ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಕಳ್ಳರ ಹಾವಳಿ

ಶುಕ್ರವಾರ, ಏಪ್ರಿಲ್ 26, 2019
21 °C
ಎರಡು ಆಸ್ಪತ್ರೆಗಳಲ್ಲಿನ ರೋಗಿಗಳಿಂದ ಚಿನ್ನಾಭರಣ ಕಳವು

ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಕಳ್ಳರ ಹಾವಳಿ

Published:
Updated:

ಮೈಸೂರು: ನಗರದ ಆಸ್ಪತ್ರೆಗಳ ಸ್ಕ್ಯಾನಿಂಗ್ ಕೇಂದ್ರಗಳಿಗೆ ತಪಾಸಣೆಗೆಂದು ಬರುವ ರೋಗಿಗಳ ಚಿನ್ನಾಭರಣಗಳ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಒಟ್ಟು 2 ಆಸ್ಪತ್ರೆಗಳಲ್ಲಿ ಇಂತಹ ಕೃತ್ಯಗಳು ನಡೆದಿವೆ.

ಸ್ಕ್ಯಾನಿಂಗ್ ಮಾಡಿಸುವಾಗ ಮೈಮೇಲಿನ ಮೇಲಿನ ಚಿನ್ನಾಭರಣಗಳನ್ನು ತೆಗೆಯುವುದು ಅನಿವಾರ್ಯ. ಈ ವೇಳೆ ಚಿನ್ನಾಭರಣಗಳನ್ನು ಪರ್ಸಿನಲ್ಲಿ ಅಥವಾ ಜೇಬಿನಲ್ಲಿ ಹಾಕಿರುವಾಗ ರೋಗಿಯ ಹಾಗೂ ಅವರ ಸಂಬಂಧಿಕರಿಂದ ಕಳ್ಳರು ಸುಲಭವಾಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಾರೆ. ಹೀಗಾಗಿ, ಸಾಧ್ಯವಾದಷ್ಟು ರೋಗಿಗಳು ಆಸ್ಪತ್ರೆಗೆ ಬರುವಾಗ ಚಿನ್ನಾಭರಣಗಳನ್ನು ಮನೆಯಲ್ಲೇ ತೆಗೆದಿರಿಸಬೇಕು, ಇಲ್ಲವೇ ಅವುಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.‌

ಘಟನೆಗಳ ವಿವರ:‌ ಕೆ.ಆರ್.ಆಸ್ಪತ್ರೆಯ ಸ್ಕ್ಯಾನಿಂಗ್ ಕೇಂದ್ರದಲ್ಲಿ ಮಂಜುಳಾ ಅವರು ತಮ್ಮ ಸೋದರಿ ಶಾರದಾ ಅವರೊಂದಿಗೆ ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದರು. ತಂತ್ರಜ್ಞರ ಸೂಚನೆ ಮೇರೆಗೆ ತಾವು ಧರಿಸಿದ್ದ 8 ಗ್ರಾಂ ತೂಕದ ಚಿನ್ನದ ಮತ್ತು ಹರಳು ಹೊಂದಿದ ಒಂದು ಜತೆ ಚಿನ್ನದ ಓಲೆ, 6 ಗ್ರಾಂ ತೂಕದ ಎರಡು ಚಿನ್ನದ ಕಾಸು, 6 ಗ್ರಾಂ ತೂಕದ ತಾಳಿ ಮತ್ತು 3 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳನ್ನು ಒಳಗೊಂಡ ಸರ ಮತ್ತು ₹ 1 ಸಾವಿರ ನಗದನ್ನು ತಮ್ಮ ಬಳಿ ಇದ್ದ ಬ್ಯಾಗಿನಲ್ಲಿ ಹಾಕಿ ಸೋದರಿ ಶಾರದಾ ಅವರಿಗೆ ನೀಡಿದ್ದರು.

ಸ್ಕ್ಯಾನಿಂಗ್ ಕೇಂದ್ರ ಒಳಗೆ ಶಾರದಾ ಅವರು ಹೋಗಬೇಕಾದ ಪರಿಸ್ಥಿತಿ ಬಂದಾಗ ಅವರು ಬ್ಯಾಗನ್ನು ವೈದ್ಯ ಎಂದು ಹೇಳಿಕೊಂಡ ವ್ಯಕ್ತಿ ಕುಳಿತಿದ್ದ ಟೇಬಲ್ ಮೇಲಿಟ್ಟು ಕೇಂದ್ರದ ಒಳಗೆ ಹೋಗಿ ವಾಪಸ್ ಬಂದಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿನ ನಾರಾಯಣ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಲು ಹೋದ ವ್ಯಕ್ತಿಯೊಬ್ಬರು ತಮ್ಮ 30 ಗ್ರಾಂ ತೂಕದ ಚಿನ್ನದ ಸರವನ್ನು ಜೇಬಿನಲ್ಲಿಟ್ಟುಕೊಂಡಿದ್ದರು. ಈ ವೇಳೆ ಅವರ ಗಮನ ಬೇರೆಡೆ ಸೆಳೆದ ವ್ಯಕ್ತಿಯೊಬ್ಬ ಸರವನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉದಯಗಿರಿ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !