ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಸೋಂಕಿನ ಸರಪಣಿ: ನಿಲ್ಲದ ಸಾವಿನ ಸರಣಿ

ಹಳ್ಳಿಗಳಲ್ಲೂ ಕೊರೊನಾ ವೈರಸ್‌ನ ಹಾವಳಿ: ಎಲ್ಲೆಡೆಯೂ ಕೋವಿಡ್‌ ಸಾವು–ನೋವಿನ ಸುಳಿ
Last Updated 9 ಮೇ 2021, 4:31 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹದಿನೈದು ದಿನದಿಂ ದಲೂ ಬೆರಳೆಣಿಕೆಯ ಕೆಲವೊಂದು ಚಟುವಟಿಕೆ ಹೊರತುಪಡಿಸಿ, ಉಳಿದ ಎಲ್ಲದಕ್ಕೂ ನಿರ್ಬಂಧವಿದ್ದರೂ (ಲಾಕ್‌ಡೌನ್‌); ಕೊರೊನಾ ವೈರಸ್‌ನ ಎರಡನೇ ಅಲೆಯ ತೀವ್ರತೆ ತಗ್ಗಿಲ್ಲ. ಸೋಂಕಿನ ಸರಪಳಿ ತುಂಡಾಗಿಲ್ಲ.

ಇಂದಿಗೂ ಕೋವಿಡ್‌–19 ಪ್ರಕರಣಗಳು ಎರಡು ಸಾವಿರದಿಂದ ಮೂರು ಸಾವಿರದ ಆಸುಪಾಸಿನಲ್ಲೇ ದಾಖಲಾಗುತ್ತಿವೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವುದು ಮೈಸೂರು ನಗರ, ಜಿಲ್ಲೆಯಲ್ಲೇ.

ಎರಡನೇ ಅಲೆಯ ಸೋಂಕು ನಗರಕ್ಕಷ್ಟೇ ಸೀಮಿತವಾಗದೆ, ಹಳ್ಳಿಗ ಳಿಗೂ ದಾಂಗುಡಿಯಿಟ್ಟಿದೆ. ಇದರ ಬೆನ್ನಿಗೆ ಸಾವಿನ ಸರಣಿಯೂ ಎಗ್ಗಿಲ್ಲದೇ ಮುಂದುವರಿದಿದೆ. ನಿತ್ಯವೂ ಎರಡಂಕಿ ತಲುಪುತ್ತಿದೆ.

ಸೋಂಕು ಹರಡುವಿಕೆಯ ವೇಗವನ್ನು ತಗ್ಗಿಸಲು ಹಾಗೂ ಸರಪಣಿ ಯನ್ನು ತುಂಡರಿಸಲು ಈ ಹದಿನೈದು ದಿನದ ಅವಧಿಯಲ್ಲಿ ಜಿಲ್ಲಾಡಳಿತ ಸರಣಿ ಸಭೆ ನಡೆಸಿದೆ. ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳು ಸತತವಾಗಿ ಸಭೆಗೆ ಹಾಜರಾಗಿ ಚರ್ಚಿಸಿದ್ದಾರೆ. ಹಲವು ಕ್ರಮ ಕೈಗೊಂಡಿರುವುದಾಗಿ ಹೇಳುತ್ತಿದ್ದಾರೆ. ಆದರೂ ವೈರಸ್‌ನ ತೀವ್ರತೆ ತಗ್ಗಿಲ್ಲ. ದಿನದಿಂದ ದಿನಕ್ಕೆ ಪಸರಿಸುವುದು ನಿಯಂತ್ರಣಕ್ಕೆ ಬಾರದಾಗಿದೆ ಎಂಬು ದನ್ನು ಜಿಲ್ಲಾ ಕೋವಿಡ್‌ ವಾರ್‌ ರೂಂನ ಅಂಕಿ–ಅಂಶಗಳೇ ದೃಢಪಡಿಸುತ್ತಿವೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆ ಸಕಾಲಕ್ಕೆ ಸಿಗುತ್ತಿಲ್ಲವಾಗಿದೆ. ಜಿಲ್ಲೆಯ ಪ್ರಮುಖ ಆಸ್ಪತ್ರೆಯಾದ ಕೆ.ಆರ್‌.ಆಸ್ಪತ್ರೆಯ ದ್ವಾರದಲ್ಲೇ ಈಗಾಗಲೇ ಹಲವು ಬಾರಿ ಹಾಸಿಗೆ ಭರ್ತಿಯ ನಾಮಫಲಕ ತೂಗು ಹಾಕಲಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಗರ್ಭಿಣಿಗೆ ವೆಂಟಿಲೇಟರ್‌ ಸೌಲಭ್ಯ ಸಿಗಲಿಲ್ಲ. ಹಿಂಗಾದರೆ ಬಡ ರೋಗಿಗಳನ್ನು ಕಾಪಾಡೋರು ಯಾರು?’ ಎನ್ನುತ್ತಾರೆ ಅರವಿಂದ್‌ ಶರ್ಮ.

‘ಜಿಲ್ಲಾಡಳಿತಕ್ಕೆ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತವಿಲ್ಲವಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ತರಲಿಕ್ಕಾಗಿಯೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿ ರಚನೆಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲು ಸಮಾನ ಮನಸ್ಕರ ಸಭೆಯಲ್ಲಿ ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಹಾಸಿಗೆ ಸಿಕ್ಕಿದ್ದರೆ ಬದುಕುತ್ತಿದ್ದರು’
‘ವಯೋಸಹಜ ಅನಾರೋಗ್ಯದಿಂದ ನಮ್ಮ ತಾಯಿಯ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸವಾಯಿತು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದೆವು. ಮೂರು ದಿನ ಮೈಸೂರಿನ 25ರಿಂದ 30 ಆಸ್ಪತ್ರೆಗಳಿಗೆ ಅಲೆದಾಡಿದರೂ ಎಲ್ಲಿಯೂ ಹಾಸಿಗೆ ಸಿಗಲಿಲ್ಲ’ ಎಂದು ಕೋವಿಡ್‌ನಿಂದ ಮೃತಪಟ್ಟ ಸುಂದರವಲ್ಲಿ (72) ಎಂಬುವರ ಪುತ್ರ ಅನಿಲ್‌ ನೋವು ತೋಡಿಕೊಂಡರು.

‘ಆರಂಭದ ದಿನ ಕೋವಿಡ್‌ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೂ ಕೆ.ಆರ್.ಆಸ್ಪತ್ರೆಯ ವೈದ್ಯರು ಪರೀಕ್ಷಿಸಲೇ ಇಲ್ಲ. ನಮ್ಮಮ್ಮನನ್ನು ಕಾರಿನಿಂದ ಕೆಳಗಿಳಿಸಲಾಗಲಿಲ್ಲ. ಎಲ್ಲೆಡೆ ಅಲೆದರೂ ಪ್ರಯೋಜನವಾಗಲಿಲ್ಲ.’

‘ಮೂರನೇ ದಿನ ಮತ್ತೊಮ್ಮೆ ಕೋವಿಡ್‌ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಬಂತು. ಆಗಲೂ ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳಲಿಲ್ಲ. ಕಾರಿನಲ್ಲೇ ನಮ್ಮಮ್ಮ ಪ್ರಾಣ ಬಿಟ್ಟರು. ಹಾಸಿಗೆ ಸಿಕ್ಕಿದ್ದರೆ ಬದುಕುತ್ತಿದ್ದರು. ಆದರೆ ಇಂದು ಆಸ್ಪತ್ರೆ, ಚಿಕಿತ್ಸೆ ಎನ್ನುವುದು ದುಡ್ಡಿದ್ದವರಿಗಷ್ಟೇ, ಪ್ರಭಾವಿಗಳಿಗಷ್ಟೇ ಎನ್ನುವಂತಾಗಿದೆ’ ಎಂದು ಅವರು ಕಣ್ಣೀರಿಟ್ಟರು.

ಸಾವಿರ ದಾಟಿದ ಸಾವು
ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಮೇ 8ರ ಶನಿವಾರ ರಾತ್ರಿ 8 ಗಂಟೆಗೆ 1,314ಕ್ಕೆ ತಲುಪಿದೆ. ಮೈಸೂರು ನಗರದಲ್ಲೇ ಸತ್ತವರ ಸಂಖ್ಯೆ ನಾಲ್ಕಂಕಿ ಮುಟ್ಟಿದೆ.

ಮೈಸೂರಿನಲ್ಲಿ 1028 ಜನರು ಕೋವಿಡ್‌ಗೆ ಬಲಿಯಾಗಿದ್ದರೆ, ಮೈಸೂರು ತಾಲ್ಲೂಕಿನಲ್ಲಿ ಅರ್ಧ ಶತಕ (55) ದಾಟಿದೆ. ನಂಜನಗೂಡು ತಾಲ್ಲೂಕಿನಲ್ಲಿ 58 ಜನರು ಮೃತಪಟ್ಟಿದ್ದಾರೆ.

ತಿ.ನರಸೀಪುರ ತಾಲ್ಲೂಕಿನಲ್ಲಿ 48 ಜನರು, ಹುಣಸೂರು, ಕೆ.ಆರ್‌.ನಗರದಲ್ಲಿ ತಲಾ 41, ಎಚ್‌.ಡಿ.ಕೋಟೆಯಲ್ಲಿ 25, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 18 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಅಂಕಿ–ಅಂಶಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT