ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಯಲ್ಲಿ ಪ್ರತಿಧ್ವನಿಸಿತು ಅನುದಾನ ಖೋತಾ

ಈ ವರ್ಷ ಎಲ್ಲ ಅನುದಾನ ಬಳಕೆಗೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ ತಾಕೀತು
Last Updated 11 ನವೆಂಬರ್ 2020, 14:09 IST
ಅಕ್ಷರ ಗಾತ್ರ

ಮೈಸೂರು: ಕಳೆದ ಹಣಕಾಸು ವರ್ಷದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ₹ 27 ಲಕ್ಷ ಹಾಗೂ ಯುವ ಸಬಲೀಕರಣ ಇಲಾಖೆಯಿಂದ ₹ 7.3 ಕೋಟಿಯಷ್ಟು ಅನುದಾನ ಬಳಕೆಯಾಗದೇ ವಾಪಸ್ ಹೋಗಿದ್ದರ ಕುರಿತು ಇಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.‌

ಅಧಿಕಾರಿಗಳು ನೀಡಿದ ವಿವರಣೆಗಳಿಗೆ ತೃಪ್ತರಾಗದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ತರಾಟೆಗೆ ತೆಗೆದುಕೊಂಡರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುದಾನವನ್ನು ಬಳಕೆ ಮಾಡದೇ ವಾಪಸ್ ಹೋದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.‌

ಕಳೆದ ವರ್ಷದ ಅನುದಾನದಲ್ಲಿ ₹ 27 ಲಕ್ಷವನ್ನು ಅಂಗವಿಕಲರ ತ್ರಿಚಕ್ರ ಸ್ಕೂಟರ್‌ ಖರೀದಿಗಾಗಿ ಮೀಸಲಿರಿಸಲಾಗಿತ್ತು. ಆದರೆ, ಜಿಲ್ಲಾ ಪಂಚಾಯಿತಿಯಿಂದಲೇ ಕರೆಯಲಾದ ಟೆಂಡರ್‌ನಲ್ಲಿ ಯಾವೊಬ್ಬರೂ ಭಾಗವಹಿಸಲಿಲ್ಲ. ನಂತರ, ಲಾಕ್‌ಡೌನ್‌ ಉಂಟಾದ್ದರಿಂದ ಅನುದಾನ ವಾಪಸ್ ಹೋಯಿತು ಎಂಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮಾ ಅವರ ವಿವರಣೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಾಯಿಸಮಿತಿ ಸದಸ್ಯರು ಒಪ್ಪಲಿಲ್ಲ.‌

ಯುವ ಸಬಲೀಕರಣ ಇಲಾಖೆಯಿಂದ ವಾಪಸ್ ಹೋಗಿದ್ದು ₹ 7.3 ಕೋಟಿ

ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್ ಅವರನ್ನು ₹ 7.3 ಕೋಟಿ ವಾಪಸ್ ಹೋಗಿದ್ದು ಏಕೆ ಎಂದು ಅಧ್ಯಕ್ಷೆ ಪರಿಮಳಾ ಶ್ಯಾಂ ಕೇಳಿದ ಪ್ರಶ್ನೆಗೆ ಅವರು ‘ನಾನು ಹೊಸಬ, ನನಗೇನೂ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು. ಇವರ ವರ್ತನೆಗ ಸಿಇಒ ಸೇರಿದಂತೆ ಎಲ್ಲರೂ ಕಿಡಿಕಾರಿದರು.

ಪಿಎಚ್‌ಸಿ ಮಟ್ಟದಲ್ಲಿ ಅಂಗವಿಕಲರ ಪಟ್ಟಿ ಮಾಡಲು ಸೂಚನೆ

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಅಂಗವಿಕಲರ ಪಟ್ಟಿ ಮಾಡಿ ನೀಡಿದರೆ, ಆರೋಗ್ಯ ಇಲಾಖೆಯ ಸಹಕಾರದಿಂದ ಅವರಿಗೆ ಸೂಕ್ತ ಚಿಕಿತ್ಸೆ, ಥೆರಪಿಗಳನ್ನು ಕೊಡಿಸಬಹುದು ಎಂದು ಸಿಇಒ ಭಾರತಿ ಅಭಿಪ್ರಾಯಪಟ್ಟರು.

3 ಸಾವಿರ ಮಂದಿಗೆ ತೀವ್ರತರವಾದ ಅಂಗವಿಕಲತೆ ಇದೆ. ಇವರ ಪಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನೀಡಿದರೆ, ಅವರಿಗೆ ಅಗತ್ಯ ಇರುವ ತಜ್ಞ ವೈದ್ಯರನ್ನು ಅಲ್ಲಿಗೆ ಕಳುಹಿಸಿ ಸೂಕ್ತ ಥೆರಪಿ ನೀಡಬಹುದು. ಜತೆಗೆ, ಹೋಬಳಿ ಕೇಂದ್ರಶೀಘ್ರದಲ್ಲಿ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಕ್ಷರ ದಾಸೋಹದಲ್ಲಿ ಕಳಪೆ ಗುಣಮಟ್ಟದ ಆಹಾರ ಧಾನ್ಯ ವಿತರಿಸಬಾರದು, ಎಲ್ಲ ಹಂತದಲ್ಲೂ ಗುಣಮಟ್ಟವನ್ನು ಪರೀಕ್ಷಿಸಬೇಕು ಎಂದು ಸೂಚಿಸಲಾಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಹಾಜರಾಗದೇ ತಮ್ಮ ಆಪ್ತ ಕಾರ್ಯದರ್ಶಿಯನ್ನು ಸಭೆಗೆ ಕಳುಹಿಸಿದ್ದಕ್ಕೆ ಸಿಇಒ ಆಕ್ಷೇಪ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸ್ಥಾಯಿ ಸಮಿತಿ ಸದಸ್ಯರಾದ ಎನ್.ಮಂಜುನಾಥ್, ಎ.ಎಂ.ಗುರುಸ್ವಾಮಿ ಹಾಗೂ ಜಿ.ಪಂ ಯೋಜನಾಧಿಕಾರಿ ಎಸ್.ಧನುಷ್ ಇದ್ದರು.

3 ಸಾವಿರ ಮಂದಿಗೆ ಎದ್ದು ನಡೆದಾಡಲೂ ಆಗದು!

ಜಿಲ್ಲೆಯಲ್ಲಿ 40,370 ಮಂದಿ ಅಂಗವಿಕಲರು ಇದ್ದಾರೆ. ಇವರಲ್ಲಿ 23 ಸಾವಿರ ಮಂದಿ ಮಾತ್ರ ಯುಡಿ ಗುರುತಿನ ಚೀಟಿಗೆ ಅರ್ಜಿ ಹಾಕಿದ್ದಾರೆ. ಇನ್ನುಳಿದವರ ಪೈಕಿ 3 ಸಾವಿರ ಮಂದಿಗೆ ಎದ್ದು ನಡೆದಾಡಲು ಸಾಧ್ಯವಿರದಷ್ಟು ಅಂಗವಿಕಲತೆ ಇದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

‘ನನಗೆ ಬೀರು ಕೀ ಸಹ ಕೊಟ್ಟಿಲ್ಲ’– ಅಧಿಕಾರಿಯ ಅಳಲು!

ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್ ಅವರು ತನಗೆ ಹಿಂದಿನ ಸಹಾಯಕ ನಿರ್ದೇಶಕ ಕೆ.ಸುರೇಶ್ 45 ದಿನಗಳು ಕಳೆದರೂ ಬೀರು ಕೀ ಸಹ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.

‘ಒಬ್ಬರೇ ಒಬ್ಬ ಕಾಯಂ ನೌಕರರು ಇಲ್ಲ. ಗುತ್ತಿಗೆ ಆಧಾರದ ಮೇಲೆ ಇದ್ದವರು ಕೆಲಸ ಬಿಟ್ಟು ಹೋಗಿದ್ದಾರೆ. ಈ ಇಲಾಖೆ ನನಗೆ ಹೊಸದು. ಹಿಂದಿನ ಅಧಿಕಾರಿಯಿಂದ ಮಾರ್ಗದರ್ಶನವಿರಲಿ, ಕನಿಷ್ಠ ಕಡತಗಳೂ ಹಸ್ತಾಂತರವಾಗಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನಾಗಿಲ್ಲ’ ಎಂದು ಹೇಳಿದರು.

ಮಕ್ಕಳ ಸ್ನೇಹಿ ಗ್ರಾಮಪಂಚಾಯಿತಿ ಅಭಿಯಾನಕ್ಕೆ ನಿರ್ಣಯ

ನ. 14ರಿಂದ ಜನವರಿ 24ರವರೆಗೆ ಮಕ್ಕಳ ಸ್ನೇಹಿ ಗ್ರಾಮಪಂಚಾಯಿತಿ ಅಭಿಯಾನ ನಡೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಸೂಚಿಸಿದರು.

6ರಿಂದ 18 ವರ್ಷದ ಎಲ್ಲ ಮಕ್ಕಳಿಗೂ ಲಸಿಕೆ, ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ, ಅ‍ಪೌಷ್ಟಿಕತೆ, ಮಕ್ಕಳ ಹಕ್ಕುಗಳನ್ನು ಕುರಿತು ಜಾಗೃತಿ ಮೂಡಿಸಬೇಕು. ಪ್ರತಿ ವಾರ್ಡ್‌ ಹಾಗೂ ಪಂಚಾಯಿತಿ ಮಟ್ಟದಲ್ಲಿ ಧ್ವನಿ ಪೆಟ್ಟಿಗೆ ಇಟ್ಟು ಅವರಿಂದ ಸಲಹೆ, ದೂರುಗಳನ್ನು ಆಹ್ವಾನಿಸಬೇಕು. ಅವುಗಳನ್ನು ಮಕ್ಕಳ ಗ್ರಾಮಸಭೆ ಅಥವಾ ವಾರ್ಡ್‌ಸಭೆಗಳಲ್ಲಿ ಚರ್ಚಿಸಬೇಕು. ಪ್ರೌಢಶಾಲೆ ಮಕ್ಕಳು, ಶಿಕ್ಷಕರು ಸೇರಿದಂತೆ ಹಲವರು ಇರುವ ಗ್ರಾಮ ಶಿಕ್ಷಣ ಕಾರ್ಯಪಡೆ ರಚಿಸಬೇಕು. ಪ್ರತಿ ಪಂಚಾಯಿತಿಯಲ್ಲೂ ‘ಓದುವ ಬೆಳಕು’ ಎಂಬ ಗ್ರಂಥಾಲಯವನ್ನು ಆರಂಭಿಸಬೇಕು ಎಂದು ಅವರು ಹೇಳಿದರು.

ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ– ಡಿಡಿಪಿಐ

‘ಪೂರಕ ಪರೀಕ್ಷೆಯ ನಂತರ ಜಿಲ್ಲೆಗೆ ಶೇ 90ರಷ್ಟು ಫಲಿತಾಂಶ ಬಂದಿದೆ. ಒಟ್ಟು 35 ಸಾವಿರ ವಿದ್ಯಾರ್ಥಿಗಳಲ್ಲಿ 31 ಸಾವಿರ ಮಂದಿ ಪಾಸಾಗಿದ್ದಾರೆ. ಪೂರಕ ಪರೀಕ್ಷೆಯಲ್ಲಿ 9 ಸಾವಿರ ವಿದ್ಯಾರ್ಥಿಗಳಿಗೆ 6 ಸಾವಿರ ವಿದ್ಯಾರ್ಥಿಗಳು ಪಾಸಾದರು. ಮೊದಲ ಸ್ಥಾನದಲ್ಲಿ ಅನುದಾನ ರಹಿತ ಶಾಲೆಗಳು, 2ನೇ ಸ್ಥಾನದಲ್ಲಿ ಸರ್ಕಾರಿ ಶಾಲೆಗಳು ಹಾಗೂ 3ನೇ ಸ್ಥಾನದಲ್ಲಿ ಅನುದಾನಿತ ಶಾಲೆಗಳಿವೆ. ಇದಕ್ಕೆ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ನಡೆಯದೇ ಇರುವುದೇ ಪ್ರಮುಖ ಕಾರಣ ಎಂದು ಡಿಡಿಪಿಐ ಡಾ.ಪಾಂಡುರಂಗ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT