ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಉದ್ಯೋಗದ ಆಮಿಷವೊಡ್ಡಿ ₹ 48 ಲಕ್ಷ ವಂಚಿಸಿದ್ದ ಮೂವರು ಸೆರೆ

ಆರೋಪಿಗಳಿಂದ ₹ 24 ಲಕ್ಷ ನಗದು ವಶ: ಎಸ್‌ಪಿ ಆರ್‌.ಚೇತನ್‌ ಮಾಹಿತಿ
Last Updated 8 ಜುಲೈ 2022, 13:21 IST
ಅಕ್ಷರ ಗಾತ್ರ

ಮೈಸೂರು: ಉದ್ಯೋಗದ ಆಮಿಷವೊಡ್ಡಿ ಸುಮಾರು ₹ 48 ಲಕ್ಷ ವಂಚಿಸಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಸೈಬರ್‌, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಠಾಣೆ ಪೊಲೀಸರು ಬಂಧಿಸಿ, ಆರೋಪಿಗಳಿಂದ ₹ 24 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, 11 ಸಿಮ್‌ ಕಾರ್ಡ್, 2 ಲ್ಯಾಪ್‌ಟಾಪ್ ಹಾಗೂ 3 ಕಚೇರಿ ಸೀಲುಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

‘ಕೋವಿಡ್‌ನಿಂದ ಕೆಲಸ ಕಳೆದುಕೊಂಡ ಮೈಸೂರಿನ ಸಾತಗಳ್ಳಿಯವರಾದ ದೂರುದಾರರು, ಆನ್‌ಲೈನ್‌ನಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿ ಎಮಿನೆಂಟ್‌ ಕಂಪನಿಯೆಂಬ ವೆಬ್‌ಸೈಟ್‌ನಲ್ಲಿ 2020ರ ನವೆಂಬರ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಕರೆ ಮಾಡಿದ ಆರೋಪಿಗಳು ವಿವಿಧ ಹಂತಗಳಲ್ಲಿ ₹ 48,80,200 ಹಣವನ್ನು ಪಡೆದಿದ್ದರು. ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರಾರಂಭದಲ್ಲಿ ₹ 1 ಸಾವಿರ ಹಣ ಕೇಳಿದ ಆರೋಪಿಗಳು. ನಂತರ ಒಂದೂವರೆ ವರ್ಷದಲ್ಲಿ ದೂರುದಾರ ಬ್ಯಾಂಕ್‌ ಖಾತೆಯಿಂದ ಹಣವನ್ನು ಪಡೆದಿದ್ದಾರೆ. ಉದ್ಯೋಗವೂ ನೀಡದೆ, ಹಣವನ್ನು ಹಿಂದುರಿಗಿಸದಿದ್ದಾಗ ಜೂನ್‌ 29ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್‌ ಶಬ್ಬೀರ್‌ ಹುಸೇನ್‌ ನೇತೃತ್ವದ ತಂಡವು ತನಿಖೆ ನಡೆಸಿ, ಜುಲೈ 5ರಂದು ಆರೋಪಿಗಳನ್ನು ಬಂಧಿಸಿ, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

‘ವಂಚನೆಗೊಳಗಾದ ವ್ಯಕ್ತಿ ಡಿಪ್ಲೊಮಾ ಓದಿದ್ದಾರೆ. ಅವರನ್ನು ವಾರ್ಷಿಕ ₹ 8 ಲಕ್ಷ ಸಂಬಳದ ಉದ್ಯೋಗ ಕೊಡಿಸುವುದಾಗಿ ಆರೋಪಿಗಳು ನಂಬಿಸಿದ್ದರು. ರಾಜ್ಯದ ವಿವಿಧೆಡೆಯ ಹಲವು ಉದ್ಯೋಗಾಕಾಂಕ್ಷಿಗಳಿಗೂ ವಂಚನೆ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಯನ್ನು ಬಂಧಿಸಲಾಗುವುದು. ವಂಚನೆಗೊಳಗಾದ ವ್ಯಕ್ತಿಗಳನ್ನೂ ಪತ್ತೆ ಹಚ್ಚಲಾಗುವುದು’ ಎಂದು ತಿಳಿಸಿದರು.

ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೆನ್‌ ಠಾಣೆಯ ಇನ್‌ಸ್ಪೆಕ್ಟರ್‌ ಶಬ್ಬೀರ್‌ ಹುಸೇನ್‌, ಮಹೇಶ, ಎಸ್‌.ಮಂಜುನಾಥ್‌, ಬಿ.ವಿ.ಮಂಜುನಾಥ, ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT