ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕೈಗಾರಿಕೆಗಳ ರಕ್ಷಣೆಗೆ ಆದ್ಯತೆ

ಸುಪ್ರೀಂ ಕೋರ್ಟ್ ವಕೀಲ ಹಾಗೂ ವಾಣಿಜ್ಯ ತಜ್ಞ ಸುರೇಶ್ ಧೋಲೆ
Last Updated 19 ಡಿಸೆಂಬರ್ 2018, 12:11 IST
ಅಕ್ಷರ ಗಾತ್ರ

ಮೈಸೂರು: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯ್ದೆ ರೂಪಿಸಿದ್ದೇ ಸಣ್ಣ ಕೈಗಾರಿಕಗಳು ರೋಗಗ್ರಸ್ತವಾಗದೇ ಬದುಕುಳಿಯಲಿ ಎಂದು ಸುಪ್ರೀಂ ಕೋರ್ಟ್ ವಕೀಲ ಹಾಗೂ ವಾಣಿಜ್ಯ ತಜ್ಞ ಸುರೇಶ್ ಧೋಲೆ ತಿಳಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ, ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಕೈಗಾರಿಕೆಗಳ ಸಂಘ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಹಾಗೂ ಸೂಕ್ಷ್ಮ, ಸಣ್ಣ - ಮಧ್ಯಮ ಉದ್ಯಮಗಳ ಪರಿಷತ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ವಿಳಂಬ ಪಾವತಿ ಕಾಯ್ದೆ ಮತ್ತು ಸೂಕ್ಷ್ಮ ಸಣ್ಣ ಉದ್ಯಮಗಳ ಸೌಲಭ್ಯ ಪರಿಷತ್ತಿನ ಸಾಮರ್ಥ್ಯ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇಡೀ ರಾಷ್ಟ್ರದಲ್ಲಿ ಏಕರೂಪ ವ್ಯವಸ್ಥೆ ಜಾರಿಯಲ್ಲಿದೆ. ಯಾವುದೇ ಕಾರಣಕ್ಕೂ ಈ ಉದ್ದಿಮೆಗಳು ನೆಲಕಚ್ಚದಂತೆ ನೋಡಿಕೊಳ್ಳುವುದೇ ಈ ಕಾಯ್ದೆ ರಚಿಸಿದ್ದರ ಹಿಂದಿನ ಉದ್ದೇಶ. ಹಾಗಾಗಿ, ಬಾಕಿ ಪಾವತಿ ಸಮಸ್ಯೆಯಿಂದ ಈಗ ಉದ್ದಿಮೆಗಳು ಬಹುತೇಕ ಮುಕ್ತವಾಗಿವೆ ಎಂದು ಅವರು ತಿಳಿಸಿದರು.

ಆದರೂ, ಕಾಯ್ದೆಯ ಬಗ್ಗೆ ಉದ್ಯಮಿಗಳಲ್ಲಿ ಅರಿವು ಬರಬೇಕು. ತಮ್ಮ ಹಕ್ಕುಗಳ ಪರಿಚಯ ಆಗಬೇಕು. ಇಲ್ಲವಾದಲ್ಲಿ ಶೋಷಣೆ ಮಾಡುವವರು ದುರುಪಯೋಗಪಡಿಸಿಕೊಳ್ಳುತ್ತಲೇ ಇರುತ್ತಾರೆ. ಇದು ತಪ್ಪಬೇಕಾದರೆ, ಈ ರೀತಿಯ ಕಾರ್ಯಾಗಾರಗಳು ಹೆಚ್ಚಬೇಕು ಎಂದು ಅವರು ಸಲಹೆ ನೀಡಿದರು.

ಎಂಎಸ್‌ಎಂಇ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್.ಎಸ್.ಶ್ರೀನಿವಾಸ್ ಮಾತನಾಡಿ, ಸಂಸ್ಥೆಗಳು ಉತ್ಪನ್ನ ಖರೀದಿಸಿದ 45 ದಿನದೊಳಗೆ ಹಣ ಪಾವತಿಸಬೇಕು. ವಿಳಂಬ ಮಾಡಿದರೆ ಅಂಥ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

ಮೈಸೂರು ಕೈಗಾರಿಕಾ ಸಂಘದ ಅಧ್ಯಕ್ಷ ವಾಸು, ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ್ ಜೈನ್, ಖಜಾಂಚಿ ಮಂಜುನಾಥ್, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT