ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಿಕ್ಷಣ ಕೇಂದ್ರಕ್ಕೆ ಸಂಗೀತ ವಿ.ವಿ ಮಾನ್ಯತೆ

ಸಂಗೀತ ವಿಶ್ವವಿದ್ಯಾಲಯ ಜತೆ ಮೈಸೂರು ರಂಗಾಯಣ ಒಡಂಬಡಿಕೆ
Last Updated 7 ನವೆಂಬರ್ 2020, 2:09 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣದ ರಂಗ ತರಬೇತಿ ಕೇಂದ್ರ ಎನಿಸಿರುವ ಭಾರತೀಯ ರಂಗಶಿಕ್ಷಣ ಕೇಂದ್ರವು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲ ಯದ ಮಾನ್ಯತೆ ಪಡೆದುಕೊಂಡಿದೆ.

ಇಷ್ಟು ವರ್ಷ ಹಂಪಿ ವಿಶ್ವವಿದ್ಯಾಲಯದ ಮಾನ್ಯತೆಯಡಿ ಕೋರ್ಸ್‌ಗಳನ್ನು ನಡೆಸುತ್ತಿದ್ದ ರಂಗಶಿಕ್ಷಣ ಕೇಂದ್ರ 2020–21ನೇ ಸಾಲಿನಿಂದ ಸಂಗೀತ ವಿ.ವಿಯ ಮಾನ್ಯತೆಯಡಿ ರಂಗ ತರಬೇತಿ ನೀಡಲಿದೆ.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಸಂಗೀತ ವಿ.ವಿ. ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅವರು ಶುಕ್ರವಾರ ಈ ಕುರಿತ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಬಳಿಕ ಮಾತನಾಡಿದ ಅಡ್ಡಂಡ ಸಿ.ಕಾರ್ಯಪ್ಪ, ‘ನಮ್ಮ ಮಾನ್ಯತೆ ಹಂಪಿ ವಿ.ವಿಯಲ್ಲಿ ಇದ್ದ ಕಾರಣ ಪರಸ್ಪರ ಸಂವಹನ ಕಷ್ಟವಾಗುತ್ತಿತ್ತು. ಸಂಬಂಧಪಟ್ಟವರ ಜತೆ ಕರೆ ಮಾಡಿ ಮಾತನಾಡುವುದು ಮತ್ತು ಅನಿವಾರ್ಯ ಕೆಲಸಗಳಿಗೆ ಅಷ್ಟು ದೂರ ಪ್ರಯಾಣಿಸುವುದು ಸುಲಭವಲ್ಲ. ಆದ್ದರಿಂದ ಮೈಸೂರಿನಲ್ಲಿರುವ ವಿ.ವಿಯ ಮಾನ್ಯತೆ ಪಡೆಯುವುದು ನಮ್ಮ ಉದ್ದೇಶವಾಗಿತ್ತು’ ಎಂದರು.

‘ಸಂಗೀತ ವಿ.ವಿಯ ಮಾನ್ಯತೆ ಪಡೆಯುವ ಸಂಬಂಧ ಬೆಟ್ಟಕೋಟೆ ಅವರನ್ನು ಭೇಟಿಯಾದೆವು. ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ವರ್ಷದಿಂದ ಸಂಗೀತ ವಿ.ವಿಯ ಮಾನ್ಯತೆಯಡಿ ಕೋರ್ಸ್‌ ನಡೆಯಲಿದೆ’ ಎಂದರು.

‘ನಾನು ಕಳೆದ ಡಿಸೆಂಬರ್‌ನಲ್ಲಿ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡೆ. ರಂಗಾಯಣದ ಅತಿ ಮುಖ್ಯ ಭಾಗವಾಗಿರುವ ಭಾರತೀಯ ರಂಗ ಶಿಕ್ಷಣ ಕೇಂದ್ರವನ್ನು ನಡೆಸುತ್ತಿರುವವರಲ್ಲಿ ಶಿಸ್ತಿನ ಕೊರತೆ ಇದೆ ಎಂದು ನನಗೆ ಅನಿಸುತ್ತಿತ್ತು. ಆದ್ದರಿಂದ ಮೊದಲು ಶಿಸ್ತು ತರುವ ಕೆಲಸ ಮಾಡಿದೆ’ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಮಾತನಾಡಿ, ‘ಕೊಲೆ, ಸುಲಿಗೆ, ಭ್ರಷ್ಟಾಚಾರವನ್ನು ತಡೆಯುವ ಕೆಲಸ ರಂಗಭೂಮಿಯಿಂದ ಆಗಬೇಕು ಎಂದು ನನಗನಿಸುತ್ತದೆ. ಸಮಾಜದಲ್ಲಿ ಪ್ರೀತಿ ಉಳಿಯಬೇಕಾದರೆ ರಂಗಭೂಮಿ ಇರಬೇಕು. ರಂಗಭೂಮಿಯಿಂದಾಗಿ ಪ್ರೇಕ್ಷಕರಲ್ಲಿ ಕಲ್ಪನಾಶಕ್ತಿ ಉಳಿದುಕೊಂಡಿದೆ’ ಎಂದು ತಿಳಿಸಿದರು.

ನಾಗೇಶ್‌ ವಿ.ಬೆಟ್ಟಕೋಟೆ, ರಂಗಾ ಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ರಂಗಶಿಕ್ಷಣ ಕೇಂದ್ರದ ಮುಖ್ಯಸ್ಥ ಎಸ್‌.ರಾಮನಾಥ, ರಂಗಾಯಣದ ಕಲಾವಿದರು ಇದ್ದರು.‌

ವಿದ್ಯಾರ್ಥಿಗಳಿಗೆ ಸ್ವಾಗತ

2020–21ನೇ ಸಾಲಿನ ರಂಗಶಾಲೆಯ ಪ್ರಾರಂಭೋತ್ಸವ ನಡೆಯಿತು. ಈ ಬಾರಿ ತರಬೇತಿಗೆ ಆಯ್ಕೆಯಾದ 20 ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

200 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 60 ಮಂದಿಯನ್ನು ಸಂದರ್ಶನಕ್ಕೆ ಕರೆದಿದ್ದವು. ಅಂತಿಮವಾಗಿ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಜುಲೈನಲ್ಲಿ ಆರಂಭವಾಗಬೇಕಿದ್ದ ಶಾಲೆ ಕೋವಿಡ್‌ 19 ಕಾರಣ ಮೂರು ತಿಂಗಳು ತಡವಾಗಿ ಪ್ರಾರಂಭವಾಗುತ್ತಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ಮಾಹಿತಿ ನೀಡಿದರು.

‘ನಮ್ಮದು ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ಆಗಿದೆ. ಅದನ್ನು ಎರಡನೇ ವರ್ಷಕ್ಕೆ ಮುಂದುವರಿಸುವ ಚಿಂತನೆ ಇದೆ. ಎರಡನೇ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ರಂಗ ಪ್ರವಾಸ, ಹೊಸ ರಂಗ ತಂಡ ಹೇಗೆ ಕಟ್ಟಬಹುದು ಮತ್ತು ಹೊಸ ನಾಟಕ ನಿರ್ದೆಶನದ ಬಗ್ಗೆ ಕಲಿಸುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT