ಭಾನುವಾರ, ಸೆಪ್ಟೆಂಬರ್ 26, 2021
27 °C
ಅಧಿಕಾರಿಗಳ ವಿರುದ್ಧ ಆಕ್ರೋಶ; ನೆರವಿನ ಭರವಸೆ ನೀಡಿದ ಸಂಸದ

ಉಚ್ಚಗಣಿ ಗ್ರಾಮದ ಮೂಲ ಜಾಗದಲ್ಲೇ ದೇವಾಲಯ ನಿರ್ಮಾಣ: ಪ್ರತಾಪಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು/ ಹಂಪಾಪುರ: ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ತಾಲ್ಲೂಕು ಆಡಳಿತವು ನೆಲಸಮ ಗೊಳಿಸಿದ್ದ ಮಹದೇವಮ್ಮ ದೇವಾಲಯದ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ಭಾನುವಾರ ಭೇಟಿ, ಗ್ರಾಮಸ್ಥರ ಅಹವಾಲು ಆಲಿಸಿದರು.

ಗ್ರಾಮದ ಮುಖಂಡ ನರಸಿಂಹೇ ಗೌಡ ಮಾತನಾಡಿ, ‘ಸುತ್ತಮುತ್ತಲಿನ 10 ಗ್ರಾಮಗಳ ಜನರ ಆರಾಧ್ಯ ದೈವವಾಗಿದ್ದ, 500ರಿಂದ 600 ವರ್ಷಗಳಷ್ಟು ಹಳೆಯ ಮಹದೇವಮ್ಮ ದೇವಸ್ಥಾನವನ್ನು ನೆಲಸಮಗೊಳಿಸಲಾಗಿದೆ. ದೇವಾಲಯ ವನ್ನು ಉಳಿಸಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು. ಆದರೆ, ಯಾವುದೇ ನೋಟಿಸ್ ನೀಡದೆ ರಾತ್ರೋರಾತ್ರಿ ದೇವಾಲಯವನ್ನು ಒಡೆದುಹಾಕಲಾಗಿದೆ. ಗ್ರಾಮಸ್ಥರ ನಂಬಿಕೆಗಳಿಗೆ ತಹಶೀಲ್ದಾರ್ ಧಕ್ಕೆ ತಂದಿದ್ದಾರೆ’ ಎಂದು ದೂರಿದರು.

‘ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‌ಅನ್ನು ತೆಗೆಯುವಂತೆ ತಾಲ್ಲೂಕು ಆಡಳಿತ ಒತ್ತಡ ಹೇರುತ್ತಿದೆ’ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ತಿರುಚಿ, ಸುಳ್ಳು ಹೇಳುತ್ತಿದ್ದಾರೆ. ನ್ಯಾಯಾಲಯದ ಆದೇಶದಲ್ಲಿ 2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ದೇವಾಲಯ, ಮಸೀದಿ, ಚರ್ಚ್‌ಗಳನ್ನು ನಿರ್ಮಿಸದಂತೆ ತಡೆಯಬೇಕು. ಈ ಹಿಂದೆ ಕಟ್ಟಿರುವ ದೇವಾಲಯಗಳನ್ನು ಜನರ ಅಭಿಪ್ರಾಯ ಪಡೆದು ಉಳಿಸಿ ಕೊಳ್ಳಬೇಕು. ಸಾಧ್ಯವಾಗದಿದ್ದರೆ ಬದಲಿ ಜಾಗದಲ್ಲಿ ನಿರ್ಮಾಣ ಮಾಡಿಕೊಡ ಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅಧಿಕಾರಿಗಳು ಇಲ್ಲದ ಗೊಂದಲ ಸೃಷ್ಟಿಸಿ ರಾಜಕಾರಣಿಗಳನ್ನು ಸಹ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯ 92 ದೇವಾಲಯಗಳಿವೆ. ಅವುಗಳನ್ನು ಮುಟ್ಟಲು ಬಿಡುವುದಿಲ್ಲ. ರಾಜಕಾರಣಿಗಳು ಹಾಗೂ ಗ್ರಾಮಸ್ಥರು ಅವಿದ್ಯಾವಂತರೆಂದು ಅಧಿಕಾರಿ ಗಳು ಭಾವಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ದೇವಾಲಯವನ್ನು ಅದೇ ಜಾಗದಲ್ಲಿ ಪುನರ್ ನಿರ್ಮಾಣ ಮಾಡಲು ಎಲ್ಲಾ ರೀತಿಯ ನೆರವು ನೀಡುತ್ತೇನೆ’ ಎಂದರು.

***

ಸ್ಥಳಕ್ಕೆ ಬರುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದರೂ ಬಂದಿಲ್ಲ. ಅವರನ್ನು ಜಿಲ್ಲಾ ಕೇಂದ್ರಕ್ಕೆ ಕರೆಸಿ ಕೊಂಡು ಎಚ್ಚರಿಕೆ ನೀಡಲಾಗುವುದು.

–ಪ್ರತಾಪಸಿಂಹ, ಸಂಸದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು