ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಪೊಲೀಸ್‌ ಬ್ಯಾಂಡ್‌ ನಿನಾದ

ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆ
Last Updated 23 ಅಕ್ಟೋಬರ್ 2020, 3:22 IST
ಅಕ್ಷರ ಗಾತ್ರ

ಮೈಸೂರು: ಹೊಂಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದ ಅರಮನೆಯ ಆವರಣದಲ್ಲಿ ಅಲೆ ಅಲೆಯಾಗಿ ತೇಲಿ ಬಂದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆಗೆ ಶೋತೃಗಳು ಮನಸೋತರು.

ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಗುರುವಾರ ರಾತ್ರಿ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವಾದ ಪೊಲೀಸ್‌ ಬ್ಯಾಂಡ್‌ ಸಮೂಹ ವಾದ್ಯಮೇಳದಲ್ಲಿ, ಶಿಸ್ತುಬದ್ಧವಾಗಿ ನುಡಿಸಿದ ಪೊಲೀಸ್ ವಾದ್ಯವೃಂದ ಜನಮೆಚ್ಚುಗೆ ಗಳಿಸಿತು.

ಮೊದಲಿಗೆ ಬಸಪ್ಪಶಾಸ್ತ್ರಿ ರಚನೆಯ 'ಕಾಯೋ ಶ್ರೀ ಗೌರಿ' ಗೀತೆಯನ್ನು ನುಡಿಸಲಾಯಿತು. ನಂತರ ಜಯಚಾಮರಾಜೇಂದ್ರ ಒಡೆಯರ್ ರಚನೆಯ, ಆಠಾಣ ರಾಗ ಸಂಯೋಜನೆಯ ಆದಿತಾಳದಲ್ಲಿ 'ಶ್ರೀ ಮಹಾಗಣಪತಿಂ' ಗೀತೆ ನುಡಿಸಿದರು.

ಬಳಿಕ ಇಮ್ಯಾನುಯೆಲ್‌ ಫ್ರಾನ್ಸಿಸ್‌ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್‌, ಪಿಯಾನೋ ವಾದನಕ್ಕೆ ಪ್ರೇಕ್ಷಕರು ಪರವಶರಾದರು.

ಕರ್ನಾಟಕ ವಾದ್ಯವೃಂದದವರು ಆದಿಶಂಕರಚಾರ್ಯರು ರಚಿಸಿದ 'ಐಗಿರಿ ನಂದಿನಿ' ಗೀತೆಯನ್ನು ಪುನ್ನಾಗವರಾಳಿ ರಾಗ ಸಂಯೋಜನೆಯ ಆದಿತಾಳದಲ್ಲಿ ಪ್ರಸ್ತುತ ಪಡಿಸಿದರು.

ಆಪ್ತಮಿತ್ರ ಚಲನಚಿತ್ರದ ಗೀತೆಯಾದ 'ಕಣಕಾಣೆದೆ ಶಾರದೆ' ಹಾಡು ಹಾಗೂ ಶಂಕರಾಭರಣ ರಾಗದಲ್ಲಿ ಮುತ್ತತ್ಯಭಾಗವತ್ ರಚನೆಯ 'ನೋಟು ಸ್ವರ' ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆ ನುಡಿಸುವ ಮೂಲಕ ಮೋಡಿ ಮಾಡಿದರು.

ಆಂಗ್ಲ ವಾದ್ಯ ವೃಂದವರು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕಾಂಟ್ ಡೌನ್, ಕೃಷ್ಟೋಫರ್ ಫ್ರಾನ್ಸಿಸ್ ಸಂಯೋಜನೆಯ ಸೆರನಡ್ ಗೀತೆ, ಬಿಥೊವೆನ್ಸ್ ಪಿಯಾನೋ ಸೋಲೊ, ಜಯ ಹೋ', ಟೋನಿ ಮ್ಯಾಥ್ಯೂ ಸಂಯೋಜನೆಯ ಬಿಲಿವರ್ ಹಾಗೂ ಲೇ ಆನ್ ಯುವರ್ ಲವ್ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಹಲವಾರು ಸುಪ್ರಸಿದ್ಧ ಕೃತಿಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ ಹಾಗೂ ಆಂಗ್ಲ ವಾದ್ಯವೃಂದವರಿಗೆ ನೆರೆದಿದ್ದ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT