ಶುಕ್ರವಾರ, ಅಕ್ಟೋಬರ್ 18, 2019
20 °C
ತಿ.ನರಸೀಪುರದಲ್ಲಿ ಪ್ರತಾಪ ಸಿಂಹ ವಿರುದ್ಧ ಪ್ರತಿಭಟನೆ

ದಲಿತ ಮುಖಂಡರ ಬಂಧನ, ಬಿಡುಗಡೆ

Published:
Updated:
Prajavani

ತಿ.ನರಸೀಪುರ: ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿದ ಸಂಸದ ಪ್ರತಾಪ ಸಿಂಹ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರನ್ನು ಶನಿವಾರ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಂಘಟನೆಗಳ ಒಕ್ಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಸ್‌ಗಳಲ್ಲಿ ಹೊರಟಿದ್ದ  ನೂರಾರು ಕಾರ್ಯಕರ್ತರನ್ನು ಪೊಲೀಸರು ತಡೆದರು. ಇದರಿಂದ ಸಿಟ್ಟಿಗೆದ್ದ ದಲಿತ ಸಂಘಟನೆಗಳ ಮುಖಂಡರು, ಕಾರ್ಯ ಕರ್ತರು, ಮೈಸೂರು ಮುಖ್ಯರಸ್ತೆಯ ಸೇತುವೆ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪೊಲೀಸರ ಮನವಿಗೆ ಸ್ಪಂದಿಸದ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ‘ಸಮುದಾಯಗಳ ನಡುವೆ ಸಂಘರ್ಷದ ಕಿಡಿ ಹಚ್ಚುತ್ತಿರುವ ಹಾಗೂ ಪೊಲೀಸರನ್ನು ನಿಂದಿಸಿರುವ ಸಂಸದ ಪ್ರತಾಪ ಸಿಂಹ ಅವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಗೂಂಡಾ ವರ್ತನೆ ತೋರುತ್ತಿರುವ ಇವರಿಗೆ ಸರ್ಕಾರವೇ ಬೆಂಬಲಕ್ಕೆ ನಿಂತಿದೆ’ ಎಂದು ಆರೋ‍ಪಿಸಿದರು.

‘ಪ್ರತಾಪ ಸಿಂಹ ಅವರು ಪ್ರಗತಿಪರರು, ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾ ಡುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾತನಾಡಿದವರ ಮೇಲೆ ದೇಶದ್ರೋಹ, ಮತ್ತಿತರ ಕಾರಣಗಳನ್ನು ನೀಡಿ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕುಕ್ಕೂರು ರಾಜು, ಸೋಸಲೆ ನಂಜುಂಡಯ್ಯ, ಬನ್ನಹಳ್ಳಿ ಸೋಮಣ್ಣ, ಎಡದೊರೆ ಮಹದೇವ, ಕುಮಾರ, ಯರಗನಹಳ್ಳಿ ಸುರೇಶ, ಬಸವರಾಜು, ನಾಗರಾಜು, ರಾಚಪ್ಪ, ಕೃಷ್ಣಮೂರ್ತಿ, ಶಶಿ ಮತ್ತಿತರರು ಭಾಗವಹಿಸಿದ್ದರು.

Post Comments (+)