎಂದು ಮಾಧುಸ್ವಾಮಿ, ಬಿಜೆಪಿ ಸಂಘಟಿಸಿದ್ದ ಸಭೆಯಲ್ಲಿ ಹೇಳಿದ್ದರು. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ’ ಎಂದು ದೂರಿದರು.

ಎಂಟಿಬಿ ಮೀರ್‌ ಸಾದಿಕ್‌: ಖರ್ಗೆ

ಹೊಸಕೋಟೆ: ಉಪಚುನಾವಣಾ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಎಂಟಿಬಿ ನಾಗರಾಜ್ ಮೀರ್ ಸಾದಿಕ್ ರೀತಿಯಲ್ಲಿ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತದೆ. ಯಾವ ರೀತಿ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚನೆ ಮಾಡಿದ್ದೇವೆಯೋ ಹಾಗೆ ಆಗುತ್ತದೆ’ ಎಂದರು.

‘ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರ ರಾಜಕೀಯದ ಸಮಾಧಿಗೆ ಕೊನೆಯ ಹಾರವನ್ನು ಕ್ಷೇತ್ರದ ಮತದಾರರು ಹಾಕಿ ಕಳುಹಿಸಬೇಕು’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ಕರೆಕೊಟ್ಟರು.

‘ನಾಗರಾಜ್ ತಾವು ಮಾತ್ರ ಮಾರಾಟವಾಗಿಲ್ಲ. ಹೊಸಕೋಟೆಯ ಮತದಾರರ ತೀರ್ಪನ್ನು ಮಾರಿದ್ದಾರೆ. ತಾಯಿಯಂತಿರುವ ಪಕ್ಷಕ್ಕೆ ಮೋಸ ಮಾಡಿದವರನ್ನು ಎಂದೂ ವಾಪಸ್‌ ಸೇರಿಸಿಕೊಳ್ಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT