ಶನಿವಾರ, ಜನವರಿ 25, 2020
19 °C

ಗಲಭೆಗೆ ಕಾಂಗ್ರೆಸ್‌ ಹೊಣೆ: ಪ್ರತಾಪ ಸಿಂಹ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುವ ಹೆಸರಿನಲ್ಲಿ ರಾಜ್ಯದಾದ್ಯಂತ ಗಲಭೆ ಸೃಷ್ಟಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಇಬ್ಬರ ಸಾವಿಗೆ ಶಾಸಕ ಯು.ಟಿ.ಖಾದರ್‌ ನೇರ ಹೊಣೆ’ ಎಂದು ಸಂಸದ ಪ್ರತಾಪ ಸಿಂಹ ಆರೊಪಿಸಿದರು.

‘ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಖಾದರ್‌ ಅವರು ‘ರಾಜ್ಯದಾದ್ಯಂತ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಯಿಂದ ಅಂತಹ ಮಾತು ಬಂದದ್ದು ಅವರ ಬೆಂಬಲಿಗರಿಗೆ ಗಲಭೆ ನಡೆಸಲು ಕುಮ್ಮಕ್ಕು ಕೊಟ್ಟಂತಾಗಿದೆ. ಖಾದರ್‌ ಅವರ ಚಿತಾವಣೆಯಿಂದ ಇಬ್ಬರು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಕಾಂಗ್ರೆಸ್‌ಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನಿಜವಾದ ಕಾಳಜಿಯಿದ್ದರೆ ಖಾದರ್‌ ನಡೆದುಕೊಂಡ ರೀತಿಯನ್ನು ಖಂಡಿಸಬೇಕಿತ್ತು. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು’ ಎಂದು ಹರಿಹಾಯ್ದರು.

‘ನಿಷೇಧಾಜ್ಷೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟುಮಾಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್‌ ಪಕ್ಷ ಹೊಣೆ’ ಎಂದರು.

‘ಮೈಸೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪದೇ ಪದೇ 144 ಸೆಕ್ಷನ್‌ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರಿನಲ್ಲೂ ಗಲಭೆ ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

‘ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯು ಮುಸ್ಲಿಮರ ವಿರುದ್ಧವಾಗಿಲ್ಲ. ಯಾರನ್ನೂ ಈ ದೇಶದಿಂದ ಹೊರಗೆ ದಬ್ಬುತ್ತಿಲ್ಲ. ಈ ವಿಷಯವನ್ನು ರಾಜ್ಯದ ಎಲ್ಲ ಮುಸ್ಲಿಂ ‌ಸಹೋದರ, ಸಹೋದರಿಯರು ಅರ್ಥಮಾಡಿಕೊಳ್ಳಬೇಕು. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು