ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಕೆರೆಗೆ ಹಾರಿದ ಭಾಮೈದನನ್ನು ರಕ್ಷಿಸಲು ಹೋಗಿ ಇಬ್ಬರು ಸಾವು

ಆಟೊ ಕೊಡಿಸಲು ಮಗ ಬಲವಂತ: ಬುದ್ಧಿ ಹೇಳಿದರೂ ಕೇಳಲಿಲ್ಲ
Last Updated 4 ನವೆಂಬರ್ 2020, 2:08 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಕೆರೆಗೆ ಹಾರಿ ಮುಳುಗುತ್ತಿದ್ದ ಭಾಮೈದನನ್ನು ರಕ್ಷಿಸಲು ಹೋಗಿ ಭಾವ ಹಾಗೂ ಭಾಮೈದ ಇಬ್ಬರೂ ಮೃತಪಟ್ಟ ಘಟನೆ ತಾಲ್ಲೂಕಿನ ಅಣ್ಣೂರು ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ರಾಜಣ್ಣ ಅವರ ಮಗ ಪ್ರಸನ್ನ (24) ಹಾಗೂ ಮಹಾದೇವಪ್ಪ ಅವರ ಮಗ ನಿಂಗರಾಜು (34) ಮೃತಪಟ್ಟವರು.

ತನ್ನ ಭಾಮೈದನನ್ನು ರಕ್ಷಣೆ ಮಾಡಲು ಹೋಗಿ ಭಾವನು ಸಹ ಮೃತನಾಗಿದ್ದರಿಂದ ಎರಡೂ ಕುಟುಂಬದವರಿಗೆ ಆಸರೆಯಾಗಿದ್ದವರೇ ಇಲ್ಲದಂತಾಗಿದೆ.

ಘಟನೆ ವಿವರ: ಪ್ರಸನ್ನ ಸೋಮವಾರ ರಾತ್ರಿ ಮನೆಯಲ್ಲಿ ತನ್ನ ತಾಯಿಯ ಬಳಿ ನನಗೆ ಆಟೊ ಕೊಡಿಸಿ ಎಂದು ಕೇಳಿದ್ದಾನೆ. ಅದಕ್ಕೆ ತಾಯಿ ಸದ್ಯಕ್ಕೆ ಯಾವುದೇ ಹಣ ಇಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪದ ಮಗ ತಾಯಿ ಜೊತೆ ಜಗಳ ಮಾಡಿದ್ದಾನೆ. ನಂತರ ಮನೆಯಲ್ಲಿ ಇದ್ದ ಟಿ.ವಿ ಹಾಗೂ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಅದೇ ಊರಿನಲ್ಲಿ ಇದ್ದ ತನ್ನ ಮಗಳ ಮನೆಗೆ ಹೋಗಿ ಮಗನಿಗೆ ಬುದ್ಧಿ ಹೇಳುವಂತೆ ಅಳಿಯನಿಗೆ ವಿಚಾರ ತಿಳಿಸಿದ್ದಾರೆ

ಮನೆಗೆ ಬಂದ ಅಳಿಯ ನಿಂಗರಾಜು ಭಾಮೈದನಿಗೆ ಬುದ್ಧಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪ್ರಸನ್ನ, ‘ನಿಮ್ಮ ಜೊತೆ ಇರುವುದಕ್ಕಿಂತ ಸಾಯುವುದೇ ಮೇಲು’ ಎಂದು ಹೇಳಿ, ಮನೆಯಿಂದ ಹೊರ ಹೋಗಿದ್ದಾನೆ.

ಮನೆ ಎದುರಿನಲ್ಲೇ ಇದ್ದ ಕೆರೆಗೆ ಹೋಗಿ ಹಾರಿದ್ದಾನೆ. ಭಾಮೈದನನ್ನು ಹಿಂಬಾಲಿಸಿದ ಭಾವ ಆತನನ್ನು ರಕ್ಷಣೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ವಿಚಾರ ತಿಳಿದು ಗ್ರಾಮಸ್ಥರು ಬಂದಿದ್ದಾರೆ. ಅಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಗ್ರಾಮಸ್ಥರು ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಯಿ ತನ್ನ ಮಗ ಮತ್ತು ಅಳಿಯ ಇಬ್ಬರೂ ಹೋದರು ಎಂದು ಎದೆ ಬಡಿದುಕೊಂಡು ಅಳುತ್ತಿದ್ದರೆ, ಅವರ ಮಗಳು, ತನ್ನ ಪತಿ ಹಾಗೂ ಸಹೋದರ ಇಬ್ಬರು ಹೋದರು ನಮಗ್ಯಾರು ದಿಕ್ಕು ಎಂದು ಗೋಳಾಡುತ್ತಿದ್ದರು. ಇವರ ರೋದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರೆಲ್ಲ ಎರಡೂ ಕುಟುಂಬಗಳಿಗೆ ಆಸರೆಯೇ ಇಲ್ಲದಾಯಿತು ಎಂದು ಮರುಗುತ್ತಿದ್ದರು.

ಬೈಕ್‌ನಿಂದ ಬಿದ್ದು ಯುವಕ ಸಾವು

ನಂಜನಗೂಡು: ಬೈಕ್ ಸವಾರ ನಿಯಂತ್ರಣ ತಪ್ಪಿ ನಗರದ ಚಾಮರಾಜನಗರ ಬೈಪಾಸ್ ರಸ್ತೆಯ ಹೈಟೆಕ್ ಕೆ.ಎಸ್‍.ಆರ್‌.ಟಿ.ಸಿ ಬಸ್ ನಿಲ್ದಾಣ ಮುಂಭಾಗ ಕಿರುನಾಲೆಗೆ ಸೋಮವಾರ ತಡರಾತ್ರಿ ಉರುಳಿ ಬಿದ್ದು ಮೃತಪಟ್ಟಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಸೋಮೇಗೌಡ ಪುತ್ರ ಪ್ರದೀಪ್ (25) ಮೃತ ಯುವಕ.

ನಗರದ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್, ಸೋಮವಾರ ಸಂಜೆ ಶ್ರೀರಂಗಪಟ್ಟಣದಲ್ಲಿರುವ ಸ್ನೇಹಿತನನ್ನು ಭೇಟಿ ಮಾಡಿ ರಾತ್ರಿ 11 ಗಂಟೆ ಸುಮಾರಿನಲ್ಲಿ ನಗರಕ್ಕೆ ಬರುವ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ.

ಬೈಕ್ ನಿಯಂತ್ರಣ ತಪ್ಪಿ ಹಳ್ಳದಲ್ಲಿನ ನಾಲೆಗೆ ಬಿದ್ದಿದ್ದರಿಂದ ರಾತ್ರಿ ವೇಳೆ ಯಾರೂ ಗಮನಿಸಿಲ್ಲ. ಹೀಗಾಗಿ ನಿತ್ರಾಣಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು ಮಂಗಳವಾರ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸಿಪಿಐ ಲಕ್ಷ್ಮಿಕಾಂತ ತಳವಾರ್, ನಗರ ಠಾಣೆ ಪಿ.ಎಸ್‍.ಐ ರವಿಕುಮಾರ್, ಸಂಚಾರಿ ಪಿಎಸ್‌ಐ ಜಯಲಕ್ಷ್ಮಮ್ಮ ಭೇಟಿ ನೀಡಿ ಪರಿಶೀಲಿಸಿದರು.

ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT